ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ

Outrage against education department officials
ಮುದ್ದೇಬಿಹಾಳದ ಬಿಇಒ ಕಚೇರಿ ಎದುರಿಗೆ ವೇತನ ಪಾವತಿಗೆ ಆಗ್ರಹಿಸಿ ಢವಳಗಿ ಬಾಲ ಭಾರತಿ ಶಾಲೆಯ ಶಿಕ್ಷಕರು, ಆಡಳಿತ ಮಂಡಳಿ ಸದಸ್ಯರು ಅನಿರ್ದಿಷ್ಟಾವಧಿ ಧರಣಿ ಕುಳಿತಿರುವುದು.
Published on

ಮುದ್ದೇಬಿಹಾಳ: ಶಿಕ್ಷಣ ಇಲಾಖೆಯ ಅಧಿಕಾರಿಗಳು ನವೆಂಬರ್ 2022ರಿಂದ ಆಗಷ್ಟ್ 2023ರವರೆಗೆ ಹತ್ತು ತಿಂಗಳುಗಳ ಕಾಲ ವೇತನ ಪಾವತಿಸದೇ ನಮ್ಮ ಕುಟುಂಬಗಳು ಸಂಕಷ್ಟದಲ್ಲಿವೆ. ಒಂದು ವೇಳೆ ನಮ್ಮ ಜೀವಕ್ಕೆ ಏನಾದರೂ ಹಾನಿ ಆದರೆ ಅದಕ್ಕೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೇ ಹೊಣೆಗಾರರು ಎಂದು ತಾಲೂಕಿನ ಢವಳಗಿ ಬಾಲಭಾರತಿ ಪ್ರಾಥಮಿಕ ಶಾಲೆಯ ಶಿಕ್ಷಕರು ಹೇಳಿದರು.

ಪಟ್ಟಣದ ಬಿಇಒ ಕಚೇರಿ ಎದುರಿಗೆ ವೇತನ ಬಟವಡೆ ಮಾಡಲು ಆಗ್ರಹಿಸಿ ಗುರುವಾರದಿಂದ ಆರಂಭಿಸಿದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಸ್ಥಳದಲ್ಲಿ ಅವರು ಮಾತನಾಡಿದರು.

ಶಾಲೆಯ ಮುಖ್ಯಶಿಕ್ಷಕ ರಮೇಶ ಮೂಲಿಮನಿ, ಶಿಕ್ಷಕಿ ಜೆ.ಎಸ್. ಪಾಟೀಲ ಮಾತನಾಡಿ, ಸಕಾರಣವಿಲ್ಲದೇ ಶಿಕ್ಷಣ ಇಲಾಖೆಯ ಅಧಿಕಾರಿಗಳು ನಮಗೆ ಬರಬೇಕಾದ 10 ತಿಂಗಳುಗಳ ವೇತನವನ್ನು ಬಟವಡೆ ಮಾಡದೇ ಅನ್ಯಾಯ ಮಾಡುತ್ತಿದ್ದಾರೆ. ಬಸವ ಬಾಲ ಭಾರತಿ ಶಾಲೆಯಲ್ಲಿ ಆರು ಜನ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದೇವೆ. ಹೋರಾಟ ನಡೆಸಲು ಶಾಲೆಯ ಆಡಳಿತ ಮಂಡಳಿಯವರ ಅನುಮತಿ ಪಡೆದುಕೊಂಡಿದ್ದೇವೆ ಎಂದರು.

ಬಾಕಿ ವೇತನ ಕೊಟ್ಟಿಲ್ಲ. ಕೇಳಿದರೆ ಅವರಿಗೆ ಕೇಳಿ, ಇವರಿಗೆ ಕೇಳಿ ಎನ್ನುತ್ತಿದ್ದಾರೆ. ನಮ್ಮ ಕುಟುಂಬ ಜೀವನ ನಿರ್ವಹಣೆ ಹೇಗೆ ಎಂಬುದು ಅಧಿಕಾರಿಗಳಿಗೆ ಅರ್ಥವಾಗುವುದಿಲ್ಲವೇ ? ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾನವೀಯತೆ ಇಲ್ಲದವರಂತೆ ವರ್ತಿಸುತ್ತಿರುವುದು ಖಂಡನೀಯ ಎಂದು ಹರಿಹಾಯ್ದರು.

ಬಸವ ಬಾಲ ಭಾರತಿ ಶಾಲೆಯ ಕಾರ್ಯದರ್ಶಿ ಜಿ.ಎಸ್. ಕೋರಿ, ಸದಸ್ಯ ಗುರುನಾಥಗೌಡ ಬಿರಾದಾರ ಮಾತನಾಡಿ, ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಈ ಶಾಲೆಯ ಎಲ್ಲ ವಿಷಯ ಗೊತ್ತಿದ್ದರೂ ಗೊತ್ತಿಲ್ಲದವರಂತೆ ಜಾಣ ಮರೆವು ತೋರುತ್ತಿದ್ದಾರೆ. ಶಾಸಕರು ಶಿಕ್ಷಕರ ವೇತನ ಪಾವತಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರೂ ಅದಕ್ಕೆ ಸ್ಪಂದನೆ ಸಿಕ್ಕಿಲ್ಲ. ಇಲಾಖೆಯಲ್ಲಿರುವ ನೌಕರರು ಉದ್ದೇಶಪೂರ್ವಕವಾಗಿ ಯಾರದ್ದೋ ಪ್ರಭಾವಕ್ಕೆ ಒಳಗಾಗಿ ವೇತನ ಪಾವತಿಗೆ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ದೂರಿದರು.

ಈ ಸಂದರ್ಭದಲ್ಲಿ ಶಿಕ್ಷಕರಾದ ಬಿ.ಎಸ್. ಪಾಟೀಲ, ಎಸ್.ಬಿ. ಬಿರಾದಾರ, ಹರಿನಾಥ ಎನ್., ಎಸ್.ಎಸ್. ಅವಟಿ, ಆಡಳಿತ ಮಂಡಳಿ ಸದಸ್ಯರಾದ ಮಲ್ಲಿಕಾರ್ಜುನ ಸಿದರೆಡ್ಡಿ, ಎಂ.ಜಿ. ಬಿರಾದಾರ(ಬಾಂಬೆಗೌಡ), ಎಸ್.ಎಸ್. ಪಾಟೀಲ ಇತರರಿದ್ದರು.

ಪ್ರಭಾರ ಬಿಇಒ ಧರಿಕಾರ ಸಂಧಾನ ವಿಫಲ
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ ಅಹೋರಾತ್ರಿಯವರೆಗೆ ಧರಣಿ ಸತ್ಯಾಗ್ರಹ ನಡೆಸುವ ವಿಷಯ ತಿಳಿದು ಪ್ರಭಾರ ಬಿಇಒ ಯು.ಬಿ. ಧರಿಕಾರ ಪ್ರತಿಭಟನಾ ನಿರತ ಶಿಕ್ಷಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಶಾಲೆಯ ಶಿಕ್ಷಕರ ವೇತನ ಬಟವಡೆಯ ಮಾಹಿತಿ ಪರಿಶೀಲನೆಗೆ ಕಾಲಾವಕಾಶ ನೀಡಲು ಕೋರಿದರಲ್ಲದೇ ಧರಣಿ ಅಂತ್ಯಗೊಳಿಸಲು ವಿನಂತಿಸಿದರು. ಆದರೆ ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಹೋರಾಟ ನಿರತ ಶಿಕ್ಷಕರು, ತಾಲೂಕಿನಲ್ಲಿಯೇ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ತಮಗೆ ಈ ವಿಷಯ ತಮ್ಮ ಗಮನಕ್ಕೆ ಇದ್ದರೂ ಏನು ಗೊತ್ತೇ ಇಲ್ಲದವರಂತೆ ಮಾತನಾಡುತ್ತಿರುವುದು ಸರಿಯಲ್ಲ. ಲಿಖಿತವಾಗಿ ವೇತನ ಮಾಡುವುದಾಗಿ ಉತ್ತರ ನೀಡಿದರೆ ಧರಣಿ ಅಂತ್ಯಗೊಳಿಸುವುದಾಗಿ ಹೇಳಿದರು. ಆದರೆ ಇದಕ್ಕೆ ಬಿಇಒ ಹಿಂದೇಟು ಹಾಕಿದರೂ ಕಚೇರಿ ವ್ಯವಸ್ಥಾಪಕ ಪಾಟೀಲ ಲಿಖಿತ ಉತ್ತರ ನೀಡುವುದಾಗಿ ಹೇಳಿ ಕಚೇರಿಯೊಳಕ್ಕೆ ಹೋದರು. ಕೆಲವು ಗಂಟೆಗಳ ಬಳಿಕ ಧರಣಿ ನಿರತರ ಬಳಿ ಬಂದು ಅಧಿಕಾರಿಗಳು ಲಿಖಿತ ಪತ್ರ ನೀಡಲು ಮುಂದಾದರು. ಆದರೆ ಆ ಪತ್ರದಲ್ಲಿ ವೇತನ ಬಟವಡೆಯ ಬಗ್ಗೆ ಸ್ಪಷ್ಟ ಉತ್ತರ ಇಲ್ಲದ್ದರಿಂದ ಪತ್ರ ಪಡೆದುಕೊಳ್ಳಲು ಹೋರಾಟ ನಿರತರು ನಿರಾಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net