

ಬಸವಕಲ್ಯಾಣ: ಜ್ಞಾನ ಶಕ್ತಿಯನ್ನು ಸಮಾಜಕ್ಕೆ ವರ್ಗಾಯಿಸುವ ಶ್ರೇಷ್ಠ ಕಾರ್ಯದಲ್ಲಿ ತೊಡಗಿರುವ ಶಿಕ್ಷಕ ಸಮುದಾಯದ ಪವಿತ್ರ ಸೇವೆ ಸ್ಮರಿಸುವ, ಗೌರವಿಸುವ ದಿನವೇ ಶಿಕ್ಷಕರ ದಿನಾಚರಣೆ ಎಂದು ಹಾರಕೂಡ ಸಂಸ್ಥಾನ ಹಿರೇಮಠ ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯ ನುಡಿದರು.
ಬಸವಕಲ್ಯಾಣ ಹಾಗೂ ಹುಲಸೂರು ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಸಮಿತಿಯಿಂದ ನಗರದ ರಥ ಮೈದಾನದ ಸಭಾ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ೬೪ನೇ ಶಿಕ್ಷಕರ ದಿನ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮೌನಾನುಷ್ಠಾನ ಹಿನ್ನೆಲೆಯಲ್ಲಿ ಸೂರ್ಯಕಾಂತ ಮಠ ಮೂಲಕ ಲಿಖಿತ ಸಂದೇಶ ವಾಚಿಸಿದ ಅವರು, ಸಮಾಜದ ಉನ್ನತಿಗಾಗಿ ಸದ್ದಿಲ್ಲದೆ ಶ್ರಮಿಸುತ್ತಿರುವ ಶಿಕ್ಷಕರು ರಾಷ್ಟ್ರನಿರ್ಮಾಣದ ಶಿಲ್ಪಿಗಳು ಎಂದು ಕೊಂಡಾಡಿದರು.
ಶಿಕ್ಷಕರ ವೃತ್ತಿನಿಷ್ಠೆ ಹಾಗೂ ಪ್ರಾಮಾಣಿಕ ಪ್ರಯತ್ನದಿಂದ ತಾಲೂಕಿನ ಶೈಕ್ಷಣಿಕ ಗುಣಮಟ್ಟ ವೃದ್ಧಿಯಾಗಿ ರಾಷ್ಟç ಬೆಳಗುವಂಥ ಅದ್ಭುತ ಪ್ರತಿಭೆಗಳು ಹೊರಹೊಮ್ಮಲಿ. ನಿಮ್ಮೆಲ್ಲರ ಬದುಕು ಶ್ರೇಯಸ್ಸಿನಿಂದ ಕೂಡಿರಲಿ ಎಂದು ಹಾರೈಸಿದರು.
ಗೋರ್ಟಾದ ಶ್ರೀ ಗುರುಪಾದ ಶಿವಾಚಾರ್ಯ ಪ್ರೌಢಶಾಲೆ ಶಿಕ್ಷಕಿ ಶಾಂತಾಬಾಯಿ ಯರನಳ್ಳೆ ವಿಶೇಷ ಉಪನ್ಯಾಸ ನೀಡಿ, ಭಾರತೀಯ ಸಂಸ್ಕೃತಿ, ತತ್ವಜ್ಞಾನ, ಪರಂಪರೆಯನ್ನು ದೇಶ-ವಿದೇಶಗಳಿಗೆ ಪರಿಚಯಿಸಿದ ಡಾ.ಎಸ್.ರಾಧಾಕೃಷ್ಣನ್ ಶ್ರೇಷ್ಠ ದಾರ್ಶನಿಕರು. ರಾಷ್ಟçದ ಉನ್ನತಿ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯ ರುದನೂರ ಪ್ರಾಸ್ತಾವಿಕ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ವಿದ್ಯಾರ್ಥಿಗಳ ಭವಿಷ್ಯ, ವ್ಯಕ್ತಿತ್ವ ನಿರ್ಮಿಸುವ ಮೂಲಕ ಅದರ್ಶ ಸಮಾಜ, ರಾಷ್ಟç ನಿರ್ಮಾಣದಂಥ ಪವಿತ್ರ ವೃತ್ತಿ ಶಿಕ್ಷಕರದ್ದಾಗಿದೆ ಎಂದು ಹೇಳಿದರು.
ಹುಮನಾಬಾದ್ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಮಾತನಾಡಿದರು. ಕಲಬುರಗಿ ಮಹಾನಗರ ಪಾಲಿಕೆ ಅಧಿಕಾರಿ ಸಾವಿತ್ರಿ ಸಲಗರ, ಬಸವಕಲ್ಯಾಣ ತಹಸೀಲ್ದಾರ್ ಡಾ.ದತ್ತಾತ್ರೇಯ ಬಿರಾದಾರ, ಹುಲಸೂರು ತಹಸೀಲ್ದಾರ್ ಶಿವಾನಂದ ಮೇತ್ರೆ, ಹುಲಸೂರು ತಾಪಂ ಇಒ ಮಹಾದೇವ ಜಮ್ಮು, ಶಿಕ್ಷಣಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಸೂರ್ಯಕಾಂತ ಪಾಟೀಲ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ದಿಲೀಪಕುಮಾರ ಉತ್ತಮ, ಹುಲಸೂರು ತಾಲೂಕು ಅಧ್ಯಕ್ಷ ನಾಗರಾಜ ಹಾವಣ್ಣ, ಬಸವಕಲ್ಯಾಣ ಹಾಗೂ ಹುಲಸೂರು ತಾಲೂಕಿನ ಶಿಕ್ಷಕರ ವಿವಿಧ ಸಂಘಗಳ ಅಧ್ಯಕ್ಷರಾದ ಚಂದ್ರಕಾಂತ ಬಿರಾದಾರ, ವಿಜಯಕುಮಾರ ಮಾನೆ, ಸಂತೋಷಕುಮಾರ ಅಕ್ಕಣ್ಣಾ, ಸೂರ್ಯಕಾಂತ ಅಡಕೆ, ರಾಜಪ್ಪ ನಂದೋಡೆ, ತುಕಾರಾಮ ರೊಡ್ಡೆ, ಅಂಬಣ್ಣ ಘಾಂಗ್ರೆ, ರಾಜಕುಮಾರ ಬಿರಾದಾರ, ಡಾ.ಧರ್ಮೇಂದ್ರ ಭೋಸಲೆ, ವಿಜಯಲಕ್ಷ್ಮೀ ಪಂಚಾಳ, ವರ್ಷಾ ಪಂಚಾಳ ಇತರರಿದ್ದರು.
ಕ್ಷೇತ್ರ ಸಮನ್ವಯಾಧಿಕಾರಿ ಪ್ರಭಾಕರ ಕಳಮಾಸೆ, ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಸಂಜುಕುಮಾರ ಸ್ವಾಗತ ಹಾಗೂ ಸನ್ಮಾನ ನಡೆಸಿಕೊಟ್ಟರು. ಶಿವಕುಮಾರ ಜಡಗೆ ಹಾಗೂ ಮಹೇಶ ಮುಳೆ ನಿರೂಪಣೆ ಮಾಡಿದರು. ಶಿಕ್ಷಕರ ಸಮಸ್ಯೆಗಳ ಕುರಿತು ಶಾಸಕರಿಗೆ ಬರೆದ ಮನವಿಪತ್ರವನ್ನು ಬಿಇಒಗೆ ರಾಜಪ್ಪ ನಂದೋಡೆ ಸಲ್ಲಿಸಿದರು. ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಮೂಲಕ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಸರ್ಕಾರಿ ಶಾಲೆಯಲ್ಲಿ ಅಭ್ಯಸಿಸುವ ಬಡ ಮಕ್ಕಳ ಶೈಕ್ಷಣಿಕ ಪ್ರಗತಿ ಜತೆಗೆ ಅವರ ಶ್ರೇಯೋಭಿವೃದ್ಧಿಗೆ ಎಲ್ಲರೂ ಪ್ರಯತ್ನ ಮಾಡಬೇಕಿದೆ. ಇದಕ್ಕಾಗಿ ಸರ್ಕಾರಿ ಶಾಲೆಗೆ ಅಗತ್ಯ ಸೌಲಭ್ಯ ಕಲ್ಪಿಸಲು ಹಾಗೂ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ.
| ಡಾ.ಸಿದ್ಧಲಿಂಗಪ್ಪ ಪಾಟೀಲ್ ಶಾಸಕ, ಹುಮನಾಬಾದ್
ಸಿಬ್ಬಂದಿ ವರ್ಗ ಮಾಡಿ: ಬಸವಕಲ್ಯಾಣ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಮೂರು ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ವರ್ಗಾವಣೆ ಮಾಡಬೇಕು. ಹುಲಸೂರು ತಾಲೂಕಿನಲ್ಲಿ ಪ್ರತ್ಯೇಕ ಬಿಇಒ ಕಚೇರಿ ಅರಂಭಿಸಿ ಗುರುಭವನಕ್ಕೆ ಸ್ಥಳ ಕಲ್ಪಿಸಬೇಕು. ಶಿಕ್ಷಕರ ವೇತನ ತಾರತಮ್ಯ ಸರಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಬಸವಕಲ್ಯಾಣ ಮತ್ತು ಹುಲಸೂರು ತಾಲೂಕು ಶಿಕ್ಷಕರ ಸಂಘದಿಂದ ಮನವಿಪತ್ರ ಸಲ್ಲಿಸಲಾಯಿತು.