ಶಿಕ್ಷಣ ಕ್ಷೇತ್ರಕ್ಕೂ ಪದಾರ್ಪಣೆಗೆ ಸಿದ್ಧತೆ

Nagmarpalli hospital
Published on

ಬೀದರ್: ಮೆಡಿಕಲ್, ನರ್ಸಿಂಗ್ ಸೇರಿ ವಿವಿಧ ವೃತ್ತಿಪರ ಕೋಸ್೯ಗಳ ಜತೆಗೆ ಶಾಲಾ-ಕಾಲೇಜು ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಬರುವ ದಿನಗಳಲ್ಲಿ ಆಸ್ಪತ್ರೆ ಜತೆಗೆ ಶಿಕ್ಷಣ ಕ್ಷೇತ್ರದ ಮೂಲಕವೂ ಜಿಲ್ಲೆ ಜನರಿಗೆ ಸೇವೆ ಸಲ್ಲಿಸಲಾಗುವುದು ಎಂದು ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸುಪರ್ ಸ್ಪೆಷಾಲಿಟಿ ಸಹಕಾರ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಪ್ರಕಟಿಸಿದರು.
ನಗರದಲ್ಲಿರುವ ಆಸ್ಪತ್ರೆ ಕೇಂದ್ರ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 2022-23ರ ಗುರುಪಾದಪ್ಪ ನಾಗಮಾರಪಳ್ಳಿ ಸಹಕಾರ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಮುಂದಿನ 24 ತಿಂಗಳಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ವಿವಿಧ ಶಾಲಾ-ಕಾಲೇಜು ಆರಂಭಿಸಲು ಉದ್ದೇಶಿಸಲಾಗಿದೆ ಎಂದರು.
ಈಗಾಗಲೇ ಬಿಎಸ್ಸಿ ನರ್ಸಿಂಗ್ ಕಾಲೇಜು ಆರಂಭಿಸಲು ಅನುಮತಿ ದೊರೆತಿದೆ. ಇತರ ಶಾಲಾ-ಕಾಲೇಜುಗಳ ಅನುಮತಿ ಪಡೆಯುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಮುಂದಿನ ದಿನಗಳಲ್ಲಿ ಗುರುಪಾದಪ್ಪ ನಾಗಮಾರಪಳ್ಳಿ ವಿಶ್ವವಿದ್ಯಾಲಯ ಸಹ ಸ್ಥಾಪಿಸುವುದಾಗಿ ಘೋಷಿಸಿದರು.
ಸಹಕಾರ ಕ್ಷೇತ್ರದ ಮೊದಲ ಸುಪರ್ ಸ್ಪೆಷಾಲಿಟಿ ಆಸ್ಪತ್ರೆ ಎಂಬ ಹೆಗ್ಗಳಿಕೆಯ ಗುರುಪಾದಪ್ಪ ನಾಗಮಾರಪಳ್ಳಿ ಆಸ್ಪತ್ರೆ ಆರೋಗ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿದೆ. ದಿ. ಡಾ.ಗುರುಪಾದಪ್ಪ ನಾಗಮಾರಪಳ್ಳಿ ಆಶಯದಂತೆ ರೈತರು, ಜನಸಾಮಾನ್ಯರ ಆರೋಗ್ಯ ರಕ್ಷಣೆಗೆ ಶ್ರಮಿಸುತ್ತಿದೆ. ಹೊಸ ಹೊಸ ಚಿಕಿತ್ಸಾ ಸಾಧನ, ಉಪಕರಣಗಳ ವ್ಯವಸ್ಥೆ ಮಾಡಲಾಗಿದೆ. ಅತ್ಯಲ್ಪ ವೆಚ್ಚದಲ್ಲಿ ಅತ್ಯುತ್ತಮ ಚಿಕಿತ್ಸೆ ಮೂಲಕ ಜಿಲ್ಲೆ ಜನರ ಪ್ರಶಂಸೆಗೆ ಪಾತ್ರವಾಗಿದೆ. ಆಡಳಿತ ಮಂಡಳಿ ಸಹಕಾರದೊಂದಿಗೆ ಆಸ್ಪತ್ರೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಕಾರ್ಯ ಮುಂದುವರಿಯಲಿದೆ ಎಂದು ಹೇಳಿದರು.
ಚಿಕಿತ್ಸಾ ವೆಚ್ಚದಲ್ಲಿ ಶೇರುದಾರರಿಗೆ ಶೇ.10-20, ಹಿರಿಯ ನಾಗರಿಕರಿಗೆ ಶೇ.10 ರಿಯಾಯಿತಿ ನೀಡಲಾಗುತ್ತಿದೆ. ನಗರ ಪ್ರದೇಶದ ವ್ಯಾಪ್ತಿಯಲ್ಲಿ ರೋಗಿಗಳಿಗೆ ಉಚಿತವಾಗಿ ದಿನದ 24 ತಾಸು ಸೇವೆ ಲಭ್ಯವಿದೆ ಎಂದರು.
ನಿರ್ದೇಶಕರಾದ ಸಿದ್ರಾಮ ಡಿ.ಕೆ., ಡಾ.ಚಂದ್ರಕಾಂತ ಗುದಗೆ, ಡಾ.ರಜನೀಶ್ ವಾಲಿ, ಡಾ.ವಿಜಯಕುಮಾರ ಕೋಟೆ, ಸಂತೋಷ ತಾಳಂಪಳ್ಳಿ, ರಾಮದಾಸ ತುಳಸಿರಾಮ, ಉದಯ ಹಲವಾಯಿ, ಅಶೋಕ ರೇಜಂತಲ್, ವಿಜಯಲಕ್ಷ್ಮೀ ಹೂಗಾರ, ನಿಜಪ್ಪ ಪತ್ರಿ, ಆಕಾಶ ಪಾಟೀಲ್, ಸೈಯದ್ ಖುಝಿರಿಲ್ಲ, ಜೈಕುಮಾರ ಕಾಂಗೆ, ಅನೀಲ ಬೆಲ್ದಾರ, ಸಿಇಒ ಕೃಷ್ಣಾರಡ್ಡಿ, ಆಡಳಿತಾಧಿಕಾರಿ ಡಾ.ದೀಪಕ ಚೋಕ್ಡಾ, ಎನ್ಎಸ್ಎಸ್ಕೆ ನಿರ್ದೇಶಕ ಶಂಕರ ಪಾಟೀಲ್, ನರಸಾರಡ್ಡಿ, ಮಾಧವರಾವ್ ಪಾಟೀಲ್ ಇತರರಿದ್ದರು.

ನಾಗಮಾರಪಳ್ಳಿ ಆಸ್ಪತ್ರೆಗೆ ರೂ.8 ಲಕ್ಷ ಲಾಭ
2022-23ರಲ್ಲಿ ಗುರುಪಾದಪ್ಪ ನಾಗಮಾರಪಳ್ಳಿ ಆಸ್ಪತ್ರೆಗೆ 8 ಲಕ್ಷ ರೂ. ಲಾಭವಾಗಿದೆ ಎಂದು ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಹೇಳಿದರು. ಆಸ್ಪತ್ರೆ ಆರಂಭವಾದಾಗಿನಿಂದ ಈವರೆಗೆ 2,40,000 ಲಕ್ಷಕ್ಕೂ ಅಧಿಕ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ದಿ. ಡಾ.ಗುರುಪಾದಪ್ಪ ನಾಗಮಾರಪಳ್ಳಿ ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆದಿದ್ದು, ಆರಂಭದಿಂದ ಈವರೆಗೆ 16484 ಎಂಆರ್ಐ, 12277 ಸಿಟಿ ಸ್ಕ್ಯಾನ್, 12545 ಎಕ್ಸ್ರೇ, 19303 ಯುಎಸ್ಜಿ, 3866 ಇಸಿಜಿ, 74146 ಲ್ಯಾಬ್, 82171 ಒಪಿಡಿ, 12563 ಐಪಿಡಿ, 4203 ಶಸ್ತ್ರಚಿಕಿತ್ಸೆ ಮಾಡುವ ಮುಖಾಂತರ ಸೇವೆ ಒದಗಿಸಿದ್ದೇವೆ. ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಮತ್ತು ಸ್ಟಾರ್ ಹೆಲ್ತ್ ಇನ್ಶೂರೆನ್ಸ್, ಯಶಸ್ವಿನಿ ಅಡಿಯೂ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net