ಶಿಕ್ಷಕರ ಹಿತ ಕಾಯುವವರಿಗೆ ಮತ ಚಲಾಯಿಸಿ

N.E.Nataraja
Published on

ಚಿತ್ರದುರ್ಗ: ಶಿಕ್ಷಕರ ಕ್ಷೇಯೋಭಿವೃದ್ಧಿಗಾಗಿ ಯಾರು ಶ್ರಮಿಸುತ್ತಾರೋ ಅಂತಹ ಅಭ್ಯರ್ಥಿಗೆ ಮೊದಲ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸಿ ಎಂದು ಆಗ್ನೇಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎನ್.ಈ.ನಟರಾಜ್ ಮತದಾರರಲ್ಲಿ ಮನವಿ ಮಾಡಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಂದು ದಿನದ ಆಮಿಷಕ್ಕೆ ಒಳಗಾಗಿ ಜೀವನವಿಡಿ ನೋವು ಅನುಭವಿಸಬೇಕಾಗುತ್ತದೆ. ಆದ್ದರಿಂದ ಯಾವ ಕಾರಣಕ್ಕೂ ಆಸೆ-ಆಮಿಷಗಳಿಗೆ ಒಳಗಾಗದೆ ಹಕ್ಕು ಚಲಾಯಿಸಿ. ಶಿಕ್ಷಕ ವೃತ್ತಿಯ ಪಾವಿತ್ರೃತೆ ಇನ್ನಷ್ಟು ಹೆಚ್ಚಿಸಿ ಎಂದರು.

ಕಳೆದೆರಡು ದಶಕದಿಂದಲೂ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವ ಇರುವವರು ಆಯ್ಕೆಯಾಗುತ್ತಿಲ್ಲ. ಅಸಮರ್ಥರನ್ನು ಗೆಲ್ಲಿಸುವ ಕೆಲಸ ಆಗುತ್ತಿದೆ. ಇದಕ್ಕೆ ಅರ್ಹ ಮತದಾರರಲ್ಲಿ ಶೇ 20ರಷ್ಟು ಮಂದಿ ಆಮಿಷಕ್ಕೆ ಒಳಗಾಗುತ್ತಿರುವುದೇ ಕಾರಣ ಎಂದು ದೂರಿದರು.

ರಾಜ್ಯದ ಶಿಕ್ಷಕರಿಗಿಂತಲೂ ಕೇರಳದಲ್ಲಿ 12 ಸಾವಿರ ರೂ., ತೆಲಂಗಾಣದಲ್ಲಿ 21 ಸಾವಿರ ರೂ. ವೇತನ ಹೆಚ್ಚಿದೆ. ಇದು ಸಂತಸದಿಂದ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡಲು ಸಹಕಾರಿಯಾಗಿದೆ. ಈ ವ್ಯವಸ್ಥೆ ನಮ್ಮಲ್ಲೂ ಜಾರಿಯಾಗಬೇಕು. ಆ ನಿಟ್ಟಿನಲ್ಲಿ ಹೋರಾಡಲು ಬದ್ಧನಾಗಿದ್ದೇನೆ ಎಂದು ಭರವಸೆ ನೀಡಿದರು.

ದೆಹಲಿ ಮಾದರಿಯಲ್ಲಿ ಕರ್ನಾಟಕ ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳನ್ನು ಮೇಲ್ದರ್ಜೆಗೇರಿಸಿ ಉತ್ತಮ ಮೂಲಸೌಕರ್ಯ ಕಲ್ಪಿಸಿ ಶೈಕ್ಷಣಿಕ ಪ್ರಗತಿ ಸಾಧಿಸುವುದು. ವರ್ಷಕ್ಕೆ ಗಳಿಕೆ ರಜೆಯನ್ನು 10ರ ಬದಲು 20ಕ್ಕೆ ಹೆಚ್ಚಿಸುವುದು ಸೇರಿ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವುದೇ ನನ್ನ ಮೊದಲ ಆದ್ಯತೆ ಎಂದರು.

ನಾಗರಾಜ್, ಇಕ್ಬಾಲ್ ಬಾಷಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net