ಶಿಕ್ಷಕರಿಗೆ ಪೂರ್ವಸಿದ್ಧತೆ ಮುಖ್ಯ

20 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಶಿಕ್ಷಕರು ಪೂರ್ವಸಿದ್ಧತೆ ಇಲ್ಲದೆ ಪಾಠ ಹೇಳಬಾರದು. ನಮಗಿಂತ ಮಕ್ಕಳಿಗೆ ಜ್ಞಾನ ಕಡಿಮೆ ಎಂಬ ಭಾವನೆಯಿಂದ ಹೊರ ಬರಬೇಕು. ನಮ್ಮಲ್ಲಿ ಮಕ್ಕಳಿಗಿಂತ ಜ್ಞಾನದ ಮಟ್ಟ ಎತ್ತರಕ್ಕಿದ್ದರೆ ಮಾತ್ರ ಶಿಕ್ಷಕರನ್ನು ಗೌರವದಿಂದ ನೋಡುತ್ತಾರೆ ಎಂದು ಎಕ್ಸಲೆಂಟ್ ಕೋಚಿಂಗ್ ಸೆಂಟರ್ ಮುಖ್ಯಸ್ಥ ಸತೀಶ ಜಾಧವ ಹೇಳಿದರು.
ನಗರದ ಚಿಲಿಪಿಲಿ ಸಂಸ್ಥೆಯು ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಸಹಯೋಗದಲ್ಲಿ ಎಕ್ಸಲೆಂಟ್ ಟ್ಯುಟೋರಿಯಲ್‌ನಲ್ಲಿ ಶುಕ್ರವಾರ ಏರ್ಪಡಿಸಿದ್ದ ಚಿಲಿಪಿಲಿ ವಿಜ್ಞಾನ ಮೇಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂದಿನ ತಂತ್ರಜ್ಞಾನ ಯುಗದಲ್ಲಿ ಮಕ್ಕಳಿಗೆ ಎಲ್ಲ ಮೂಲಗಳಿಂದಲೂ ಜ್ಞಾನ ಸಿಗುತ್ತಿದೆ. ಅದನ್ನು ಸರಿಯಾದ ಕ್ರಮದಲ್ಲಿ ಮನನ ಮಾಡಿಕೊಡುವ ಕೆಲಸ ಶಿಕ್ಷಕರದ್ದು. ಮಗುವಿನಲ್ಲಿ ಅಡಗಿರುವ ಅಗಾಧ ಶಕ್ತಿ ಗುರುತಿಸಿ ಅವರಿಗೆ ಜ್ಞಾನ ನೀಡಿ ಮಾರ್ಗದರ್ಶನ ನೀಡಬೇಕು ಎಂದರು.
ಸಂಚಾಲಕ ಡಾ. ಲಿಂಗರಾಜ ರಾಮಾಪುರ ಮಾತನಾಡಿ, ಮೇಳದಲ್ಲಿ ಕಲಿತ ವಿಷಯಗಳನ್ನು ಗೆಳೆಯರಿಗೂ ಕಲಿಸಿ. ಮಕ್ಕಳಲ್ಲೂ ಕಲಿಸುವ ಸಾಮರ್ಥ್ಯ ಇದೆ ಎಂಬುದನ್ನು ಗುರುತಿಸಲು ಒಳ್ಳೆ ಅವಕಾಶ ಎಂದರು.
ಅಧ್ಯಕ್ಷತೆ ವಹಿಸಿದ್ದ ಚಿಲಿಪಿಲಿ ಸಂಸ್ಥೆ ಅಧ್ಯಕ್ಷ ಶಂಕರ ಹಲಗತ್ತಿ ಮಾತನಾಡಿ, ಶಾಲೆಗಳಲ್ಲಿ ಪಠ್ಯಕ್ಕೆ ಸೀಮಿತವಾಗಿ ಕಲಿಕೆ ಇರುತ್ತದೆ. ಇಂತಹ ಕಾರ್ಯಾಗಾರಗಳು ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಹೊಸ ದೃಷ್ಟಿಕೋನದಿಂದ ಕಲಿಸುವ ಮತ್ತು ಕಲಿಯುವ ಮಾರ್ಗಗಳನ್ನು ತಿಳಿಸಿಸುತ್ತವೆ. ಬಾಲವಿಕಾಸ ಅಕಾಡೆಮಿ ಇಂತಹ ಕಾರ್ಯಾಗಾರ ಮಾಡಲು ಹೆಚ್ಚಿನ ಅವಕಾಶ ನೀಡಬೇಕು ಎಂದರು.
ಕಾರ್ಯಾಗಾರದಲ್ಲಿ ಸಿದ್ಧಗೊಂಡ ಮಾದರಿಗಳನ್ನು ಮಕ್ಕಳು, ಶಿಕ್ಷಕರು ಪ್ರದರ್ಶಿಸಿದರು. ಎಸ್.ಬಿ. ಪರ್ವತಗೌಡರ, ಜಿ.ಎಸ್. ಹತ್ತಿಮತ್ತೂರ, ಸುನಂದ ನವಲೆ, ರೇಖಾ ಹಂಚಿನಮನಿ, ಸುಮಿತ್ರಾ ಪತ್ತಾರ, ಶಿವಶಂಕರಯ್ಯ ರಾಚಯ್ಯನವರ, ಸಿಕಂದರ ದಂಡಿನ, ಇತರರು ಇದ್ದರು. ಕಾರ್ಯಾಗಾರದಲ್ಲಿ 8 ಜಿಲ್ಲೆಗಳ ನೂರಾರು ಮಕ್ಕಳು, ಶಿಕ್ಷಕರು ಪಾಲ್ಗೊಂಡಿದ್ದರು.
ಪ್ರಕಾಶ ಬಾಳಿಕಾಯಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net