

ಬೀದರ್: ಶಿಕ್ಷಕರಿಂದ ಮಾತ್ರ ಸುಂದರ ಸಮಾಜ ನಿರ್ಮಾಣ ಸಾಧ್ಯವಿದೆ ಎಂದು ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಬೀದರ್‍ನ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಪ್ರೊ. ಡಿ.ಎಂ. ಮದರಿ ನುಡಿದರು.
ನಗರದ ಸದ್ಗುರು ಸಿದ್ಧಾರೂಢ ಮಹಿಳಾ ಪದವಿ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಕೇಕ್ ಕತ್ತರಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿನ ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಲ್ಪಿಸುವ ಶಕ್ತಿ ಶಿಕ್ಷಕರಿಗೆ ಇದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ನಾಗಪ್ಪ ಜಾನಕನೋರ ಮಾತನಾಡಿ, ಶಿಕ್ಷಕರು ಸಮಾಜ ಕಟ್ಟುವ ಕೆಲಸ ಮಾಡುತ್ತಾರೆ. ಶಿಕ್ಷಕರನ್ನು ಗೌರವಿಸುವವರು ಜೀವನದಲ್ಲಿ ಎತ್ತರದ ಸ್ಥಾನಕ್ಕೆ ಏರುತ್ತಾರೆ ಎಂದು ಹೇಳಿದರು.
ಚಂದ್ರಪ್ಪ ಗೌರಶೆಟ್ಟಿ ಪದವಿಪೂರ್ವ ಕಾಲೇಜು ಉಪನ್ಯಾಸಕ ವೀರಣ್ಣ ಕಾಳಮದರ್ಗಿ, ಉಪನ್ಯಾಸಕ ಗೌತಮ ಭೋಸ್ಲೆ ಮಾತನಾಡಿದರು.
ಉಪನ್ಯಾಸಕರಿಗೆ ಶಾಲು ಹೊದಿಸಿ ಸತ್ಕರಿಸಿ, ನೆನಪಿನ ಕಾಣಿಕೆ ನೀಡಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಉಪನ್ಯಾಸಕರಾದ ಈಶ್ವರ ರೆಡ್ಡಿ, ನಟರಾಜ ಸುತಾರ್, ರಾಜಶೇಖರ ಸಜ್ಜನ್, ಬಸವರಾಜ ಬಿರಾದಾರ, ರಾಮ ಜಮಾದಾರ್, ವೆಂಕಟ ರಾಠೋಡ್, ಪಂಡಿತ ಗಂಗಶೆಟ್ಟಿ, ರಾಖಿ ಕಾಡಗೆ, ಶ್ರೀಲತಾ, ಮಂಗಲಾ ಲಕ್ಕಶೆಟ್ಟಿ, ಸಪ್ನ ಸ್ವಾಮಿ, ಅರ್ಚನಾ ಹಲಬುರ್ಗೆ, ವಿಜಯಲಕ್ಷ್ಮಿ ಇದ್ದರು.
ಅನುಜಾ ನಿರೂಪಿಸಿದರು. ಭಾಗ್ಯಶ್ರೀ ಸ್ವಾಗತಿಸಿದರು. ಸಂಗೊಳಗೆ ಅನುಜಾ ವಂದಿಸಿದರು.