ಶಿಕ್ಷಕರು ದಿನದಿಂದ ದಿನಕ್ಕೆ ಜ್ಞಾನ ಹೆಚ್ಚಿಸಿಕೊಳ್ಳಬೇಕು

2 ckm 10
ಚಿಕ್ಕಮಗಳೂರಿನ ಎಂಎಲ್‌ವಿ ರೋಟರಿಹಾಲ್‌ನಲ್ಲಿ ಏರ್ಪಡಿಸಿದ್ದ ನರ್ಸರಿ ಮತ್ತು ಪ್ರಾಥಮಿಕ ಶಿಕ್ಷಕರ ಪುನಶ್ಚೇತನಾ ತರಬೇತಿ ಕಾರ್ಯಾಗಾರದಲ್ಲಿ ಶ್ರೀಸಾಯಿ ಏಂಜಲ್ ಸಂಸ್ಥೆ ಪ್ರಾಚಾರ್ಯೆ ಯಾಮಿನಿ ಸವೂರ್ ಅವರನ್ನು ಸನ್ಮಾನಿಸಲಾಯಿತು. ನೈನಾ ಜನ್ನಿಫರ್ ಸಿಕ್ವೆರಾ, ನರೇಂದ್ರ ಪೈ, ರಮೇಶ್, ನಯನಾ ಸಂತೋಷ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಶಿಕ್ಷಕರು ದಿನನಿತ್ಯ ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಬೇಕು.ವರ್ಷದಿಂದ ವರ್ಷಕ್ಕೆ ಅಪ್‌ಡೇಟ್ ಆಗುವ ಮೂಲಕ ತಮ್ಮ ಬೋಧನಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು ಎಂದು ಸಂಪನ್ಮೂಲ ವ್ಯಕ್ತಿ, ತರಬೇತುದಾರರಾದ ನೈನಾ ಜನ್ನಿಫರ್ ಸಿಕ್ವೆರಾ ತಿಳಿಸಿದರು.

ಇನ್ನರ್‌ವ್ಹೀಲ್ ಕ್ಲಬ್, ರೋಟರಿಕ್ಲಬ್ ಹಾಗೂ ಎ.ಸಿ.ದೇವೇಗೌಡ ಮತ್ತು ಶ್ರೀಮತಿ ಶಿವಮ್ಮ ಎಜ್ಯುಕೇಶನ್ ಟ್ರಸ್ಟ್ ಆಶ್ರಯದಲ್ಲಿ ನಗರದ ಎಂಎಲ್‌ವಿ ರೋಟರಿಹಾಲ್‌ನಲ್ಲಿ ಏರ್ಪಡಿಸಿದ್ದ ನರ್ಸರಿ ಮತ್ತು ಪ್ರಾಥಮಿಕ ಶಿಕ್ಷಕರ ಪುನಶ್ಚೇತನಾ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಬೋಧಕರು ನಿರಂತರ ಕಲಿಕೆಯಲ್ಲಿರಬೇಕು. ಜ್ಞಾನ ಉನ್ನತೀಕರಿಸಿಕೊಳ್ಳದಿದ್ದರೆ ತಮ್ಮ ವೃತ್ತಿಯಲ್ಲಿ ನಮಗೆ ಸಂತೃಪ್ತಿ ಸಿಗುವುದಿಲ್ಲ. ವರ್ತಮಾನಕ್ಕೆ ತಕ್ಕಂತೆ ಕೌಶಲ್ಯಭಿವೃದ್ಧಿ ಹೊಂದಬೇಕು ಎಂದರು.

ಸಾಯಿ ಏಂಜಲ್ಸ್ ಶಾಲೆ ಪ್ರಾಚಾರ್ಯೆ ಯಾಮಿನಿ ಸವೂರ್ ಮತನಾಡಿ, ಮಾತೃಭಾಷೆಯೊಂದಿಗೆ ಇಂಗ್ಲೀಷ್ ಅತ್ಯಗತ್ಯ. ದೇಶದಲ್ಲಿ ಹಲವು ಭಾಷೆಗಳಿವೆ. ಆದರೆ ಸಂಹವನಕ್ಕಾಗಿ ಇಂಗ್ಲೀಷ್ ಅನಿವಾರ್ಯ ಎನ್ನುವ ಸ್ಥಿತಿ ಇದೆ. ಇಂಗ್ಲೀಷ್ ಮಾತನಾಡುವುದು ಒಂದು ಕಲೆ, ಮಾತೃಭಾಷೆಯೊಂದಿಗೆ ಇಂಗ್ಲೀಷ್ ಕಲಿತರೆ ಹೆಚ್ಚು ಉದ್ಯೋಗಗಳು ತೆರೆದುಕೊಳ್ಳುತ್ತವೆ ಎಂಬುದನ್ನು ಮನಗಾಣಬೇಕು ಎಂದು ಹೇಳಿದರು.

ಮಕ್ಕಳು ಹೆಚ್ಚು ಗ್ರಹಿಕಾ ಶಕ್ತಿ ಹೊಂದಿರುತ್ತಾರೆ. ಚಿಕ್ಕ ಮಕ್ಕಳನ್ನು ನಾವು ಹೇಗೆ ಬೇಕಾದರೂ ಪರಿವರ್ತನೆ ಮಾಡಲು ಸಾಧ್ಯವಿದೆ.ಬಾಲ್ಯದಲ್ಲಿ ಸಿಗುವ ಉತ್ತಮ ಶಿಕ್ಷಣ ಮುಂದೆ ಅವರ ಭವಿಷ್ಯಕ್ಕೆ ಅಡಿಗಲ್ಲಾಗಿರಲಿ. ಈ ನಿಟ್ಟಿನಲ್ಲಿ ಮಕ್ಕಳಿಗೆ ಬೋಧನೆ ಮಾಡುವ ಅಗತ್ಯವಿದೆ ಎಂದರು.

ಖಾಸಗಿ ಶಾಲೆಗಳ ಸಂಘದ ಅಧ್ಯಕ್ಷ ನರೇಂದ್ರ ಪೈ ಮಾತನಾಡಿ, ಎ.ಸಿ.ದೇವೇಗೌಡ ಅವರು ನಮ್ಮ ಜಿಲ್ಲೆಯವರು ಎಂಬುದು ಸಂತಸದ ಸಂಗತಿ. ಅವರ ಪ್ರಯತ್ನದಿಂದ ಎಲ್ಲ ಜಿಲ್ಲೆಗಳಲ್ಲಿಯೂ ಶಿಕ್ಷಕರ ತರಬೇತಿ ಕೇಂದ್ರಗಳು ಆರಂಭವಾದವು ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿ ರಮೇಶ್ ಮಾತನಾಡಿ, ಶಿಕ್ಷಕರು ಈ ದೇಶದ ಭವಿಷ್ಯ ರೂಪಿಸುವ ನಿರ್ಮಾತೃಗಳು ಎಂದರೆ ಅತಿಶಯೋಕ್ತಿಯಲ್ಲ. ಭವಿಷ್ಯದಲ್ಲಿ ಉತ್ತಮ ನಾಗರೀಕರನ್ನು ತಯಾರು ಮಾಡುವ ಅವರು ಕಾಯಕದಲ್ಲಿ ಸದಾ ಕ್ರಿಯಾಶೀಲರಾಗಿರುವಂತೆ ಸಲಹೆ ನೀಡಿದರು.

ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ನಯನಾ ಸಂತೋಷ್ ಅಧ್ಯಕತೆ ವಹಿಸಿದ್ದರು. ಕಾರ್ಯದರ್ಶಿ ಶಾಲಿನಿ ನಾಗೇಶ್, ಯೋಜನಾ ನಿರ್ದೇಶಕಿ ಶರ್ಮಿಳಾ ಶಶಿಧರ್, ಟ್ರಸ್ಟ್ ಚೇರ್‌ಮನ್ ಪ್ರವೀಣ್, ಟ್ರಸ್ಟ್ ಕಾರ್ಯದರ್ಶಿ ಪವನ್, ಪ್ರಮೋಟರ್ ಲೇಖ ಚಂದ್ರಶೇಖರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net