ಶಿಕ್ಷಕರು ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಲಿ

13KUDLIGI2 (1)
Published on

ಕೂಡ್ಲಿಗಿ: ಶಿಕ್ಷಕ ಕರ್ತವ್ಯದಲ್ಲಿ ಭ್ರಷ್ಟನಾದರೆ ಇಡಿ ಸಮಾಜವೇ ಅಧಃಪತನವಾಗುತ್ತದೆ ಎಂದು ಕೂಡ್ಲಿಗಿ ಹಿರೇಮಠದ ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಜ್ಞಾನಭಾರತಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಿವೃತ್ತ ಶಿಕ್ಷಕರ ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಗುರುವಾರ ಮಾತನಾಡಿದರು. ಶಿಕ್ಷಕರಲ್ಲಿ ಕರ್ತವ್ಯಪ್ರಜ್ಞೆ ಬಹಳ ಮುಖ್ಯವಾಗಿದ್ದು, ತರಗತಿಯ ಕೋಣೆಗಳಲ್ಲಿ ವಿದ್ಯಾರ್ಥಿಗಳ ಭವಿಷ ್ಯ ನಿರ್ಮಾಣವಾಗುವುದರಿಂದ ಅದನ್ನರಿತು ಉತ್ತಮ ಬೋಧನೆ ಮಾಡಬೇಕು. ಈ ಮೂಲಕ ಸಮಾಜಕ್ಕೆ ಒಳ್ಳೆಯ ಕೊಡುಗೆಗಳನ್ನು ನೀಡಲು ಸಾಧ್ಯ ಎಂದು ತಿಳಿಸಿದರು.

ಸಮಾಜದಲ್ಲಿ ಪ್ರತಿಯೊಬ್ಬರ ಸೇವೆಯೂ ಸ್ಮರಣೀಯ. ವಿಶೇಷವಾಗಿ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾಗಿದೆ. ಶಿಕ್ಷಣ ಸಮಾಜದ ಸ್ವರೂಪವನ್ನು ಬದಲಾಯಿಸುತ್ತದೆ. ಗುಣಮಟ್ಟದ ಶಿಕ್ಷಣ ನೀಡುವುದರಿಂದ ದೇಶ ಪ್ರಗತಿ ಸಾಧಿಸಲು ನೆರವಾಗಲಿದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಸಂಸ್ಕೃತಿ ಹಾಗೂ ಪರಂಪರೆಯ ಕುರಿತು ತಿಳಿವಳಿಕೆ ಮೂಡಿಸಬೇಕು. ಸಮಾಜಕ್ಕೆ ಆದರ್ಶ ವ್ಯಕ್ತಿಗಳನ್ನು ನೀಡುವ ಸಾಮರ್ಥ್ಯವುಳ್ಳ ಶಿಕ್ಷಕರ ಪೈಕಿ ಕೆಲವರು ಕರ್ತವ್ಯದ ಹೊಣೆ ಮರೆತು ಭ್ರಷ್ಟರಾಗುತ್ತಿರುವುದು ವಿಷಾದನೀಯ. ಇಂತಹ ಶಿಕ್ಷಕರು ನಡವಳಿಕೆಯನ್ನು ಸರಿಪಡಿಸಿಕೊಂಡಾಗ ಸಮಾಜದ ಉನ್ನತಿ ಸಾಧ್ಯ ಎಂದು ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಎಡೆಯೂರು ಸಿದ್ಧಲಿಂಗೇಶ್ವರ ವಿದ್ಯಾಸಂಸ್ಥೆ ಅಧ್ಯಕ್ಷ ಡಾ.ಕೆ.ಎಂ.ರವಿಕುಮಾರ್ ಮಾತನಾಡಿ, ಶೈಕ್ಷಣಿಕ ಸಂಸ್ಥೆಗಳ ಅಭಿವೃದ್ಧಿಯಲ್ಲಿ ಆದರ್ಶ ಶಿಕ್ಷಕರ ಪಾತ್ರ ಉನ್ನತವಾಗಿರುತ್ತದೆ. ಆದರ್ಶ ಶಿಕ್ಷಕರು ವಿದ್ಯಾರ್ಥಿಗಳ ಮನಸ್ಸು ಅರಿತು ಬೋಧನೆ ಮಾಡುವ ಜತೆಗೆ ಸಂಸ್ಥೆಯ ಅಭಿವೃದ್ಧಿಗೂ ಶ್ರಮಿಸುತ್ತಾರೆ. ಇದರಿಂದ ಅನೇಕ ವಿದ್ಯಾ ಸಂಸ್ಥೆಗಳು ತಲೆ ಎತ್ತಲೂ ಕಾರಣವಾಗುತ್ತದೆ ಎಂದರು.

ಕಾನಮಡುಗು ಶರಣಬಸವೇಶ್ವರ ಸಮನ್ವಯ ಪ್ರೌಢಶಾಲಾ ಮುಖ್ಯ ಶಿಕ್ಷಕ ಕೆ.ಬಸವರಾಜ ಅವರಿಗೆ ಉತ್ತಮ ಸೇವೆಗಾಗಿ 10 ಲಕ್ಷ ರೂ. ಮೌಲ್ಯದ ಕಾರನ್ನು ಉಡುಗೊರೆಯಾಗಿ ಸಂಸ್ಥೆ ಆಡಳಿತ ಮಂಡಳಿ ಅಧ್ಯಕ್ಷ ಡಾ.ರವಿಕುಮಾರ್, ಕೆ.ಎಂ.ರೂಪಾ, ಡಾ.ಸೌಮ್ಯ ನೀಡಿದರು. ಗುಳಿಗಿ ಶಿವರಾಜ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪತ್ರಕರ್ತರಾದ ಭೀಮಣ್ಣ ಗಜಾಪುರ, ಗುನ್ನಳ್ಳಿ ಶ್ರೀಧರ, ಪಿ.ಶಿವರಾಜ್, ಮುಖ್ಯ ಶಿಕ್ಷಕರಾದ ಕೆ.ವೀರೇಶ್, ಬೊಮ್ಮಣ್ಣ, ನಾಗರಾಜ, ರಶ್ಮಿ, ಆರ್ಯುವೇದ ಕಾಲೇಜು ಪ್ರಾಚಾರ್ಯ ಕೊಟ್ರೇಶ್, ಬಿ.ಇಡಿ ಕಾಲೇಜು ಪ್ರಾಚಾರ್ಯ ಎಚ್.ಎಂ.ವಿಜಯ ಕುಮಾರ್, ಕಜಾಪ ತಾಲೂಕು ಅಧ್ಯಕ್ಷ ಕೆ.ಎಂ.ವೀರೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net