

ಔರಾದ್: ಶಿಕ್ಷಕರಿಗೆ ದೇಶದಲ್ಲಿ ಬಹುದೊಡ್ಡ ಸ್ಥಾನಮಾನ ನೀಡಲಾಗಿದೆ. ಮಕ್ಕಳಿಗೆ ವಿದ್ಯೆ-ಬುದ್ಧಿ ಕಲಿಸಿ ಉಜ್ವಲ ಭವಿಷ್ಯ ರೂಪಿಸುವ ಶಿಕ್ಷಕರು ಅಭಿವೃದ್ಧಿಯ ರೂವಾರಿಗಳು ಎಂದು ಶಾಸಕ ಪ್ರಭು ಚವ್ಹಾಣ್ ಬಣ್ಣಿಸಿದರು.
ಶಾಲಾ ಶಿಕ್ಷಣ ಇಲಾಖೆಯಿಂದ ಪಟ್ಟಣದ ಡಾ.ಗುರುಪಾದಪ್ಪ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಔರಾದ್ ಕ್ಷೇತ್ರ ಸಾಕಷ್ಟು ಸುಧಾರಣೆ ಕಂಡಿದೆ. ಇದರಲ್ಲಿ ಶಿಕ್ಷಕರ ಪಾತ್ರವೂ ಹೆಚ್ಚಿದೆ. ಶಿಕ್ಷಣ ಕ್ಷೇತ್ರ ಸುಧಾರಿಸಿದ್ದು, ಫಲಿತಾಂಶ ಹೆಚ್ಚಳಕ್ಕೆ ಇನ್ನಷ್ಟು ಪ್ರಯತ್ನ ಹಾಕಬೇಕು. ಮುಂಬರುವ ದಿನಗಳಲ್ಲಿ ಔರಾದ್, ಕಮಲನಗರ ತಾಲೂಕುಗಳು ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ನಂ.೧ ಸ್ಥಾನಕ್ಕೆ ಬರುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಶಿಕ್ಷಕರ ಮೇಲೆ ನನಗೆ ಅತ್ಯಂತ ಗೌರವವಿದೆ. ಹೀಗಾಗಿ ೨೦೦೯ರಿಂದ ಪ್ರತಿವರ್ಷ ಸನ್ಮಾನಿಸುತ್ತ ಬರುತ್ತಿರುವೆ. ಯಾವುದೇ ಅಡ್ಡಿ ಆತಂಕ ಬಂದರೂ ಶಿಕ್ಷಕರು, ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕೆಲಸ ನಿಲ್ಲಿಸುವುದಿಲ್ಲ. ಜೀವಮಾನ ಇರುವವರೆಗೆ ಈ ಕಾರ್ಯಕ್ರಮ ನಿರಂತರ ನಡೆಸುವುದಾಗಿ ಹೇಳಿದರು.
ಪಾಲಕರು ತಮ್ಮ ಮಕ್ಕಳನ್ನು ಶಿಕ್ಷಕರ ಮೇಲೆ ಭರವಸೆಯಿಟ್ಟು ಶಾಲೆಗೆ ಕಳುಹಿಸುತ್ತಾರೆ. ಅವರ ನಿರೀಕ್ಷೆಗೆ ಧಕ್ಕೆಯಾಗದಂತೆ ವಿದ್ಯಾಭ್ಯಾಸ ಮಾಡಿಸಬೇಕು. ಪಠ್ಯ ಚಟುವಟಿಕೆ ಜೊತೆಗೆ ಸಂಸ್ಕಾರ, ದೇಶಭಕ್ತಿ, ಸೇವಾಭಾವ ಮೂಡಿಸಿ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಬಹುದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.
ಶ್ರೀ ಸಿದ್ಧಲಿಂಗ ಸ್ವಾಮೀಜಿ ಠಾಣಾಕುಶನೂರ, ಶ್ರೀ ಮಹಾಲಿಂಗ ಸ್ವಾಮೀಜಿ ಭಾಲ್ಕಿ, ಶ್ರೀ ಕೇದಾರನಾಥ ಶಿವಾಚಾರ್ಯ ಹೆಡಗಾಪುರ, ಶ್ರೀ ಚಂದ್ರಶೇಖರ ಶಿವಾಚಾರ್ಯ ಗುಡಪಳ್ಳಿ ಸಾನ್ನಿಧ್ಯ ವಹಿಸಿದ್ದರು. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸರುಬಾಯಿ ಘೂಳೆ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಗುರುಪ್ರಸಾದ, ತಹಸೀಲ್ದಾರ್ ಮಹೇಶ ಪಾಟೀಲ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣ ಅಧಿಕಾರಿಗಳಾದ ಕಿರಣ ಪಾಟೀಲ್, ಹಣಮಂತರಾಯ ಕೌಟಗೆ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜೆ. ರಂಗೇಶ್, ಪಿಎಂ ಪೋಷಣ್ ಶಕ್ತಿ ನಿರ್ಮಾಣ ಯೋಜನೆ ಸಹಾಯಕ ನಿರ್ದೇಶಕ ಧೂಳಪ್ಪ ಮಳೆನೂರ, ಕ್ಷೇತ್ರ ಸಮನ್ವಯಾಧಿಕಾರಿ ಪ್ರಕಾಶ ರಾಠೋಡ್, ಯಶವಂತ ಡೊಂಬಾಳೆ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರ ಬಿರಾದಾರ್, ಪ್ರಧಾನ ಕಾರ್ಯದರ್ಶಿ ಪ್ರಭುಲಿಂಗ ತೂಗಾಂವೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರವೀಂದ್ರರಡ್ಡಿ ಮಾಲಿಪಾಟೀಲ್, ಪ್ರಮುಖರಾದ ಪಂಢರಿ ಆಡೆ, ಸುನೀಲ ಕಸ್ತೂರೆ, ವಿಶ್ವನಾಥ ಬಿರಾದಾರ್, ಸೂರ್ಯಕಾಂತ ಬಿರಾದಾರ್, ಸಂಜೀವ ಮೇತ್ರೆ, ಬಸವರಾಜ ಪಾಟೀಲ್ ಇತರರಿದ್ದರು.
ಔರಾದ್ ಹಾಗೂ ಕಮಲನಗರ ತಾಲೂಕಿನ ನಿವೃತ್ತ, ಮರಣ ಹೊಂದಿದ ಶಿಕ್ಷಕರ ಅವಲಂಬಿತರು ಹಾಗೂ ಸರ್ಕಾರಿ, ಅನುದಾನಿತ, ಖಾಸಗಿ ಶಾಲಾ-ಕಾಲೇಜಿನ ಸುಮಾರು ೩೦೦೦ ಶಿಕ್ಷಕರನ್ನು ಶಾಸಕರು ಸನ್ಮಾನಿಸಿದರು.
ಈ ಬಾರಿ ಹೆಚ್ಚು ಮಳೆಯಾಗಿದ್ದರಿಂದ ಬೆಳೆ ಹಾನಿಯಾಗಿದೆ. ರೈತರಿಗೆ ಸೂಕ್ತ ಪರಿಹಾರ ಕಲ್ಪಿಸಲು ಪ್ರಯತ್ನಿಸುತ್ತಿದ್ದು, ಕೃಷಿಕರ ಕೈಬಲಪಡಿಸಿ ಆರ್ಥಿಕವಾಗಿ ಸಬಲರನ್ನಾಗಿಸಲು ನಿರಂತರ ಕೆಲಸ ಮಾಡುತ್ತಿದ್ದೇನೆ. ಔರಾದ್ ಕ್ಷೇತ್ರದ ಸಮಗ್ರ ಅಭಿವೃದ್ಧಿ ಸಂಕಲ್ಪದೊಂದಿಗೆ ಯೋಜನೆ ಹಾಕಿಕೊಂಡಿದ್ದು, ಇದಕ್ಕೆ ಶಿಕ್ಷಕರ ಸಹಕಾರ ಬೇಕೇಬೇಕು.
| ಪ್ರಭು ಚವ್ಹಾಣ್ ಶಾಸಕ
ಶಿಷ್ಟಾಚಾರ ಉಲ್ಲಂಘನೆ ಕಾಂಗ್ರೆಸ್ ಪ್ರತಿಭಟನೆ: ಔರಾದ್‌ನಲ್ಲಿ ಶನಿವಾರ ಶಿಕ್ಷಣ ಇಲಾಖೆ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಶಿಷ್ಟಾಚಾರ ಉಲ್ಲಂಸಲಾಗಿದೆ ಎಂದು ಆರೋಪಿಸಿ ಕೆಪಿಸಿಸಿ ಸಾಮಾಜಿಕ ಮಾಧ್ಯಮ ಪ್ರಧಾನ ಕಾರ್ಯದರ್ಶಿ ಸುಧಾಕರ್ ಕೊಳ್ಳುರ್ ನೇತೃತ್ವದಲ್ಲಿ ಕಾರ್ಯಕರ್ತರು ಮಿಂಚಿನ ಪ್ರತಿಭಟನೆ ನಡೆಸಿದರು. ಕಾರ್ಯಕ್ರಮ ಶುರುವಾಗುವಾಗ ಸ್ಥಳಕ್ಕೆ ಆಗಮಿಸಿ ಧರಣಿ ಕುಳಿತ ಕಾರ್ಯಕರ್ತರು, ಇದು ಸರ್ಕಾರದ ಕಾರ್ಯಕ್ರಮ. ವೇದಿಕೆ ಬ್ಯಾನರ್‌ನಲ್ಲಿ ಸ್ಥಳೀಯ ಶಾಸಕರ ಭಾವಚಿತ್ರ ಮಾತ್ರ ಹಾಕಿ ಸಿಎಂ, ಡಿಸಿಎಂ, ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಚಿತ್ರಗಳನ್ನು ಹಾಕದೆ ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂದು ದೂರಿದರು. ಈ ವೇಳೆ ಶಾಸಕ ಪ್ರಭು ಚವ್ಹಾಣ್ ಮತ್ತು ಕೊಳ್ಳುರ್ ನಡುವೆ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಗಮನಿಸಿದ ಸಿಪಿಐ ರಘುವೀರ ಸಿಂಗ್ ಠಾಕೂರ್ ಮತ್ತು ಪಿಎಸ್‌ಐ ವಾಸೀಮ್ ಪಟೇಲ್ ಅವರು ಕೊಳ್ಳುರ್ ಅವರನ್ನು ಹೊರಗಡೆ ಕರೆದೊಯ್ದರು. ಪ್ರಮುಖರಾದ ಸುನೀಲ ಮಿತ್ರಾ, ಚಂದು ಡಿ.ಕೆ., ರಾಜು ಮುಧಾಳೆ, ರತ್ನದೀಪ ಕಸ್ತೂರೆ, ಮಾರುತಿ ಸೂರ್ಯವಂಶಿ, ಆನಂದ ಕಾಂಬ್ಳೆ, ರಾಹುಲ್ ಜಾಧವ್, ಅನೀಲ ವಡೆಯರ್, ಸೂರ್ಯಕಾಂತ ಕಾಂಬ್ಳೆ ಇತರರಿದ್ದರು.