ಶಿಕ್ಷಕರು ವೃತ್ತಿ ಧರ್ಮ ಅನುಸರಿಸಲಿ

mysore
Published on

ಮೈಸೂರು: ಶಿಕ್ಷಕರು ವೃತ್ತಿ ಧರ್ಮವನ್ನು ಅನುಸರಿಸಬೇಕು ಎಂದು ವಾತ್ಸಲ್ಯ ಶಿಕ್ಷಣ ಮಹಾವಿದ್ಯಾಲಯದ ಶೈಕ್ಷಣಿಕ ಸಂಯೋಜಕ ಡಾ.ಎಂ.ಆರ್. ಜಯಪ್ರಕಾಶ್ ಹೇಳಿದರು.

ನಟರಾಜ ಪ್ರತಿಷ್ಠಾನದ ವಾತ್ಸಲ್ಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ದ್ವಿತೀಯ ಬಿ.ಇಡಿ ಪ್ರಶಿಕ್ಷಣಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಶಿಕ್ಷಕ ಒಬ್ಬ ಶಿಲ್ಪಿ. ದಡ್ಡನನ್ನು ಕೂಡ ಬುದ್ಧಿವಂತನನ್ನಾಗಿ ಮಾಡುವಂತಹ ಸಾಮರ್ಥ್ಯ ಶಿಕ್ಷಕನಿಗೆ ಇರುತ್ತದೆ. ಅದು ಶಿಕ್ಷಕರ ನಿಜವಾದ ಕರ್ತವ್ಯ ಮತ್ತು ವೃತ್ತಿ ಧರ್ಮವಾಗಿದೆ ಎಂದರು.

ವಿದ್ಯಾರ್ಥಿಗಳು ಮತ್ತು ತಂದೆ-ತಾಯಿಗಳ ನಿರೀಕ್ಷೆಗಳು ಹೆಚ್ಚಾಗಿರುತ್ತವೆ. ಆ ನಿರೀಕ್ಷೆ ಪೂರೈಸುವ ಶಕ್ತಿ ಶಿಕ್ಷಕನಲ್ಲಿರಬೇಕು. ಎಲ್ಲ ಕಲಿಕಾ ಮಟ್ಟದ ವಿದ್ಯಾರ್ಥಿಗಳು ಇರುತ್ತಾರೆ. ಅವರ ಕಲಿಕೆಯ ಸಾಮರ್ಥ್ಯ ಅರಿತುಕೊಂಡು, ಉತ್ತಮ ಸ್ಥಾನಕ್ಕೆ ಹೋಗುವಂತೆ ಜ್ಞಾನ ತುಂಬಬೇಕು ಎಂದು ಸಲಹೆ ನೀಡಿದರು.

ಬಿ.ಇಡಿ. ಶಿಕ್ಷಣ ಮುಗಿದ ನಂತರ ಶಿಕ್ಷಕ ವೃತ್ತಿ ಒಂದಕ್ಕೆ ಕಾಯದೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಿ. ಶಿಕ್ಷಕರಾಗಲೇಬೇಕೆಂದೇನಿಲ್ಲ ಬೇರೆ ವೃತ್ತಿ ಮಾಡಬಹುದು. ಒಂದೇ ವೃತ್ತಿಯಲ್ಲಿ ತೃಪ್ತಿಪಡಬೇಡಿ. ವಿವಿಧ ಅವಕಾಶ ಬಳಸಿಕೊಳ್ಳಬೇಕು ಎಂದರು.

ಮೈವಿವಿ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಸಿ. ವೆಂಕಟೇಶ್ ಮಾತನಾಡಿ, ರಾಜ್ಯ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿಗಳಿಂದ ಗೊಂದಲ ಉಂಟಾಗಿದೆ. ಶಿಕ್ಷಕರು ಇದನ್ನು ನಿಭಾಯಿಸುವಂತಹ ಸಾಮರ್ಥ್ಯ ಹೊಂದಿರಬೇಕು.

ಶಿಕ್ಷಕರಿಗೆ ಮಕ್ಕಳ ಅಂಕಗಳು ಮುಖ್ಯವಾಗುತ್ತದೆ. ವರ್ಷದಿಂದ ವರ್ಷಕ್ಕೆ ಮಕ್ಕಳ ಅಂಕಗಳಲ್ಲಿ ವ್ಯತ್ಯಾಸವಾಗುತ್ತದೆ. ಹೀಗಾಗಿ ಮಕ್ಕಳ ಅರ್ಹತೆ ಮತ್ತು ಸಾಮರ್ಥ್ಯಕ್ಕೆ ತಕ್ಕಂತೆ ಅಂಕಗಳನ್ನು ನೀಡಬೇಕು. ಅದು ಶಿಕ್ಷಕರ ಕರ್ತವ್ಯ ಎಂದು ಹೇಳಿದರು.

ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್.ಶಿವರಾಜಪ್ಪ ಮಾತನಾಡಿದರು. ಪ್ರಾಂಶುಪಾಲ ಡಾ. ಮಹೇಶ್ ದಳಪತಿ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net