ಶಿಕ್ಷಕರ ವರ್ಗಾವಣೆ ಕರಡು ನಿಯಮಕ್ಕೆ ವಿರೋಧ

19 smg 6
Published on

ಶಿವಮೊಗ್ಗ: ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿ ರಾಜ್ಯ ಸರ್ಕಾರ ಹೊರಡಿಸಿದ ಕರಡು ನಿಯಮ ವಿರೋಧಿಸಿ ಕರವೇ ಯುವ ಸೇನೆ ಕಾರ್ಯಕರ್ತರು ಶುಕ್ರವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸರ್ಕಾರವು ಶಿಕ್ಷಕರಿಗೆ ಸಂಬಂಧಿಸಿದ ನಿಯಮಗಳನ್ನು ರೂಪಿಸುವುದಕ್ಕಿಂತ ಮುಂಚಿತವಾಗಿ ಶಿಕ್ಷಣ ತಜ್ಞರೊಂದಿಗೆ ಸಮಾಲೋಚನೆ ನಡೆಸಬೇಕಿತ್ತು. ಶಿಕ್ಷಣ ಸ್ನೇಹಿ ವರ್ಗಾವಣೆ ಹೆಸರಿನಲ್ಲಿ ಸರ್ಕಾರಿ ವರ್ಗಾವಣೆ ಕರಡು ನಿಯಮ 2020ರ ಅಂಶ 24ರಲ್ಲಿ ಅನಾವಶ್ಯಕವಾಗಿ ಇಲಾಖೆಯ ಪರಸ್ಪರ ವರ್ಗಾವಣೆ ವೇಳೆ ಸೇವಾವಧಿಯಲ್ಲಿ 1 ಬಾರಿ ಮಾತ್ರ ಪರಸ್ಪರ ವರ್ಗಾವಣೆಗೆ ಅವಕಾಶ ಎಂದು ಉಲ್ಲೇಖಿಸಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಪರಸ್ಪರ ವರ್ಗಾವಣೆಯಲ್ಲಿರುವ ಅವಕಾಶಕ್ಕೂ ಇಲಾಖೆ ಕತ್ತರಿ ಪ್ರಯೋಗ ಮಾಡಿರುವುದು ಶಿಕ್ಷಕರ ತೀವ್ರ ವಿರೋಧಕ್ಕೆ ಕಾರಣವಾಗಿದೆ. ಸದರಿ ಪರಸ್ಪರ ವರ್ಗಾವಣೆಯಿಂದ ಶಾಲೆಯಲ್ಲಿ ಶಿಕ್ಷಕರ ಕೊರತೆ ಆಗುವುದಿಲ್ಲ. ಶೈಕ್ಷಣಿಕ ಪ್ರಗತಿ, ಶಾಲಾ ಫಲಿತಾಂಶಕ್ಕೆ ತೊಂದರೆ ಆಗುವುದಿಲ್ಲ. ಪರಸ್ಪರ ವರ್ಗಾವಣೆ ಒಮ್ಮೆ ಮಾತ್ರ ಎಂಬ ನಿಯಮಕ್ಕೆ ತಿದ್ದುಪಡಿ ಮಾಡಬೇಕು. ಪರಸ್ಪರ ವರ್ಗಾವಣೆಗೆ ಮುಕ್ತ ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದರು.

ಒಬ್ಬ ಶಿಕ್ಷಕರ ಜಾಗಕ್ಕೆ ಮತ್ತೊಬ್ಬ ಶಿಕ್ಷಕ ಬರುವುದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಪರಸ್ಪರ ವರ್ಗಾವಣೆಯಲ್ಲಿ ಹಣದ ವ್ಯವಹಾರ ನಡೆಯುತ್ತದೆ ಎಂಬುದು ತಪ್ಪು ತಿಳಿವಳಿಕೆ. ಯಾರೋ ಒಬ್ಬರು ಮಾಡುವ ತಪ್ಪಿಗೆ ಇಡೀ ಶಿಕ್ಷಕ ಸಮುದಾಯಕ್ಕೆ ತೊಂದರೆಯಾಗುವ ನಿಯಮ ರೂಪಿಸುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ತಿಳಿಸಿದರು.

ಕರವೇ ಯುವ ಸೇನೆ ರಾಜ್ಯಾಧ್ಯಕ್ಷ ಹರೀಶ್, ಜಿಲ್ಲಾಧ್ಯಕ್ಷ ಎಚ್.ಎಸ್.ಕಿರಣ್​ಕುಮಾರ್, ಪ್ರಮುಖರಾದ ಎಸ್.ಬಿ.ಶಿವಕುಮಾರ್, ನಾಗರಾಜ್, ಪ್ರೀತಂ, ತ್ಯಾಗರಾಜ್, ಪರಶುರಾಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net