

ಹೊಸನಗರ; ಆನೆಗದ್ದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರ ವರ್ಗಾವಣೆ ವಿರೋಸಿ ವಿದ್ಯಾರ್ಥಿಗಳ ಸಮೇತ ಪಾಲಕರು ಶಿಕ್ಷಣ ಇಲಾಖೆ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಆನೆಗದ್ದೆ ಸರ್ಕಾರಿ ಶಾಲೆಯಲ್ಲಿ ಪ್ರಸ್ತುತ ನಾಲ್ವರು ಶಿಕ್ಷಕರಿದ್ದಾರೆ. 43 ಜನ ಮಕ್ಕಳಿದ್ದಾರೆ. ಈಗ ಏಕಾಏಕಿ ಒಬ್ಬ ಶಿಕ್ಷಕರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ. ಈ ಆದೇಶದಿಂದ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ತೊಂದರೆಯಾಗುತ್ತಿದೆ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎ.ಆರ್.ಸುರೇಶ್ ಆರೋಪಿಸಿದರು.
ಜಿಲ್ಲಾ ಬಿಜೆಪಿ ಪ್ರಮುಖ ನಿತಿನ್ ನಗರ ಮಾತನಾಡಿ, ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿ ಅಂತೀರಿ. ಇರುವ ಶಿಕ್ಷಕರನ್ನು ವರ್ಗಾವಣೆ ಮಾಡಿ ತರಗತಿ ನಡೆಸದಂತೆ ಮಾಡುತ್ತೀರಿ. ಹೀಗೆ ಮಾಡಿದರೆ ಸರ್ಕಾರಿ ಶಾಲೆಗಳು ಉಳಿಯೋದು ಹೇಗೆ ಎಂದು ಪ್ರಶ್ನಿಸಿದರು. ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಚ್ಚುವರಿ ಶಿಕ್ಷಕಿ ಅನ್ವಿತಾ ಅವರನ್ನು ಯಾವ ಕಾರಣಕ್ಕೂ ವರ್ಗಾವಣೆ ಮಾಡದಂತೆ ಪಾಲಕರು ಆಗ್ರಹಿಸಿದರು.
ಬಿಇಒ ಚೇತನಾ ಮಾತನಾಡಿ, ಯಾವುದೇ ಶಿಕ್ಷಕರ ವರ್ಗಾವಣೆ ತಡೆಯಲು ಬರುವುದಿಲ್ಲ. ಆದರೆ ಆ ಶಿಕ್ಷಕಿ ರಿಲೀವ್ ಆಗುವುದರೊಳಗೆ ಬೇರೊಬ್ಬ ಶಿಕ್ಷಕರನ್ನು ನಿಯೋಜನೆ ಮಾಡುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಎಸ್.ಚೈತ್ರಾ, ಪ್ರಮುಖರಾದ ಎಚ್.ಎನ್.ಇಂದಿರಾ, ಜ್ಯೋತಿ, ಸುಮಾ, ದಿವ್ಯಾ ಇಂದ್ರಮ್ಮ, ವಿದ್ಯಾ, ವೆಂಕಟೇಶ, ರಮೇಶ, ಸುಧಾಕರ, ಅಶೋಕ, ಚಂದ್ರಶೇಖರ, ಮಲ್ಲಪ್ಪ ಗೌಡ, ಶೇಖರಪ್ಪ, ಲಕ್ಷ್ಮೀಶ, ಪ್ರಶಾಂತ, ರೇಷ್ಮಾ, ಶಂಕರ ಆಚಾರ್ಯ ಇತರರಿದ್ದರು.