ಶಿಕ್ಷಣ ಕ್ಷೇತ್ರಕ್ಕೆ ಪಿಕಳೆ ದಂಪತಿ ಕೊಡುಗೆ ಅಪಾರ - ಡಾ.ಪ್ರಭಾಕರ ಕೋರೆ

010306
Published on

ಬೆಳಗಾವಿ: ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗಾಗಿ ಭೂ ದಾನ ನೀಡಿದವರಲ್ಲಿ ವಿಶೇಷವಾಗಿ ಗುರುತಿಸಲ್ಪಡುವ ಶಿಕ್ಷಣ ಪ್ರೇಮಿಗಳಾದ ಶೇಷಗಿರಿ ಪಿಕಳೆ ಹಾಗೂ ಅವರ ಪತ್ನಿ ಪ್ರೇಮಾ ಪಿಕಳೆ ಕೊಡುಗೆ ಅಪಾರವಾದುದು. ಬದುಕು ಸವೆಸಿ ಶಿಕ್ಷಣ ಸಂಸ್ಥೆ ಕಟ್ಟಿದ ಅವರ ಪರಿಶ್ರಮ ಮಾದರಿಯಾದುದು ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.

ಅಂಕೋಲಾ ಕೆಎಲ್‌ಇ ಸಂಸ್ಥೆಯ ಕಾಲೇಜಿನಲ್ಲಿ ಭಾನುವಾರ ಪ್ರೇಮಾತಾಯಿ ಪಿಕಳೆ ಅವರ ಶಿಷ್ಯವೃಂದ ನಿರ್ಮಿಸಿದ ಪ್ರೇಮಾತಾಯಿ ಪಿಕಳೆ ಅವರ ಕಂಚಿನ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದ ಅವರು, ಉತ್ತರಕನ್ನಡ ಬುದ್ಧಿವಂತರ ಜಿಲ್ಲೆ ಎನಿಸಿಕೊಂಡಿದ್ದು, ಕೆಎಲ್‌ಇ ಸಂಸ್ಥೆಯ ಬೆಳವಣಿಗೆಯಲ್ಲಿ ಅಪಾರ ಕೊಡುಗೆ ನೀಡುತ್ತಿದೆ.

ಜನಸಾಮಾನ್ಯರಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು. ಪ್ರತಿಕುಟುಂಬ ಸಾಕ್ಷರತೆಯಲ್ಲಿ ಮುಂದಿರಬೇಕು ಎನ್ನುವ ಪಿಕಳೆ ದಂಪತಿಗಳ ಆಶಯ-ನಂಬಿಕೆ ಉಳಿಸಿಕೊಳ್ಳುವ ಕಾರ್ಯ ಸದಾ ಮಾಡುತ್ತೇವೆ. ಕೆಎಲ್‌ಇ ಸಂಸ್ಥೆಯಿಂದ ಶೇಷಗಿರಿ ಪಿಕಳೆ ಅವರ ಪುತ್ಥಳಿಯನ್ನೂ ನಿರ್ಮಿಸಲಾಗುವುದು. ಶಿಕ್ಷಣ ಕ್ಷೇತ್ರದಲ್ಲಿ ಪಿಕಳೆ ದಂಪತಿ ಹೆಸರು ಅಜರಾಮರವಾಗಿಸುವ ನಿಟ್ಟಿನಲ್ಲಿ ಸಂಸ್ಥೆಯ ಬಿ.ಇಡಿ ಕಾಲೇಜಿಗೆ ಶೇಷಗಿರಿ ಪಿಕಳೆ ಹಾಗೂ ನಸಿರ್ಂಗ್ ಕಾಲೇಜಿಗೆ ಪ್ರೇಮಾ ಪಿಕಳೆ ಅವರ ಹೆಸರನ್ನಿಟ್ಟು ಗೌರವ ಸಲ್ಲಿಸಲಾಗುವುದು ಎಂದರು.

ಅತಿಥಿಯಾಗಿ ಆಗಮಿಸಿದ್ದ ಸಾಹಿತಿ ಶಾಂತಾರಾಮ ನಾಯಕ ಹಿಚ್ಕಡ ಮಾತನಾಡಿ, ಶಿಕ್ಷಣದಿಂದ ವಂಚಿತರಾಗಿದ್ದ ಸಮಯದಲ್ಲಿ ಸಂಸ್ಥೆ ಕಟ್ಟಿ ಅಪಾರ ಜನರಿಗೆ ಶಿಕ್ಷಣ ಧಾರೆ ಎರೆದ ಕೀರ್ತಿ ಪ್ರೇಮಾ ತಾಯಿ ಪಿಕಳೆ ಅವರಿಗೆ ಸಲ್ಲುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಕಾರ್ಯದರ್ಶಿ ಡಾ.ಡಿ.ಎಲ್. ಭಟ್ಕಳ ಮಾತನಾಡಿ, ಕೆಎಲ್‌ಇ ಸಂಸ್ಥೆಯೊಂದಿಗೆ ಎನ್‌ಎಸ್‌ಎಸ್ ಟ್ರಸ್ಟ್ ವಿಲೀನಗೊಳಿಸಿದ ನಂತರ ಸಂಸ್ಥೆಯನ್ನು ಬೆಳೆಸಿ ಪಿಕಳೆ ದಂಪತಿ ಹೆಸರು ಅಜರಾಮರವಾಗಿಸುವ ನಿಟ್ಟಿನಲ್ಲಿ ಡಾ.ಪ್ರಭಾಕರ ಕೋರೆ ಅವರ ಮಾರ್ಗದರ್ಶನದಲ್ಲಿ ಕೆಎಲ್‌ಇ ಸಂಸ್ಥೆ ಸಮರ್ಥ ಕಾರ್ಯ ಮಾಡುತ್ತಿದೆ ಎಂದರು. ಪಿಕಳೆ ಶಿಷ್ಯ ವೃಂದದ ಅಧ್ಯಕ್ಷ ನಾರಾಯಣ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕ ಸತೀಶ ಸೈಲ್, ಸಂಯೋಜಕರಾದ ದೇವರಾಯ ನಾಯಕ, ರಾಜೇಶ ನಾಯಕ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net