ಶಿಕ್ಷಕಿ ವರ್ಗಾವಣೆ ರದ್ದಿಗೆ ಆಗ್ರಹ

Demand for cancellation of transfer of teacher
ದೇವರಹಿಪ್ಪರಗಿ ತಾಲೂಕು ಪಡಗಾನೂರ ಗ್ರಾಮದ ವೆಂಕಟೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು ವರ್ಗಾವಣೆಗೊಂಡ ವಿಜ್ಞಾನ ಶಿಕ್ಷಕಿಯನ್ನು ಮರಳಿ ನೇಮಿಸುವಂತೆ ಒತ್ತಾಯಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದರು.
Published on

ದೇವರಹಿಪ್ಪರಗಿ: ಶಾಲೆಯಲ್ಲಿ ಈ ಹಿಂದೆ ಇದ್ದ ಶಿಕ್ಷಕಿಯನ್ನೇ ನೇಮಿಸಬೇಕು ಎಂದು ಒತ್ತಾಯಿಸಿ ತಾಲೂಕಿನ ಪಡಗಾನೂರ ಗ್ರಾಮದ ವೆಂಕಟೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು ಬುಧವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.

ಏಕಾಏಕಿ ವಿದ್ಯಾರ್ಥಿಗಳು ಪ್ರೌಢಶಾಲೆಯಿಂದ 2 ಕಿಮೀ ದೂರದ ಹೆದ್ದಾರಿಗೆ ಪಾದಯಾತ್ರೆ ಮೂಲಕ ಬಂದು ಪ್ರತಿಭಟನೆಗೆ ಮುಂದಾದರು. ಈ ಸಮಯದಲ್ಲಿ ಮುಖ್ಯಶಿಕ್ಷಕರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳ ಮನವೊಲಿಸಲು ಪ್ರಯತ್ನಿಸಿದರೂ ಯಾರು ಸ್ಪಂದಿಸಲಿಲ್ಲ. ವಿದ್ಯಾರ್ಥಿಗಳ ಪ್ರತಿಭಟನೆ ವಿಷಯ ತಿಳಿದ ತಹಸೀಲ್ದಾರ್ ಪ್ರಕಾಶ ಸಿಂದಗಿ ಸ್ಥಳಕ್ಕೆ ಆಗಮಿಸಿ ಮನವಲಿಸಲು ಪ್ರಯತ್ನಿಸಿದರೂ ವಿಫಲವಾಯಿತು.

ಆಗ ತಹಸೀಲ್ದಾರ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರ ಜತೆ ಮಾತನಾಡಲು ಹಲವು ಬಾರಿ ಪ್ರಯತ್ನಿಸಿದರು. ಆದರೆ ಅವರ ಮೊಬೈಲ್ ಸ್ವಿಚ್‌ಆಫ್ ಆಗಿತ್ತು. ನಂತರ ಬಿಇಒ ಅವರೊಂದಿಗೆ ಮಾತನಾಡಿದರಾದರೂ ಸಹ ಅವರು ಸ್ಥಳಕ್ಕೆ ಬರಲಿಲ್ಲ. ಕೊನೆಗೆ ತಹಸೀಲ್ದಾರ್ ಶಾಲೆಯಿಂದ ವರ್ಗಾವಣೆಗೊಂಡಿದ್ದ ವಿಜ್ಞಾನ ವಿಷಯ ಶಿಕ್ಷಕಿಯನ್ನು ಸಂಪರ್ಕಿಸಿ ಸ್ಥಳಕ್ಕೆ ಬರುವಂತೆ ಸೂಚಿಸಿದರು.

ಶಿಕ್ಷಕಿ ಬಂದು ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಅವರ ಮನವೊಲಿಸಿದರು. ವಿದ್ಯಾರ್ಥಿಗಳು ಇವರನ್ನೇ ನಮ್ಮ ಶಾಲೆಗೆ ಪುನಃ ನೇಮಿಸಬೇಕು ಎಂದು ಕಣ್ಣೀರು ಹಾಕಿದರು.

ವಿದ್ಯಾರ್ಥಿಗಳಾದ ಪ್ರೀತಿ ಚೋರಗಸ್ತಿ, ಕುಸುಮಾ ಡೆಂಗಿ, ದಾನಮ್ಮಾ ಬಿರಾದಾರ, ವೀಣಾ ನಾಯಿಕ್, ಸಂಗೀತಾ ಚವ್ಹಾಣ, ದೀಪಾ ರಾಠೋಡ, ಅಶ್ವಿನಿ ಜಾಧವ, ಲಕ್ಷ್ಮೀ ಬುದ್ನಿಮಠ, ಪ್ರೇಮಾ ಬಿರಾದಾರ, ಕಾವೇರಿ ಚಿಗರಿ, ಮೇಘಾ ಚಿಗರಿ ಇತರರು ಪ್ರತಿಭಟನೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net