

ಕಲಬುರಗಿ: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಇಎ) ನಡೆಸಿದ ಪರೀಕ್ಷಾ ಹಗರಣಗಳಿಂದ ಲಕ್ಷಾಂತರ ವಿದ್ಯಾರ್ಥಿಗಳು, ಪಾಲಕರು ಆತಂಕಕ್ಕೆ ಒಳಗಾಗಿದ್ದಲ್ಲದೆ ಶಿಕ್ಷಣದ ಕೇಂದ್ರೀಕರಣ ಖಂಡಿಸಿ ಮತ್ತು ಕೇಂದ್ರ ಶಿಕ್ಷಣ ಮಂತ್ರಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಸಿಪಿಎಂ ಕಾರ್ಯಕರ್ತರು ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಶಿಕ್ಷಣದ ಕೇಂದ್ರೀಕರಣ, ವಾಣಿಜ್ಯೀಕರಣ ಮತ್ತು ಕೋಮುವಾದ ಪ್ರತಿಪಾದಿಸುವ ಎನ್‌ಇಪಿ-೨೦೨೦ ಅನ್ನು ಪಕ್ಷ ಬಲವಾಗಿ ವಿರೋಧಿಸುತ್ತದೆ. ಕೇಂದ್ರೀಕೃತ ಪರೀಕ್ಷೆ ಮತ್ತು ಶಿಕ್ಷಣ ವ್ಯವಸ್ಥೆ ಕೇಂದ್ರೀಕರಣದ ಎಲ್ಲ ಉಪಕ್ರಮಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು. ಜು.೧ರಿಂದ ಜಾರಿಗೆ ಬಂದಿರುವ ಜನವಿರೋಧಿ ಕ್ರಿಮಿನಲ್ ಕಾನೂನು ವಾಪಸ್ ಪಡೆಯಬೇಕು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾದ ನಂತರ ದೇಶದ ವಿವಿಧೆಡೆ ಮುಸ್ಲಿಮರಿಗೆ ಸೇರಿದ ಜೀವ, ಜೀವನೋಪಾಯ ಮತ್ತು ಆಸ್ತಿಗಳ ಮೇಲೆ ನಡೆಯುತ್ತಿರುವ ಭೀಕರ ದಾಳಿ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ, ಶಾಂತಾ ಘಂಟಿ, ರಾಜ್ಯ ಕಾರ್ಯದರ್ಶಿ ಯು.ಬಸವರಾಜ, ಶ್ರೀಮಂತ ಬಿರಾದಾರ್, ಪಾಂಡುರAಗ ಮಾವಿನಕರ್, ಸುಧಾಮ ಧನ್ನಿ, ಡಾ.ಪ್ರಭು ಖಾನಾಪುರೆ, ಎಂ.ಬಿ. ಸಜ್ಜನ್, ವಿರುಪಾಕ್ಷಪ್ಪ ತಡಕಲ್, ಭೀಮಶೆಟ್ಟಿ ಯಂಪಳ್ಳಿ ಇತರರಿದ್ದರು.