ಶಿಕ್ಷಣ ಇಲಾಖೆ ನಿರ್ದೇಶಕಿಯಾಗಿ ಮಮತಾ ನಾಯಕ

21 Dwd 6 (Mamta Nayak)
Published on

ಧಾರವಾಡ: ಸಾರ್ವಜನಿಕ ಶಿಕ್ಷಣ ಇಲಾಖೆಯ ವಾಯವ್ಯ ಕರ್ನಾಟಕ ಶೈಕ್ಷಣಿಕ ವಲಯದ ಆಯುಕ್ತರ ಕಚೇರಿಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ನೂತನ ನಿರ್ದೇಶಕರಾಗಿ ಕೆಇಎಸ್ ಹಿರಿಯ ಶ್ರೇಣಿ ಅಧಿಕಾರಿ ಮಮತಾ ನಾಯಕ ಶನಿವಾರ ಅಧಿಕಾರ ಸ್ವೀಕರಿಸಿದರು. ಡಾ. ಬಿ.ಕೆ.ಎಸ್. ವರ್ಧನ್ ಅವರ ವರ್ಗಾವಣೆಯಿಂದ ಈ ಹುದ್ದೆ ತೆರವಾಗಿತ್ತು.

1994ರಲ್ಲಿ ಕೆಇಎಸ್ ತೇರ್ಗಡೆಯಾದ ಮಮತಾ, ಉ.ಕ. ಜಿಲ್ಲೆ ಅಂಕೋಲಾ ತಾಲೂಕು ಅಲಗೇರಿ ಸರ್ಕಾರಿ ಪ್ರೌಢಶಾಲೆ ಮುಖ್ಯಾಧ್ಯಾಪಕಿಯಾಗಿ, ನಗರದ ಡಯಟ್ ಉಪನ್ಯಾಸಕರಾಗಿ, ಪದೋನ್ನತಿ ಹೊಂದಿ ಕಾರವಾರ ಬಿಇಒ ಆಗಿ, ನಗರದ ಹೆಚ್ಚುವರಿ ಆಯುಕ್ತರ ಕಚೇರಿಯಲ್ಲಿ ಹಿರಿಯ ಸಹಾಯಕ ನಿರ್ದೇಶಕರಾಗಿ, ಧಾರವಾಡ ಡಯಟ್ ಉಪ ಪ್ರಾಚಾರ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಡಿಡಿಪಿಐ ಹುದ್ದೆಗೆ ಪದೋನ್ನತಿ ಪಡೆದು, ಬೆಳಗಾವಿಯ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ (ಸಿಟಿಇ) ಸಮಾನಾಂತರ ಹುದ್ದೆಯಲ್ಲಿ ರೀಡರ್ ಆಗಿ, ನಗರದ ಹೆಚ್ಚುವರಿ ಆಯುಕ್ತರ ಕಚೇರಿಯಲ್ಲಿ ಮತ್ತು ಹಾವೇರಿ ಜಿಲ್ಲೆಯ ಆಡಳಿತ ಉಪ ನಿರ್ದೇಶಕರಾಗಿ, ಜಂಟಿ ನಿರ್ದೇಶಕರ ಹುದ್ದೆಗೆ ಪದೋನ್ನತಿ ಹೊಂದಿ ಬೆಳಗಾವಿ ಸಿಟಿಇ ಪ್ರಾಚಾರ್ಯ, ಜಂಟಿ ನಿರ್ದೇಶಕರಾಗಿ, ಇಲಾಖೆಯ ನಿರ್ದೇಶಕರ ಹುದ್ದೆಗೆ ಪದೋನ್ನತಿ ಹೊಂದಿ ನಿಕಟಪೂರ್ವದಲ್ಲಿ ಬೆಂಗಳೂರಿನ ರಾಜ್ಯ ಸಾ.ಶಿ. ಇಲಾಖೆ ಆಯುಕ್ತರ ಕಚೇರಿಯಲ್ಲಿ ಪ್ರಾಥಮಿಕ ಶಿಕ್ಷಣ ನಿರ್ದೇಶಕರಾಗಿದ್ದರು.

ಆಯುಕ್ತರ ಕಚೇರಿಯ ನಿರ್ದೇಶಕರ ಹುದ್ದೆಯು ಬೆಳಗಾವಿ ಕಂದಾಯ ವಿಭಾಗದ ವಿಜಯಪುರ, ಬಾಗಲಕೋಟೆ, ಬೆಳಗಾವಿ, ಉತ್ತರಕನ್ನಡ, ಧಾರವಾಡ, ಗದಗ, ಹಾವೇರಿ ಕಂದಾಯ ಜಿಲ್ಲೆಗಳು, ಶಿರಸಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net