

ಕೆಂಭಾವಿ : ಶಿಕ್ಷಣ ಪ್ರತಿ ಮಕ್ಕಳ ಮಹತ್ವದ ಹಂತ. ಶಿಕ್ಷಕರಿಗೆ ಗುರುವಿನ ಸ್ಥಾನ ನೀಡಿ ಶ್ರದ್ಧೆಯಿಂದ ಕಲಿಯುವುದು ವಿದ್ಯಾರ್ಥಿಯ ಸದ್ಗುಣಗಳ ಲಕ್ಷಣ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ಭೀಮಾಶಂಕರ ಜೋಶಿ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಏರ್ಪಡಿಸಿದ್ದ ನಿವೃತ್ತ ಉಪನ್ಯಾಸಕ ದಿ.ಚಂದ್ರಭಟ್ಟ ಜೋಶಿ ಸ್ಮರಣಾರ್ಥ ಕೊಡಮಾಡುವ ಜ್ಞಾನಚಂದ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಪುಸ್ತಕದ ಜ್ಞಾನ ಮಸ್ತಕಕ್ಕೆ ಬರಬೇಕಾದರೆ ವಿದ್ಯಾರ್ಥಿ ಮೊದಲು ತಮ್ಮ ಶಿಕ್ಷಕರಿಗೆ ಗೌರವ ನೀಡಬೇಕು. ಗುರುವಿನ ಸ್ಥಾನದಲ್ಲಿ ಕಂಡು ಅವರು ನೀಡುವ ಶಿಕ್ಷಣ ಮನದಟ್ಟು ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಿಕ್ಷಣ ಇಂದು ವ್ಯಾಪಾರೀಕರಣವಾಗಲು ನಾವೇ ಕಾರಣರು. ಸ್ವಂತ ಬುದ್ಧಿಶಕ್ತಿ ಬಲದಿಂದ ಶ್ರದ್ಧೆಯಿಟ್ಟು ಕಲಿತು ಮುಂದೆ ಬಂದಾಗ ಮಾತ್ರ ಉನ್ನತ ಸ್ಥಾನಗಳು ನಮ್ಮನ್ನು ಅರಸಿ ಬರುತ್ತವೆ ಎಂದು ತಿಳಿಹೇಳಿದರು.
ಶ್ರೀ ಗಜಾನನ ಮಹಾರಾಜ ಸಾನ್ನಿಧ್ಯ ವಹಿಸಿದ್ದರು. ಶ್ರೀಪಾದಭಟ್ಟ ಜೋಶಿ, ದೇವಿದಾಸ ಭಟ್ಟ, ದತ್ತಂಭಟ್ಟ ಜೋಶಿ, ಶಿವಭಟ್ಟ, ಸತೀಶಭಟ್ಟ, ಯಂಕೂಬಾಯಿ ಜೋಶಿ, ರೂಪಾ ಜೋಶಿ, ಪವಿತ್ರಾ, ಪ್ರಿಯಾ ಇತರರಿದ್ದರು. ಶಿಕ್ಷಕ ಗಿರೀಶಭಟ್ಟ ಜೋಶಿ ಪ್ರಾಸ್ತಾವಿಕ ಮಾತನಾಡಿದರು. ವಲ್ಲಭಭಟ್ಟ ಜೋಶಿ ಸ್ವಾಗತಿಸಿದರು. ಗುಂಡಭಟ್ಟ ಜೋಶಿ ನಿರೂಪಣೆ ಮಾಡಿ ವಂದಿಸಿದರು. ಕನ್ನಡ ಪಂಡಿತ, ಸಾಹಿತಿ ಶಿವಶರಣಪ್ಪ ಶಿರೂರ ಅವರಿಗೆ ಜ್ಞಾನಚಂದ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.