ಶಿಕ್ಷಕರ ಹುದ್ದೆ ಭರ್ತಿಗೆ ಆದ್ಯತೆ ಇರಲಿ

31BLK1
 ಭಾಲ್ಕಿಯ ಪುರಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣಾ ಕಾರ್ಯಾಗಾರವನ್ನು ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಉದ್ಘಾಟಿಸಿದರು. ಸಲೀಂ ಪಾಷಾ, ಸಯ್ಯದ್ ಫುರಕಾನ್ ಪಾಶಾ, ಸಿ.ಜಿ.ಹಳ್ಳದ್, ಮನೋಹರ ಹೋಳಕರ ಇತರರಿದ್ದರು.
Published on

ಭಾಲ್ಕಿ: ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಯಾಗಲು ಸರ್ಕಾರ ಕಲ್ಯಾಣ ಕರ್ನಾಟಕ ಭಾಗದಲ್ಲಿಯ ಖಾಲಿ ಇರುವ ಹುದ್ದೆಗಳ ಭರ್ತಿಗೆ ಆದ್ಯತೆ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಹೇಳಿದರು.

ಪಟ್ಟಣದ ಪುರಭವನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಘಟಕದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಸುಧಾರಣಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಆರ್ಟಿಕಲ್ ೩೭೧(ಜೆ) ಪ್ರಕಾರ ಕಲ್ಯಾಣ ಕರ್ನಾಟಕ ಭಾಗಕ್ಕೆ ಖಾಲಿ ಇರುವ ಹುದ್ದೆಗಳನ್ನು ತುಂಬಿಕೊಳ್ಳಲು ಆರ್ಥಿಕ ಇಲಾಖೆಯ ಅನುಮತಿ ಬೇಕಿಲ್ಲ. ಆದರೆ ಸರ್ಕಾರ ೩೭೧ (ಜೆ) ಅನುಸಂಧಾನ ಸರಿಯಾಗಿ ಜಾರಿ ಮಾಡುತ್ತಿಲ್ಲ. ೩೭೧(ಜೆ)ರೂಲ್ಸ್​ಗಳಲ್ಲಿ ತುಂಬಾ ಗೊಂದಲಗಳಿವೆ. ಈ ಗೊಂದಲಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ಮಾಡಿ ೩೭೧(ಜೆ)ಗೆ ೨೦೨೩ ರ ಫೆ.೨ ರಂದು ಹೊಸ ರೂಲ್ಸ್​​ಗಳನ್ನು ಸೇರಿಸಲಾಗಿದೆ. ಇದರ ಪರಿಣಾಮವಾಗಿ ಇಲ್ಲಿಯ ಶಿಕ್ಷಕರ ಬಡ್ತಿಯಲ್ಲಿ ಸಹಕಾರವಾಗುವುದು ಎಂದು ಹೇಳಿದರು.

ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಲೀಂ ಪಾಷಾ ಮಾತನಾಡಿ, ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮ ಪಡಿಸುವ ನಿಟ್ಟಿನಲ್ಲಿ ಶಿಕ್ಷಕರು, ಮುಖ್ಯ ಶಿಕ್ಷಕರು ಹೆಚ್ಚಿನ ಶ್ರಮಪಡಬೇಕು ಎಂದು ಹೇಳಿದರು.

ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಸಯ್ಯದ್ ಫುರಕಾನ್ ಪಾಶಾ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜಿ.ಹಳ್ಳದ್ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಸಮನ್ವಯಾಧಿಕಾರಿ ಮನೋಹರ ಹೋಳಕರ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ರಾಜಕುಮಾರ ಜೋಳದಪಕೆ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶೇಖ್ ಮಹಬೂಬ್ ಪಟೇಲ, ಜಿಲ್ಲಾ ಕಾರ್ಯದರ್ಶಿ ಜೀತೆಂದ್ರ ಬಿರಾದಾರ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ದತ್ತಾತ್ರಿ ಕಾಟಕರ, ಕಾರ್ಯದರ್ಶಿ ಬಾಲಾಜಿ ಕಾಂಬಳೆ, ದಿಲೀಪಕುಮಾರ ಬಿರಾದಾರ, ಸಂಘದ ನಿರ್ದೇಶಕಿ ಪುಷ್ಪಾವತಿ ಚಕುರ್ತೆ, ಇಸಿಇ ಮಲ್ಲಿಕಾರ್ಜುನ ಕನ್ನಾಳೆ, ಸಹದೇವ.ಜಿ, ಬಿಆರ್‌ಪಿ ಚೇತನಾ ಚನಶೆಟ್ಟಿ ಇತರರಿದ್ದರು. ಸಹದೇವ ಗೌಡಗಾವೆ ಸ್ವಾಗತಿಸಿದರು. ರಾಜಕುಮಾರ ಬರಸೂರೆ ನಿರೂಪಣೆ ಮಾಡಿದರು. ದತ್ತು ಕಾಟಕರ ವಂದಿಸಿದರು.

ಪ್ರಾಥಮಿಕ, ಮತ್ತು ಪೂರ್ವಪ್ರಾಥಮಿಕ ಹಂತದಲ್ಲಿಯ ಶಿಕ್ಷಣ ವ್ಯವಸ್ಥೆ ಸರಿಪಡಿಸಿದಾಗ ಮಾತ್ರ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಫಲಿತಾಂಶ ಉತ್ತಮ ಪಡಿಸಲು ಸಾಧ್ಯ. ಪ್ರಾಥಮಿಕ ಶಿಕ್ಷಣಕ್ಕೆ ಉತ್ತಮ ಮೇಲ್ವಿಚಾರಣೆ ನಡೆಸಿ ಅಲ್ಲಿಯ ಶಿಕ್ಷಣ ಪದ್ಧತಿ ಉತ್ತಮ ಪಡಿಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮಪಡಬೇಕು.

| ಶಶೀಲ್ ನಮೋಶ, ವಿಧಾನ ಪರಿಷತ್ ಸದಸ್ಯ 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net