ಶಿಕ್ಷಕರ ಸೇವೆ ಅನನ್ಯ

Published on

ಬಳ್ಳಾರಿ : ಪ್ರತಿಯೊಬ್ಬ ವಿದ್ಯಾರ್ಥಿಗಳ ಜೀವನದಲ್ಲಿ , ಶಿಕ್ಷಕರ ಪಾತ್ರ ಮುಖ್ಯವಾಗಿದೆ ಎಂದು ರೆಡ್ಡಿ ಬಳಗದ ಮುಖಂಡ ಟಿ. ಶಿವಕುಮಾರರೆಡ್ಡಿ ಹೇಳಿದರು.
ಸಿರುಗುಪ್ಪ ತಾಲೂಕಿನ ತಾಳೂರು ಗ್ರಾಮದಲ್ಲಿ ರೆಡ್ಡಿ ಗೆಳೆಯರ ಬಳಗದಿಂದ ಶ್ರೀ ಗಣೇಶ ಹಬ್ಬದ ಹಿನ್ನಲೆ ಮುಖ್ಯಶಿಕ್ಷಕ ದಿ. ಯು. ಹಿರಿಯಪ್ಪ ಸ್ಮರಣಾರ್ಥ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ, ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಾಗೂ ಅನ್ನದಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿ ಜೀವನದಲ್ಲಿ ಮಾಡಿದ ತಪ್ಪುಗಳನ್ನು ತಿದ್ದಿ, ಸರಿಯಾದ ಹಾದಿಯಲ್ಲಿ ತರುವ ಗುರುವಿನ ಸೇವೆ ಅನನ್ಯ. ಯಾವುದೇ ಒಬ್ಬ ಶಿಕ್ಷಕ, ಪ್ರತಿಯೊಬ್ಬ ವಿದ್ಯಾರ್ಥಿಯ ಭವಿಷ್ಯ ಉಜ್ವಲವಾಗಿರಲು ನಿತ್ಯ ಶ್ರಮಿಸುವರು. ಮುಖ್ಯಶಿಕ್ಷಕ ದಿ. ಹಿರಿಯಪ್ಪ ಅವರು ಗ್ರಾಮದ ಸಾವಿರಾರು ವಿದ್ಯಾರ್ಥಿಗಳಿಗೆ ನಿಸ್ವಾರ್ಥ ಸೇವೆಯಿಂದ ಶಿಕ್ಷಣ ಕಲ್ಪಿಸಿದ್ದಾರೆ. ಇಂದು ಅನೇಕ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಂಡಿದ್ದಾರೆ ಎಂದು ಹೇಳಿದರು.
ಇದೇ ವೇಳೆ ವಿಮ್ಸ್ ರಕ್ತ ನಿಧಿ ಕೇಂದ್ರ ಸಹಯೋಗದೊಂದಿಗೆ ನಡೆದ ರಕ್ತದಾನ ಶಿಬಿರದಲ್ಲಿ ಕೇವಲ ಯುವಕರು ಮಾತ್ರವಲ್ಲದೆ ಹಿರಿಯರು ಕೂಡ ಭಾಗವಹಿಸಿ ರಕ್ತದಾನ ಮಾಡಿದ್ದು ವಿಶೇಷವಾಗಿತ್ತು. ಗ್ರಾಮದ ಮೂರ ನೂರಕ್ಕೂ ಅಧಿಕ ಜನರಿಗೆ ಆರೋಗ್ಯ ತಪಾಸಣೆ ನಡೆಸಿ ಹಾಗೂ ಔಷಧಿಗಳನ್ನು ನೀಡಲಾಯಿತು.
ಪ್ರಮುಖರಾದ ಮಹೇಂದ್ರರೆಡ್ಡಿ, ಗಾದಿಲಿಂಗರೆಡ್ಡಿ, ಸತ್ಯರೆಡ್ಡಿ, ರಾಜಪ್ಪ, ಚಂದ್ರಶೇಖರರೆಡ್ಡಿ, ಬಸವನಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net