

ಮೈಸೂರು: ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸಲು ಒಂದೇ ಒಂದು ಯೋಜನೆ ಘೋಷಿಸದಿರುವುದು ಮತ್ತು ಶಿಕ್ಷಣ ಕ್ಷೇತ್ರಕ್ಕೆ ನೀಡುವ ಅನುದಾನದಲ್ಲಿ ಕಡಿಮೆಗೊಳಿಸಿರುವುದು ಸಾರ್ವಜನಿಕ ಶಿಕ್ಷಣದ ಮೇಲಿನ ದಾಳಿ ಎಂದು ಎಐಡಿಎಸ್‌ಒ ಆಕ್ರೋಶ ವ್ಯಕ್ತಪಡಿಸಿದೆ.
ದೇಶದ ಬಹುಪಾಲು ಜನರು ಸಾರ್ವಜನಿಕ ಶಿಕ್ಷಣವನ್ನು ಸುಧಾರಿಸಬೇಕು ಮತ್ತು ಬಲಪಡಿಸಬೇಕೆಂದು ಬಯಸುತ್ತಾರೆ. ದೇಶದಲ್ಲಿ ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸಲು ಒಂದೇ ಒಂದು ಯೋಜನೆಯನ್ನೂ ಘೋಷಿಸಿಲ್ಲ.
ಶಿಕ್ಷಣ ವಲಯಕ್ಕೆ ನೀಡಿರುವ ಬಜೆಟ್, ಈ ಹಿಂದೆ ಕೇಂದ್ರ ಸರ್ಕಾರಗಳು ಘೋಷಿಸಿದ ಬಜೆಟ್‌ಗೆ ಅನುಗುಣವಾಗಿದೆ. ಇದು ಶಿಕ್ಷಣ ಕ್ಷೇತ್ರವನ್ನು ಸುಧಾರಿಸುವ ನಿರ್ದಿಷ್ಟ ಕ್ರಮಗಳಿಗಿಂತ ಹೆಚ್ಚಾಗಿ ಘೋಷಣೆಗಳಿಂದ ತುಂಬಿದೆ ಎಂದು ಜಿಲ್ಲಾ ಕಾರ್ಯದರ್ಶಿ ನಿತಿನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿಕ್ಷಣ ವಲಯಕ್ಕೆ ಹಂಚಿಕೆಯಾಗಿರುವ 1,28,600 ಕೋಟಿ ರೂ., ಒಟ್ಟು ಬಜೆಟ್‌ನ ಶೇ.2.6ಕ್ಕಿಂತ ಕಡಿಮೆ ಇದೆ. ಹಲವಾರು ತಜ್ಞರು ಶಿಕ್ಷಣಕ್ಕೆ ಕನಿಷ್ಠ ಶೇ.10ರಷ್ಟು ಅನುದಾನ ಮೀಸಲಿಡಬೇಕೆಂದು ಶಿಫಾರಸು ಮಾಡಿದ್ದಾರೆ.
ಆದರೆ, ಇದು ಅದಕ್ಕಿಂತಲೂ ಕಡಿಮೆ ಇದೆ. ಪ್ರಸ್ತುತ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಎನ್‌ಇಪಿ-2020 ಸಹ ಶಿಕ್ಷಣಕ್ಕೆ ಕೇಂದ್ರ ಬಜೆಟ್‌ನ ಶೇ.6ರಷ್ಟು ಮೀಸಲಿಡಲು ಶಿಫಾರಸು ಮಾಡುತ್ತದೆ.
ಈ ವರ್ಷ ಮೀಸಲಿಟ್ಟಿರುವ ಶೇ.2.6ರಷ್ಟು ಮೊತ್ತವು ಹಿಂದಿನ ವರ್ಷಗಳಲ್ಲಿ ಮೀಸಲಿಟ್ಟ ಬಜೆಟ್‌ಗಿಂತ ಬಹಳ ಕಡಿಮೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.