

ಬಸವಕಲ್ಯಾಣ: ಶಿಕ್ಷಕರು ದೇಶದ ನಿರ್ಮಾತೃಗಳಾಗಬೇಕು. ಇದರ ಅವಶ್ಯಕತೆ ವಿಶಾಲವಾದ ನಮ್ಮ ಪ್ರಜಾಪ್ರಭುತ್ವದ ರಾಷ್ಟ್ರಕ್ಕಿದೆ ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.
ನಗರದ ಅನುಭವ ಮಂಟಪದ ಪರಿಸರದಲ್ಲಿ ಭಾಲ್ಕಿ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ಅಡಿಯಲ್ಲಿ ನಡೆಯುತ್ತಿರುವ ಅಲ್ಲಮ ಪ್ರಭು ಬಿ.ಇಡಿ. (ಶಿಕ್ಷಣ) ಮಹಾವಿದ್ಯಾಲಯ ತಳವಾಡ(ಕೆ) ವತಿಯಿಂದ ಗುರುವಾರ ಆಯೋಜಿಸಿದ್ದ ಪೌರತ್ವ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಶಿಕ್ಷಕರ ವೃತ್ತಿ ಅತ್ಯಂತ ಪವಿತ್ರವಾದದ್ದು, ಶಿಕ್ಷಕರಾಗುವ ನೀವು ಆತ್ಮವಿಶ್ವಾಸದೊಂದಿಗೆ ಕಾರ್ಯನಿರ್ವಹಿಸಬೇಕು ಎಂದರು.
ನೇತೃತ್ವ ವಹಿಸಿದ್ದ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಪೌರತ್ವ ಶಿಬಿರ ಪ್ರಶಿಕ್ಷಣಾರ್ಥಿಗಳಿಗೆ ಉತ್ತಮ ಜ್ಞಾನ ನೀಡುತ್ತಿದ್ದು, ಅವರನ್ನು ಜವಾಬ್ದಾರಿಯುತ ಶಿಕ್ಷಕರಾಗುವದಲ್ಲಿ ಸಹಕಾರಿಯಾಗಲಿದೆ ಎಂದು ಹೇಳಿದರು.
ಉಪನ್ಯಾಸಕರಾದ ವೀರಶೆಟ್ಟಿ ಭೂಯಾ, ಸುಭಾಷ ದರ್ಗಾ, ಮಾಣಿಕರಾವ ಪಾಂಚಾಳ, ರಾಜೇಂದ್ರ ವರವಟ್ಟಿ, ನೀಲಾಂಬಿಕಾ ಕೌಠಾ, ಇಂದ್ರನೀಲಾ ಹಾಗೂ ಭಾವಿ ಶಿಕ್ಷಕ-ಶಿಕ್ಷಕಿಯರು ಇದ್ದರು.