

ಬೆಳಗಾವಿ: ನಗರದ ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ (ಸ್ವಾಯತ್ತ) ಮಹಾವಿದ್ಯಾಲಯದ ಮಹಿಳಾ ಸಬಲೀಕರಣ ಘಟಕ ಹಾಗೂ ಬೆಳಗಾವಿಯ ಇನ್ನರ್ ವ್ಹೀಲ್ ಕ್ಲಬ್ ಸಹಯೋಗದೊಂದಿಗೆ ಶಾಲಾ ಶಿಕ್ಷಕರಿಗಾಗಿ ಮಾನಸಿಕ ಆರೋಗ್ಯ ಮತ್ತು ಒತ್ತಡ ನಿರ್ವಹಣೆ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸವನ್ನು ಗುರುವಾರ ಸರ್. ಸಿ.ವಿ. ರಾಮನ್ ಸಭಾಂಗಣದಲ್ಲಿ ಆಯೋಜಿಸಲಾಯಿತು.
ಜೆಎನ್‌ಎಮ್‌ಸಿಯ ಮಕ್ಕಳ ಮನಶ್ಶಾಸ್ತ್ರಜ್ಞರಾದ ಡಾ. ವಿನಾಯಕ ಕೋಪರ್ಡೆ ಅವರು ಆಗಮಿಸಿ ಮಾತನಾಡುತ್ತ ಬಹು ಸಮಯವನ್ನು ವಿದ್ಯಾರ್ಥಿಗಳೊಂದಿಗೆ ಕಳೆಯುವ ಶಿಕ್ಷಕರಿಗೆ ಒತ್ತಡ ಸರ್ವೇ ಸಾಮಾನ್ಯವಾಗಿರುತ್ತದೆ. ಆದರೆ ಶಿಕ್ಷಕರು ಅದರ ನಿರ್ವಹಣೆಯನ್ನು ಸರಿಯಾಗಿ ಮಾಡಬೇಕು. ವಿದ್ಯಾರ್ಥಿಗಳ ಮನಸ್ಥಿತಿ ಅರಿತು ಪಾಠ ಮಾಡುವ ಶಿಕ್ಷಕರು ತಮ್ಮ ಮಾನಸಿಕ ಆರೋಗ್ಯದ ಕಡೆಗೂ ಹೇಗೆ ಗಮನ ಹರಿಸಬೇಕು ಎಂಬುದನ್ನು ವಿವರಿಸಿದರು.
ಪ್ರಾಚಾರ್ಯ ಡಾ. ಜ್ಯೋತಿ ಎಸ್. ಕವಳೇಕರ ಅವರು ಸ್ವಾಗತಿಸಿದರು. ಮಹಿಳಾ ಸಬಲೀಕರಣ ಘಟಕದ ಸಂಚಾಲಕಿ ಎಮ್.ಎಮ್. ಪುರಾಣಿಕ ಅವರು ಅತಿಥಿಗಳನ್ನು ಪರಿಚಯಿಸಿದರು. ಪದ್ಮಶ್ರೀ ಡುಬಲೆ ಅವರು ವಂದಿಸಿದರು. ಸಮೃದ್ಧಿ ಬರವೆ ಕಾರ್ಯಕ್ರಮ ನಿರೂಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಬೆಳಗಾವಿಯ ಇನ್ನರ್ ವ್ಹೀಲ್ ಕ್ಲಬ್‌ನ ಅಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರು ಹಾಗೂ ವಿವಿಧ ಶಾಲೆಗಳ 90 ಜನ ಶಿಕ್ಷಕರು ಭಾಗವಹಿಸಿದರು.