ಶಿಕ್ಷಕರು ವೈಚಾರಿಕ ಹಿನ್ನೆಲೆ ಬೆಳೆಸಿಕೊಳ್ಳಿ

19rajesh3
Published on

ಚಾಮರಾಜನಗರ: ಪ್ರಸ್ತುತ ಸಂದರ್ಭದಲ್ಲಿ ವೈಚಾರಿಕ ಹಿನ್ನೆಲೆಯ ಶಿಕ್ಷಕರು ಸಮಾಜಕ್ಕೆ ಅಗತ್ಯವಾಗಿದೆ ಎಂದು ಮೈಸೂರು ಮಹಾರಾಜ ಕಾಲೇಜು ಪ್ರಾಧ್ಯಾಪಕ ಡಾ.ಬಿಪಿನ್ ನಾಗರಾಜು ಸಲಹೆ ನೀಡಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಮತ್ತು ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತಮಾಡಿದರು.

ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಶಿಕ್ಷಕರು ಕಂದಾಚಾರ, ಮೌಢ್ಯಕ್ಕೆ ಸಿಲುಕಿಕೊಂಡರೇ ಸಮಾಜ ದಿಕ್ಕು ತಪ್ಪುವ ಸಂಭವವಿರುತ್ತದೆ. ಆಗಾಗಿ ಶಿಕ್ಷಕರು ವೈಚಾರಿಕೆ ಮನೋಭಾವನೆಯನ್ನು ಬೆಳೆಸಿಕೊಳ್ಳುವುದು ಅಗತ್ಯವಾಗಿದೆ. ಇಡೀ ಸಮಾಜವನ್ನು ಶಿಕ್ಷಕರು ಸೃಷ್ಟಿ ಮಾಡುತ್ತಾರೆ. ಆದರೇ ಶಿಕ್ಷಕರು ದಿಕ್ಕು ತಪ್ಪಿದರೇ, ಇಡೀ ಸಮಾಜವೇ ದಿಕ್ಕು ತಪ್ಪುತ್ತದೆ. ಇಂತಹ ಸಂದರ್ಭದಲ್ಲಿ ಮೆರವಣಿಗೆಗಿಂತಲೂ ಶಿಕ್ಷಕರಿಗೆ ಬರವಣಿಗೆ ಆದರ್ಶವಾಗಬೇಕು ಎಂದು ಹೇಳಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಹೆಣ್ಣುಮಕ್ಕಳು ಹಾಗೂ ಮೂಲನಿವಾಸಿಗಳಿಗೆ ಶಿಕ್ಷಣವನ್ನು ನಿಷೇಧ ಮಾಡಲಾಗಿತ್ತು. ಮಹಾರಾಷ್ಟ್ರದಲ್ಲಿ ನಡೆದ ಕೋರೆಗಾಂವ್ ಯುದ್ಧದಿಂದಾಗಿ ಲಾರ್ಡ್ ಮೆಕಾಲೆ ಸಾರ್ವತ್ರಿಕ ಶಿಕ್ಷಣವನ್ನು ಜಾರಿಗೆತಂದರು. ಇದರಿಂದ ಶಿಕ್ಷಕಿತರಾದ ಮಹಾತ್ಮ ಜ್ಯೋತಿ ಬಾುಲೆ ಮತ್ತು ಸಾವಿತ್ರಿ ಬಾುಲೆ ಶಿಕ್ಷಣವನ್ನು ಪಡೆದುಕೊಂಡರು. ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಸರ್ವರಿಗೂ ಶಿಕ್ಷಣವನ್ನು ಮುಕ್ತಗೊಳಿಸಿದರು ಎಂದು ತಿಳಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದ ಸರ್ವಪಲ್ಲಿ ರಾಧಾಕೃಷ್ಣನ್ ಅವರು ರಾಷ್ಟ್ರಪತಿಯಾಗಿದ್ದರು. ಅವರ ಜನುಮ ದಿನದ ನೆನಪಿನಲ್ಲಿ ದೇಶದಾದ್ಯಂತ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಆಚರಣೆಗಿಂತಲೂ ಮಹನೀಯರ ಅನುಸರಣೆ ಬಹುಮುಖ್ಯವಾಗುತ್ತದೆ. ಪ್ರಸ್ತುತ ಸಮಾಜದಲ್ಲಿ ಶಿಕ್ಷಕರ ಮೇಲೆ ಹಲ್ಲೆಗಳು ನಡೆಯುತ್ತಿರುವುದು ಅತ್ಯಂತ ಖಂಡನೀಯ ಎಂದರು.

ಕಾರ್ಯಕ್ರಮದಲ್ಲಿ ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಚ್.ವಿ.ಚಂದ್ರು, ನಗರಸಭಾ ಸದಸ್ಯ ಎಂ.ಮಹೇಶ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಚಂದ್ರಪಾಟೀಲ್, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಹನುಮಶೆಟ್ಟಿ, ಬಿಆರ್‌ಸಿ ರಾಜೀವ್, ವಿವಿಧ ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

ಭಾವಚಿತ್ರ ಮೆರವಣಿಗೆ:

ನಗರದ ಪೇಟೆ ಪ್ರೈಮರಿ ಶಾಲಾ ಆವರಣದಲ್ಲಿ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸರ್ವಪಲ್ಲಿ ರಾಧಕೃಷ್ಣನ್ ಹಾಗೂ ಸಾವಿತ್ರಿ ಬಾುಲೆ ಭಾವಚಿತ್ರ ಮೆರವಣಿಗೆಗೆ ಡಿಡಿಪಿಐ ಎಸ್.ಚಂದ್ರಪಾಟೀಲ್ ಚಾಲನೆ ನೀಡಿದರು. ಬಳಿಕ ಅಲ್ಲಿಂದ ಹೊರಟ ಮೆರವಣಿಗೆ ಶ್ರೀಭವನೇಶ್ವರಿ ವೃತ್ತ, ರಥದ ಬೀದಿ, ದೊಡ್ಡಂಗಡಿ ಬೀದಿ, ಗುಂಡ್ಲುಪೇಟೆ ವೃತ್ತ, ಸುಲ್ತಾನ್ ಷರ್ೀ ವೃತ್ತ, ಸತ್ತಿರಸ್ತೆ ಮಾರ್ಗವಾಗಿ ವೇದಿಕೆ ಕಾರ್ಯಕ್ರಮ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಅಂತ್ಯವಾಯಿತು. ಮೆರವಣಿಗೆಯಲ್ಲಿ ಡೊಳ್ಳುಕುಣಿತ ಹಾಗೂ ಕಂಸಾಳೆ ಕಲಾವಿದರು ಭಾಗವಹಿಸಿದ್ದರು. ಶಿಕ್ಷಕರು ಮೆರವಣಿಗೆಯಲ್ಲಿ ಜಾನಪದ ಕುಣಿತದಲ್ಲಿ ಭಾಗವಹಿಸುವ ಮೂಲಕ ಸಂಭ್ರಮಿಸಿದರು. ಇದಕ್ಕೂ ಮುನ್ನಾ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಶ್ರೀಬಸವೇಶ್ವರರ ಪ್ರತಿಮೆಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ನೇತೃತ್ವದಲ್ಲಿ ಶಿಕ್ಷಕರು ಮಾಲಾರ್ಪಣೆ ಮಾಡಿದರು.

ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ:

ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಕಿರಿಯ, ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆ ವಿಭಾಗದ 15 ಶಿಕ್ಷಕರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಕಿರಿಯ ಪ್ರಾಥಮಿಕ ಶಾಲೆ ವಿಭಾಗದಲ್ಲಿ ಶಿಕ್ಷಕರಾದ ಶಿವಮಲ್ಲು, ಜಿ.ವಿ.ಕಲಾಶ್ರೀ, ಸಿ.ಮಂಗಳಗೌರಿ, ಜಿ.ಜಯರಾಮ್ ಮತ್ತು ಜಿ.ಗೀತಾ, ಹಿರಿಯ ಪ್ರಾಥಮಿಕ ಶಾಲೆ ವಿಭಾಗದಲ್ಲಿ ಶಿಕ್ಷಕರಾದ ಮಾಲಿನಿ, ಬಿ.ಎನ್.ವೃಷಭೇಂದ್ರ, ರೂಪ, ಆರ್.ಮುತ್ತುಸ್ವಾಮಿ, ಆರ್.ಮಮತಾ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಎನ್.ನಾಗೇಶ್, ವೆಂಕಟೇಶ್, ಸಲ್ಮಾ ಸಿದ್ದಿಕ್, ಕೆ.ಎಂ.ಮಧುಸೂದನ್ ಮತ್ತು ಬ್ರಹ್ಮಲಿಂಗಯ್ಯ ಅವರನ್ನು ಸನ್ಮಾನಿಸಲಾಯಿತು. ಬಳಿಕ ನಿವೃತ್ತ ಶಿಕ್ಷಕರು ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಶಿಕ್ಷಕರನ್ನು ಬಹುಮಾನ ವಿತರಿಸಿ ಸನ್ಮಾನಿಸಲಾಯಿತು.

ಕಲ್ಲುಬಂಡೆಗಳನ್ನು ಶಿಲೆಯಾಗಿಸುವ ಶಕ್ತಿ ಶಿಕ್ಷಕರಿಗೆ ಇದೆ. ಶಿಕ್ಷಕರ ವೃತ್ತಿ ಅತ್ಯಂತ ಮಹತ್ವದ ಹುದ್ದೆಯಾಗಿದೆ. ಶಿಕ್ಷಕರು ಉತ್ತಮವಾದ ವ್ಯಕ್ತಿಗಳನ್ನು ರೂಪಿಸುವ ಮೂಲಕ ಸಮಾಜಕ್ಕೆ ತನ್ನದೇಯಾದ ಕೊಡುಗೆ ನೀಡುತ್ತಾರೆ. ರಾಷ್ಟ್ರಪತಿಯಾಗಿದ್ದರೂ ಉತ್ತಮ ಶಿಕ್ಷಕರಾಗಿದ್ದ ಡಾ.ರಾಧಕೃಷ್ಣನ್ ಹಾಗೂ ಮಹಿಳೆಯರಿಗೆ ಶಿಕ್ಷಣ ದೊರೆಯುವಂತೆ ಮಾಡಿದ ಸಾವಿತ್ರಿ ಬಾುಲೆ ಪ್ರತಿಯೊಬ್ಬರಿಗೂ ಆದರ್ಶವಾಗಬೇಕು.

-ಸಿ.ಪುಟ್ಟರಂಗಶೆಟ್ಟಿ, ಶಾಸಕ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net