ಶಿಕ್ಷಕರು ಜ್ಞಾನದ ಬೆಳಕು ನೀಡುವವರು: ಶಂಭುಶ್ರೀ

ಶಿಕ್ಷಕರು ಜ್ಞಾನದ ಬೆಳಕು ನೀಡುವವರು: ಶಂಭುಶ್ರೀ
Published on

ಹಾಸನ: ತಂದೆ ತಾಯಿ ಹಾಕಿಕೊಟ್ಟ ಮಾರ್ಗದರ್ಶನ, ಗುರುಗಳು ಹೇಳಿಕೊಟ್ಟ ಉಪದೇಶ ಇವುಗಳಿಂದ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳುತ್ತಾರೆ ಎಂದು ಶ್ರೀ ಆದಿಚುಂಚನಗಿರಿ ಹಾಸನ ಶಾಖಾ ಮಠದ ಪರಮಪೂಜ್ಯ ಶಂಭುನಾಥ ಸ್ವಾಮೀಜಿ ಹೇಳಿದರು.

ನಗರದ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ನಿಜವಾದ ಶಿಕ್ಷಕ ಎಂದರೆ ಮೊದಲು ತಾಯಿ, ಎರಡನೆಯವರು ಮಕ್ಕಳಿಗೆ ಜ್ಞಾನದ ಬೆಳಕನ್ನು ನೀಡಿ ಸಮಾಜದಲ್ಲಿ ಉತ್ತಮ ಪ್ರಜೆಯನ್ನಾಗಿ ಮಾಡುವ ಶಿಕ್ಷಕರು ಸಮಾಜದಲ್ಲಿ ಇವರ ಪಾತ್ರ ಪ್ರಮುಖವಾಗಿದೆ ಎಂದರು.

ಮಕ್ಕಳಲ್ಲಿ ರಾಧಾಕೃಷ್ಣನ್, ಅಬ್ದುಲ್ ಕಲಾಂ ಅವರನ್ನು ಕಾಣಬಹುದು. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ, ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಮಾತಿನಂತೆ ನಾವು ಬಿಟ್ಟ ಬೀಜ ಸಂಸೃತಿಯಿಂದ ಬೆಳೆಯಬೇಕು. ರಾಧಾಕೃಷ್ಣನ್ ಹಾಗೂ ಸಾವಿತ್ರಿ ಬಾಪುಲೆ ಹಾಕಿ ಕೊಟ್ಟ ಭದ್ರ ಬುನಾದಿ ಮೇಲೆ ಉತ್ತಮ ಸಮಾಜ ರೂಪುಗೊಳ್ಳುತ್ತಿದೆ ತಿಳಿಸಿದರು.

ಶಿಕ್ಷಕರು ಮಕ್ಕಳನ್ನು ತಿದ್ದುವಲ್ಲಿ ತಮ್ಮ ಶ್ರಮ ಹಾಕಿರುತ್ತಾರೆ. ಮರಣವಿಲ್ಲದ ವಸ್ತು ಎಂದರೆ ಅದು ಪುಸ್ತಕ. ಪರೀಕ್ಷೆಯಲ್ಲಿ 100ಕ್ಕೆ 100 ಅಂಕ ಪಡೆದು ಜೀವನ ಪರೀಕ್ಷೆಯಲ್ಲಿ ಸೋಲುತಿದ್ದರೆ ಅದರಿಂದ ಲಾಭವಾಗದು ಜಿವನದಲ್ಲಿ ವಿದ್ಯಾರ್ಥಿಗಳು ಏನನ್ನಾದರೂ ಸಾಧಿಸಬೇಕು ಎಂದು ಕಿವಿಮಾತು ಹೇಳಿದರು.

ಸರ್ಕಾರಿ ಶಾಲೆಗಳನ್ನು ಬೆಳೆಸುವಲ್ಲಿ ಅಧಿಕಾರಿಗಳು, ಶಿಕ್ಷಕರು, ಸ್ವಾಮೀಜಿಗಳು, ರಾಜಕಾರಣಿಗಳು ಪಣ ತೊಡಬೇಕು. ಕನ್ನಡ ಮತ್ತು ಇಂಗ್ಲಿಷ್ ಕಲಿಯುವ ಮಕ್ಕಳು ಬೇರೆಯವರಲ್ಲ. ಪ್ರತಿಭೆಗೆ ಬೆಲೆ ಕೊಟ್ಟು ಬೆಳೆಸಿದಾಗ ಮಾತ್ರ ಸರ್ವಪಲ್ಲಿ ಅವರ ಆಶಯ ಸಾರ್ಥಕವಾಗುತ್ತದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಸಿ.ಸತ್ಯಭಾಮ ಮಾತನಾಡಿ, ಪ್ರತಿಯೊಬ್ಬರ ಸಾಧನೆ ಹಿಂದೆ ಒಬ್ಬ ಗುರು ಇದ್ದೇ ಇರುತ್ತಾರೆ. ಅರಿವೇ ಗುರು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. ನಮ್ಮನ್ನು ತಿದ್ದಿ ಸಮಾಜಕ್ಕೆ ಕಾಲಿಡಿಸುವ ತಾಯಿ ಮೊದಲ ಶಿಕ್ಷಕರು ಎಂದರೇ ತಪ್ಪಾಗಲಾರದು ಎಂದರು.

ನಂತರ ಶಿಕ್ಷಕರು ನಮ್ಮನ್ನು ಶಿಲೆಯಂತೆ ಕೆತ್ತಿ ಒಬ್ಬ ಸಾಧಕನನ್ನಾಗಿ ಮಾಡುತ್ತಾರೆ. ಮೊದಲ ಶಿಕ್ಷಕರಾಗಿರುವ ತಂದೆ ತಾಯಿ, ಮಕ್ಕಳಿಗೆ ಮೊದಲ ಗುರುವಾಗಿ ಕಲಿಸಬೇಕು. ಸಮಾಜದಲ್ಲಿ ಹೇಗೆ ನಡೆಯಬೇಕು ಎನ್ನುವುದನ್ನು ತಿದ್ದಿ ಹೇಳಬೇಕೆಂದು ಕಿವಿಮಾತು ಹೇಳಿದರು.

ಮಕ್ಕಳನ್ನು ಹಿಡಿದಿಟ್ಟು ಪಾಠ ಮಾಡುವುದೇ ಒಂದು ಸಾಹಸ, ಪ್ರಾಥಮಿಕ ಶಾಲಾ ಶಿಕ್ಷಣದ ಬಗ್ಗೆ ನೆನಪಿಸಿಕೊಳ್ಳುವುದೇ ಒಂದು ಸಂತೋಷ. ಶಿಕ್ಷಕರು ತಮ್ಮ ತನುಮನ ಅರ್ಪಿಸಿ ಪಾಠ ಮಾಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಬಿ.ಆರ್. ಪೂರ್ಣಿಮಾ, ಸಾಹಿತಿ ಜ.ನಾ. ತೇಜಶ್ರೀ, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಈ. ಕೃಷ್ಣೇಗೌಡ, ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಂ. ಶಿವಣ್ಣ, ಪದನಿಮಿತ್ತ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಹೆಚ್.ಕೆ. ಪುಷ್ಪಲತಾ, ಶಾಲಾ ಶಿಕ್ಷಣ ಇಲಾಖೆ ಆಡಳಿತ ಉಪ ನಿರ್ದೇಶಕ ಎಸ್.ಟಿ. ಜವರೇಗೌಡ, ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎನ್. ಮಂಜುಳಾ ಇತರರು ಇದ್ದರು.

ಮೆರವಣಿಗೆ: ಡಿಸಿ ಚಾಲನೆ

ಸರ್ವಪಲ್ಲಿ ಡಾ. ರಾದಕೃಷ್ಣನ್ ದಿನಾಚರಣೆಯ ಅಂಗವಾಗಿ ನಗರದ ಮಹಾವೀರ ವೃತ್ತದ ಬಳಿ ಇರುವ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಆವರಣದಿಂದ ಶ್ರೀ ಆದಿಚುಂಚನಗಿರಿ ಶಾಖಾ ಮಠದವರೆಗೂ ಬೆಳ್ಳಿರಥದಲ್ಲಿ ಸಾಗಿದ ಆಕರ್ಷಕ ಮೆರವಣಿಗೆಗೆ ಡಿಸಿ. ಸತ್ಯಭಾಮ ಮತ್ತು ಜಿಪಂ ಸಿಇಒ.ಪೂರ್ಣಿಮಾ ಅವರು ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಚಾಲನೆ ನೀಡಿದರು.

ಮೆರವಣಿಗೆಯಲ್ಲಿ ಯುವತಿಯರಿಂದ ದೇವರ ಕುಣಿತ, ಡೋಲು ಕುಣಿತ ಸೇರಿದಂತೆ ವಿವಿಧ ಕಲಾತಂಡಗಳು ಆಕರ್ಷಿಸಿದವು. ಸರ್ವಪಲ್ಲಿ ಡಾ. ರಾದಕೃಷ್ಣನ್ ಮತ್ತು ಸಾವಿತ್ರಿ ಬಾಪುಲೆ ಭಾವಚಿತ್ರದೊಂದಿಗೆ ಬೆಳ್ಳಿ ರಥದ ಮೂಲಕ ಕಾರ್ಯಕ್ರಮ ನಡೆಯುವ ಶ್ರೀ ಆದಿಚುಂಚನಗಿರಿ ಶಾಖಾ ಮಠಕ್ಕೆ ಕರೆತರಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net