ಶಿಕ್ಷಕರು ಮಕ್ಕಳಿಗೆ ದಾರಿದೀಪವಾಗಬೇಕು

11kglphoto-4
Published on

ಕೊಳ್ಳೇಗಾಲ: ಪಟ್ಟಣದ ಗುರುಭವನದಲ್ಲಿ ಸೋಮವಾರ ಭಾರತ ಸೇವಾದಳದ ತಾಲೂಕು ಮಟ್ಟದ ಪುನಶ್ಚೇತನ ಕಾರ್ಯಾಗಾರವನ್ನು ಭಾರತ ಸೇವಾ ದಳದ ಶಿಕ್ಷಕರಿಗೆ ಹಮ್ಮಿ ಕೊಳ್ಳಲಾಗಿತ್ತು.


ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಬಿ.ಆರ್.ಸಿ ಮಹದೇವ ಕುಮಾರ್, ಯುವಕರನ್ನು ಭಾರತದ ಆದರ್ಶ ನಾಗರೀಕರನ್ನಾಗಿ ಮಾಡಲು ಬುದ್ಧ ಮತ್ತು ಆಶೋಕನ ಕಾಲದಿಂದಲೂ ಪ್ರಯತ್ನಗಳು ನಡೆದು ಬಂದಿದೆ. ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರಸ್ತುತ ಸನ್ನಿವೇಶವನ್ನು ಅರಿತು ಶಿಕ್ಷಕರು ಮಕ್ಕಳಿಗೆ ದಾರಿದೀಪವಾಗಬೇಕಿದೆ ಎಂದು ಸಲಹೆ ನೀಡಿದರು.


ಭಾರತ ಸೇವಾ ದಳದ ಜಿಲ್ಲಾ ಉಪಾಧ್ಯಕ್ಷ ಎಸ್.ನಾಗರಾಜು ಕೊಂಗರಹಳ್ಳಿ ಮಾತನಾಡಿ, ಭಾರತ ಸೇವಾದಳವು 1923 ರಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಆದೇಶದಂತೆ ಡಾ.ನಾ.ಸು ಹರ್ಡಿಕರ್ ಅವರಿಂದ ಸ್ಥಾಪನೆಯಾಗಿದೆ. ಅಂದಿನ ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೆ ಶಿಸ್ತಿನ ಸಂಘಟನೆಯೊಂದರ ಅತ್ಯವಶ್ಯಕವಾಗಿತ್ತು. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಸೇವಾದಳ ಪ್ರಮುಖ ಪಾತ್ರವಹಿಸಿತ್ತು ಎಂದು ತಿಳಿಸಿದರು.


ಇದರ ಪ್ರಥಮ ಅಧ್ಯಕ್ಷರಾಗಿ ಪಂಡಿತ್ ಜವಾಹರಲಾಲ್ ನೆಹರು ಅವರು ಸೇವೆ ಸಲ್ಲಿಸಿದ್ದಾರೆ. ತದನಂತರ ಹಿಂದೂಸ್ತಾನಿ ಸೇವಾ ದಳವನ್ನು ಡಾ.ನಾ.ಸು ಹರ್ಡಿಕರ್ ಅವರು 1950ರಲ್ಲಿ ಹಾಸನ ಜಿಲ್ಲೆಯ ಬೇಲೂರಿನಲ್ಲಿ ಭಾರತ ಸೇವಾದಳ ಎಂಬ ಪಕ್ಷತೀತ ಸಂಸ್ಥೆಯಾಗಿ ಪರಿವರ್ತಿಸಿದರು. ಅಂದಿನಿಂದ ಈ ಸಂಸ್ಥೆ ಮಕ್ಕಳು ಹಾಗೂ ಯುವಜನರಲ್ಲಿ ಗಾಂಧಿ ತತ್ವದ ಆಧಾರದ ಮೇಲೆ ಶಿಸ್ತು ಹಾಗೂ ರಾಷ್ಟ್ರೀಯ ತೆಯನ್ನು ಬೆಳೆಸುವುದರಲ್ಲಿ ಕಾರ್ಯನಿರತವಾಗಿದೆ. ಸಾವಿರಾರು ಶಿಕ್ಷಣ ಶಿಬಿರಗಳು, ಸೇವಾ ಶಿಬಿರಗಳು, ರ‌್ಯಾಲಿ ಇತ್ಯಾದಿ ಕಾರ್ಯಕ್ರಮಗಳನ್ನು ನಡೆಸಿ ರಾಷ್ಟ್ರೀಯ ಸಂಸ್ಥೆಯಾಗಿ ಬೆಳೆದಿದ್ದರ ಬಗ್ಗೆ ತಿಳಿಸಿದರು.


ಶಿಬಿರದಲ್ಲಿ ಶಿಕ್ಷಕರು ಭಾಗಿ: ವಿವಿಧ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಸುಮಾರು 35 ಶಿಕ್ಷಕರು ಹಾಜರಿದ್ದರು. ಸೇವಾದಳ ತರಬೇತಿ ಕಾರ್ಯಾಗಾರವನ್ನು ಯಶಸ್ವಿಗೊಳಿಸಿದರು. ಭಾರತ ಸೇವಾ ದಳದ ತಾಲೂಕು ಅಧ್ಯಕ್ಷ ಬಿ.ಕೆ ಪ್ರಕಾಶ್, ಕಾರ್ಯದರ್ಶಿ ಮಹದೇವಪ್ಪ, ಸಂಘಟಕ ಪಳನಿಸ್ವಾಮಿ, ರೇವಪ್ಪ, ಕೋಶಾಧ್ಯಕ್ಷ ಚನ್ನಮಾದೇಗೌಡ, ದೈಹಿಕ ಪರಿವೀಕ್ಷಕ ಸ್ಟೀವನ್, ಸರ್ಕಾರಿ ಪ್ರಾಥಮಿಕ ಶಿಕ್ಷಕ ಸಂಘದ ಅಧ್ಯಕ್ಷ ಶ್ರೀಧರ್, ಶಿಕ್ಷಕರಾದ ಸುಂದರ್‌ರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net