

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಅಭಿನಂದಿಸುವುದರಿಂದ ಮತ್ತಷ್ಟು ಸಾಧನೆ ಹಾಗೂ ಅಧ್ಯಯನ ನಡೆಸುವ ಉತ್ಸಾಹ ಮೂಡಲಿದೆ ಎಂದು ಶ್ರೀದೇವರಾಜ್ ಅರಸ್ ಎಜುಕೇಷನಲ್ ಟ್ರಸ್ಟ್ ಉಪಾಧ್ಯಕ್ಷ ಜೆ.ರಾಜೇಂದ್ರ ಹೇಳಿದರು.
ನಗರದ ಒಕ್ಕಲಿಗರ ಸಂಘದಲ್ಲಿ ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಾಶೆಟ್ಟಿಹಳ್ಳಿ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕ ನಾರಾಯಣಸ್ವಾಮಿ ಅವರಿಗೆ ಈ ಬಾರಿಯ ರಾಷ್ಟ್ರಮಟ್ಟದ ಶಿಕ್ಷಕ ಪ್ರಶಸ್ತಿ ಲಭಿಸಿರುವುದು ಮಾದರಿ ಸಂಗತಿ. ತಾಲೂಕಿಗೆ ಮತ್ತಷ್ಟು ಪ್ರಶಸ್ತಿಗಳು ಲಭಿಸುವಂತೆ ಶಿಕ್ಷಕರು ಶ್ರಮಿಸುವ ಮೂಲಕ ಆರ್ಥಿಕವಾಗಿ ಹಿಂದುಳಿದವರು ಹಾಗೂ ಗ್ರಾಮೀಣ ಪ್ರದೇಶದ ಮಕ್ಕಳ ಕಲಿಕೆಗೆ ಹೆಚ್ಚಿನ ಕಾಳಜಿ ವಹಿಸಬೇಕಿದೆ ಎಂದರು.
ಎಲ್ಲ ಸಮುದಾಯದ ಪಾಲಕರಲ್ಲೂ ಮಕ್ಕಳಿಗೆ ಗುಣಮಟ್ಟದ ವಿದ್ಯೆ ಕೊಡಿಸಬೇಕು ಎನ್ನುವ ಆಸೆ ಇದೆ. ಪಾಲಕರ ಆಸೆ ಈಡೇರಿಸಲು ಶಿಕ್ಷಕರು ಪ್ರಸ್ತುತ ದಿನಮಾನಕ್ಕೆ ತಕ್ಕಂತೆ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಕಂಪ್ಯೂಟರ್ ಶಿಕ್ಷಣಕ್ಕಿಂತಲೂ ವೇಗವಾಗಿ ಕೃತಕ ಬುದ್ಧಿಯ(ಎಐ)ಶಿಕ್ಷಣದಲ್ಲಿ ಹೆಚ್ಚಿನ ಅವಿಷ್ಕಾರಗಳು ನಡೆಯುತ್ತಿವೆ. ಹಾಗೆಯೇ ವಿದ್ಯಾರ್ಥಿಗಳೂ ತಮ್ಮ ಒಲವನ್ನು ಎಐ ತಂತ್ರಜ್ಞಾನ ಕುರಿತ ಶೈಕ್ಷಣಿಕ ಅಧ್ಯಯನಗಳ ಕಡೆಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಹಾಗಾಗಿ ಬದಲಾಗುತ್ತಿರುವ ಶೈಕ್ಷಣಿಕ ಪ್ರಗತಿಗೆ ನಾವುಗಳು ಹೊಂದಿಕೊಳ್ಳುವುದು ಅನಿವಾರ್ಯವಾಗಿದೆ ಎಂದರು. ಮುಖಂಡರಾದ ಸುರೇಶ್ ಬಾಬು, ಬಿ.ಕೃಷ್ಣಪ್ಪ, ಪೀಪಲ್ಸ್ ಟ್ರಸ್ಟ್ ಅಧ್ಯಕ್ಷ ಹರೀಶ್ ಉತ್ತಯ್ಯ, ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಎಸ್.ಎಂ.ಬಸವರಾಜು, ತಾಲೂಕು ಅಧ್ಯಕ್ಷ ಡಿ.ಶ್ರೀರಾಮ್, ನಗರ ಅಧ್ಯಕ್ಷ ಕೆ.ಸುನೀಲ್ ಕುಮಾರ್, ಜಿಲ್ಲಾಧ್ಯಕ್ಷ ಆರ್.ರಮೇಶ್ ಇದ್ದರು.
ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ರೈತ ಸಂಘದ ಡಾ.ವೆಂಕಟರೆಡ್ಡಿ ಅವರ ಸ್ಪೂರ್ತಿಯಿಂದ ಸಂಘಟನೆ, ಕನ್ನಡ ಹೋರಾಟ ಮಾಡುವ ಮೂಲಕ ಜನ ಸಾಮಾನ್ಯರ ನೋವು-ನಲಿವುಗಳಿಗೆ ಸ್ಪಂದಿಸುತ್ತಿದೆ. ಪ್ರತಿ ಭಾನುವಾರ ಸಮಾಜಸೇವಾ ಕಾರ್ಯಗಳನ್ನು ಮಾಡುವ ಕುರಿತು ಕಾರ್ಯಕ್ರಮ ರೂಪಿಸಲಾಗುತ್ತಿದೆ.ರವಿ ಮಾವಿನಕುಂಟೆ ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿ ಸಮಿತಿ ಸಂಸ್ಥಾಪಕ