

ಕಲಬುರಗಿ: ಎರಡು ವರ್ಷದಿಂದ ಹೊಸದಾಗಿ ರಚನೆಯಾದ ತಾಲೂಕುಗಳ ರಾಷ್ಟಿಯ ಮಾಧ್ಯಮಿಕ ಶಿಕ್ಷಣ ಅಭಿಯಾನ (ಆರ್‌ಎಂಎಸ್‌ಎ) ಪ್ರೌಢ ಶಾಲೆಗಳ ಸಿಬ್ಬಂದಿ ವೇತನ ನಾಲ್ಕೈದು ತಿಂಗಳು ವಿಳಂಬವಾಗಿ ಪಾವತಿಯಾಗುತ್ತಿದ್ದು, ಇದರಿಂದ ಶಾಲಾ ಶಿಕ್ಷಕರ ಜೀವನ ಕಷ್ಟಕರವಾಗಿದೆ. ಕೂಡಲೇ ವೇತನ ಪಾವತಿಸಬೇಕು ಎಂದು ಆಗ್ರಹಿಸಿ ನಗರದ ಶಾಲಾ ಶಿಕ್ಷಣ ಇಲಾಖೆ ಅಪರ ಆಯುಕ್ತರ ಕಚೇರಿಯಲ್ಲಿ ಪ್ರೌಢ ಶಾಲೆ ಸಹ ಶಿಕ್ಷಕರ ಸಂಘದಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು.
ಶಿಕ್ಷಕರು ಬ್ಯಾಂಕ್‌ನಿಂದ ಸಾಲ ಪಡೆದು ಸಮಯಕ್ಕೆ ಪಾವತಿಸಲು ಆಗದೆ ದಂಡ ಪಾವತಿಸುತ್ತಿದ್ದಾರೆ. ಈ ಬಗ್ಗೆ ಆಯುಕ್ತರ ಕಚೇರಿ, ಜೇವರ್ಗಿ, ಚಿತ್ತಾಪುರ, ಕಲಬುರಗಿ ಉತ್ತರ, ಚಿಂಚೋಳಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಅಳಲು ತೋಡಿಕೊಂಡರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಮಾತನಾಡಿ, ಆರ್‌ಎಂಎಸ್‌ಎ ಪ್ರೌಢ ಶಾಲೆಗಳ ಸಿಬ್ಬಂದಿ ವೇತನ ನಾಲ್ಕೈದು ದಿನದಲ್ಲಿ ಪಾವತಿಸಿ. ಬಿಇಒಗಳು ವೇತನ ಬೇಡಿಕೆ ಸಲ್ಲಿಸುವಾಗ ಹೊಸ ತಾಲೂಕುಗಳಿಗೆ ಹಂಚಿಕೆಯಾದ ಶಾಲೆಗಳ ವೇತನ ಅನುದಾನ ಬೇಡಿಕೆ ಪ್ರತ್ಯೇಕವಾಗಿ ಸಲ್ಲಿಸದಿರುವುರಿಂದ ಸಮಸ್ಯೆ ಉದ್ಭವವಾಗುತ್ತಿದೆ. ಬಿಇಒ ಕಚೇರಿ ಸಿಬ್ಬಂದಿ ನಿರ್ಲಕ್ಷ್ಯದಿಂದ ಶಿಕ್ಷಕರು ಪರದಾಡುವಂತಾಗಿದೆ. ವಾರದಲ್ಲಿ ಸಮಸ್ಯೆ ಪರಿಹರಿಸಬೇಕು. ಸಮಸ್ಯೆಗೆ ಕಾರಣರಾದ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಬೇಕು. ಪರಿಹಾರ ದೊರೆಯದಿದ್ದಲ್ಲಿ ಶಿಕ್ಷಕರು ತರಗತಿ ಬಹಿಷ್ಕರಿಸಿ ಪ್ರತಿಭಟನೆ ದಾರಿ ಹಿಡಿದರೆ ಶಿಕ್ಷಕರ ಪರ ನಿಲ್ಲುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಆಯುಕ್ತ ಡಾ.ಆಕಾಶ ಶಂಕರ, ಮನವಿ ಸ್ವೀಕರಿಸಿ ಕೂಡಲೇ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ಪ್ರೌಢಶಾಲಾ ಸಹ ಶಿP್ಷÀಕ ಸಂಘದ ಜಿಲ್ಲಾಧ್ಯಕ್ಷ ಮಹೇಶ ಹೂಗಾರ, ಉಪಾಧ್ಯಕ್ಷ ರಾಘವೇಂದ್ರ ರಡ್ಡಿ, ಕಾರ್ಯದರ್ಶಿ ಜಮೀಲ್ ಅಹ್ಮದ್, ಮಲ್ಲಿಕಾರ್ಜುನ ಸಲಗರ, ಮಹ್ಮದ್ ರಫಿಕ್, ದೇವಿಂದ್ರ ಬಿರಾದಾರ ಇತರರಿದ್ದರು.