ಶಿಕ್ಷಕರು ಉತ್ತಮ ಪ್ರಜೆಗಳನ್ನು ಸೃಷ್ಟಿಸಬೇಕು

25M.D.R.2
Published on

ಮದ್ದೂರು: ದೇಶದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚುತ್ತಿರುವುದು ಸಂತೋಷದ ಸಂಗತಿಯಾಗಿದ್ದು, ಇದಕ್ಕೆ ಕಾರಣರಾದ ಸಾವಿರಾರು ಶಿಕ್ಷಕರನ್ನು ಒಂದೇ ವೇದಿಕೆಯಲ್ಲಿ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕೆ.ಎಂ.ಉದಯ್ ಅಭಿನಂದಿಸುತ್ತಿರುವುದು ಮೆಚ್ಚುಗೆಯ ವಿಷಯ ಎಂದು ಸಂಸ್ಕೃತಿಕ ಚಿಂತಕ ಹಾಗೂ ವಾಗ್ಮಿ ಪ್ರೊ.ಕೃಷ್ಣೇಗೌಡ ತಿಳಿಸಿದರು.


ಸಮೀಪದ ಸೋಮನಹಳ್ಳಿಯ ತಿಮ್ಮದಾಸ್ ಹೋಟೆಲ್ ಪಕ್ಕದ ಮೈದಾನದಲ್ಲಿ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ತಾಲೂಕಿನ 2 ಸಾವಿರ ಶಿಕ್ಷಕರಿಗೆ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ದೇಶದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಶೇ.10ರಷ್ಟಿದ್ದ ವಿದ್ಯಾವಂತರ ಸಂಖ್ಯೆ ಇಂದು ಶೇ.90 ರಷ್ಟಾಗಿದೆ. ಇದರಿಂದ ನಮ್ಮ ದೇಶದಲ್ಲಿ ಓದಿದ ಹಲವಾರು ಪ್ರತಿಭೆಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಕೆಲಸ ಮಾಡಲು ಸಾಧ್ಯವಾಗಿದೆ. ಇದರಲ್ಲಿ ಶಿಕ್ಷಕರ ಪಾತ್ರ ಅನನ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಭವಿಷ್ಯದಲ್ಲಿ ಶಿಕ್ಷಕರಿಲ್ಲದ ಶಿಕ್ಷಣವನ್ನು ಸಮಾಜ ಕಾಣಲಿದೆ. ಭವಿಷ್ಯದಲ್ಲಿ ಶಿಕ್ಷಕರಿಗೆ ತಂತ್ರಜ್ಞಾನ ಮಾರಕವಾಗಲಿದೆ. ಮುಂದಿನ ದಿನಗಳಲ್ಲಿ ಶಿಕ್ಷಕರಿಗೆ ಭವಿಷ್ಯವಿರುವುದು ನನಗೆ ಕಾಣುತ್ತಿಲ್ಲ. ತಂತ್ರಜ್ಞಾನದಲ್ಲಿ ಶಿಕ್ಷಣ ನಡೆಯುತ್ತಿದೆ ಎಂದರೆ 15 ವರ್ಷದಲ್ಲಿ ಶಿಕ್ಷಕರು ಏಕೆ ಬೇಕು? ಎಂಬ ಪರಿಸ್ಥಿತಿ ನಿರ್ಮಾಣವಾಗುವುದರಲ್ಲಿ ಆಶ್ಚರ್ಯವಿಲ್ಲ. ನಾವು ಇಲ್ಲದೆ ಶಿಕ್ಷಣ ಪೂರ್ಣವಾಗಲ್ಲ ಎಂಬುದನ್ನು ಶಿಕ್ಷಕರು ಸಾಬೀತು ಮಾಡುವ ಸಮಯ ಬಂದಿದೆ ಎಂದರು.


ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ ಕದಲೂರು ಉದಯ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಪಂಚದಲ್ಲಿ ಶಿಕ್ಷಣಕ್ಕೆ ದೊಡ್ಡ ಶಕ್ತಿಯಿದೆ. ಆಸ್ತಿ, ಐಶ್ವರ್ಯ, ಹಣ ಸೇರಿದಂತೆ ಎಲ್ಲ ಸಂಪತ್ತನ್ನು ಬೇರೆಯವರು ಖದೀಸಬಹುದು. ಆದರೆ, ಜ್ಞಾನವನ್ನು ಯಾರೂ ಖರೀದಿಸಲು ಸಾಧ್ಯವಿಲ್ಲ. ಇಂತಹ ಜ್ಞಾನವನ್ನು ನೀಡುತ್ತಿರುವ ಗುರುವೃಂದವನ್ನು ಜೀವನದಲ್ಲಿ ಯಾರು ಮರೆಯಲು ಸಾಧ್ಯವಿಲ್ಲ ಎಂದರು.


ಕಾರ್ಯಕ್ರಮದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿದ ತಾಲೂಕಿನ ಬಾಲಸುಬ್ರಮಣ್ಯಂ, ಯದುಶೈಲ, ರಾಮಚಂದ್ರ, ಕುಮಾರ್, ಜೋಗಿಗೌಡ, ಸತೀಶ್, ಕೃಷ್ಣ, ಮದ್ದುಶೆಟ್ಟಿ, ಜ್ಞಾನೇಂದ್ರ, ಗೋಪಾಲ, ನಾರಾಯಣಸ್ವಾಮಿ, ಶಿವಕುಮಾರ್, ಭೈರೇಗೌಡ, ಶಿವಲಿಂಗಯ್ಯ ಅವರನ್ನು ಅಭಿನಂದಿಸಲಾಯಿತು.


ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್‌ನ ಟ್ರಸ್ಟಿಗಳಾದ ವಿನುತಾ ಕೆ.ಎಂ.ಉದಯ್, ಕೆ.ಎಂ.ರವಿ, ಎಂ.ಆರ್.ದಿನೇಶ್‌ಬಾಬು, ಸಿಪಾಯಿ ಶ್ರೀನಿವಾಸ್, ಕೆಐಡಿಬಿ ನಿವೃತ್ತ ಅಧಿಕಾರಿ ಶಂಕರೇಗೌಡ, ತಾಲೂಕಿನ ಉಪನ್ಯಾಸಕ ಸಂಘದ ಅಧ್ಯಕ್ಷ ಅಂಕೇಗೌಡ, ವಿಕ್ರಮ್ ವಿಜಯ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net