

ಶಹಾಪುರ: ಶಾಲಾ ಶಿಕ್ಷಕರಿಗೆ ಬೋಧಕೇತರ ಕಾರ್ಯಕ್ಕೆ ನಿಯೋಜಿಸುವುದು ಕೂಡಲೇ ನಿಲ್ಲಿಸಬೇಕು. ಈ ಕುರಿತ ಆದೇಶ ಕೂಡಲೇ ರದ್ದುಪಡಿಸಬೇಕುಎಂದು ಆಗ್ರಹಿಸಿ ಜಿಲ್ಲಾ ಸರ್ಕಾರಿ ನೌಕರರ ಸಂಘ, ತಾಲೂಕು ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಸೋಮವಾರ ತಾಲೂಕು ದಂಡಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಈ ವೇಳೆ ಮಾತನಾಡಿದ ನೌಕರರ ಸಂಘದ ಅಧ್ಯಕ್ಷ ರಾಯಪ್ಪ ಗೌಡ ಹುಡೇದ್, ಶಿಕ್ಷಕರ ಸಂಘಗಳ ಅಧ್ಯಕ್ಷರಾದ ಲಕ್ಷö್ಮಣ ಲಾಳಸೇರಿ, ಭೀಮನಗೌಡ ತಳೇವಾಡ್, ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೇ.೪೦ ಶಿಕ್ಷಕರ ಹುದ್ದೆ ಖಾಲಿ ಇವೆ. ಇದರಿಂದ ಈಗಾಗಲೇ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ. ಇಂತಹ ವೇಳೆ ಇಲಾಖೆ ಹಲವಾರು ಯೋಜನೆಗಳಾದ ಬಿಸಿಊಟ ನಿರ್ವಹಣೆ, ಎಸ್‌ಟಿಎಸ್ ನಿರ್ವಹಣೆ, ಜನಗಣತಿ, ಜಾತಿಗಣತಿ, ಮೊಟ್ಟೆ-ಬಾಳೆಹಣ್ಣು ವಿತರಣೆ, ಹಾಲು ವಿತರಣೆ, ಶಾಲೆಯಿಂದ ಹೊರಗುಳಿದ ಮಕ್ಕಳ ಗಣತಿ ಜತೆಗೆ ಶಾಲೆಗೆ ಕರೆ ತರುವುದು ಅಂತರ್ಜಾಲ ಸೇವೆ ಹೀಗೆ ಹಲವಾರು ಬೋಧಕೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದರಿಂದ ಮಕ್ಕಳಿಗೆ ಪಾಠ ಹೇಳಲು ಆಗುತ್ತಿಲ್ಲ ಎಂದು ವಿವರಿಸಿದ್ದಾರೆ.
ಈಗಾಗಲೇ ಶಿಕ್ಷಕರನ್ನು ಬೂತಮಟ್ಟದ ಅಧಿಕಾರಿಗಳನ್ನು ನೇಮಕ ಹಾಗೂ ಹೆಚ್ಚುವರಿಯಾಗಿ ಅಂಗನವಾಡಿಯವರ ಸ್ಥಳದಲ್ಲಿ ಮತ್ತೆ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಇದರಿಂದ ಶಿಕ್ಷಕರು ಮಕ್ಕಳ ಬೋಧನಾ ಕಾರ್ಯಕ್ಕೆ ಸಿಮಿತವಾಗದೆ ಹೆಚ್ಚುವರಿ ಕೆಲಸಗಳಲ್ಲಿ ತೊಡಗಿರುವುದರಿಂದ ಶೈಕ್ಷಣಿಕ ಗುಣಮಟ್ಟ ಕುಸಿಯುತ್ತಿದೆ. ಹೀಗಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿದ್ಯಾರ್ಥಿಗಳ ಫಲಿತಾಂಶ ಗುಣಮಟ್ಟ ಕಡಿಮೆಯಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಬೋಧನೇತರ ಕಾರ್ಯಗಳಿಗೆ (ಬಿಎಲ್‌ಓ) ಬಳಸದೇ ಶೈಕ್ಷಣಿಕ ಗುಣಮಟ್ಟ ಸುಧಾರಿಸಲು ಮತ್ತು ಕೆಕೆ ಭಾಗಕ್ಕೆ ಹಿಂದುಳಿದ ಹಣೆಪಟ್ಟಿ ಅಳಿಸಲು ಶಿಕ್ಷಕರಿಗೆ ಕೇವಲ ಬೋಧನಾ ಕಾರ್ಯಕ್ಕೆ ಸಿಮಿತಗೊಳಿಸಬೇಕೆಂದು ಅವರು ಆಗ್ರಹಿಸಿದರು. ಸಿದ್ದಣ್ಣಗೌಡ ಗೂಗಲ್ ಇತರರಿದ್ದರು.