ಶಿಕ್ಷಕರ ಬಳಿ ಕೈ ಪರ ಮತಯಾಚಿಸಿ

Congress
Published on

ಚಿತ್ರದುರ್ಗ: ಎಂಎಲ್ಸಿ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲುವ ಗುರಿ ಹೊಂದಿದೆ. ಹೀಗಾಗಿ ಮುಖಂಡರು, ಕಾರ್ಯಕರ್ತರು ಶಿಕ್ಷಕರ ಬಳಿ ಮತಯಾಚನೆಗೆ ಹೆಚ್ಚು ಗಮನಹರಿಸಬೇಕು ಎಂದು ಎಐಸಿಸಿ ಕಾರ್ಯದರ್ಶಿ ಮಯೂರ್ ಜೈಕುಮಾರ್ ಸಲಹೆ ನೀಡಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಕಚೇರಿಯಲ್ಲಿ ಪಕ್ಷದ ಪದಾಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದರು.

ವಿಧಾನಸಭೆಯಲ್ಲಿ ಅಂಗೀಕರಿಸುವ ಕಾಯ್ದೆಗಳಿಗೆ ಒಪ್ಪಿಗೆ ಸಿಗಲು ವಿಧಾನಪರಿಷತ್‌ನಲ್ಲಿ ಬಲವಿರಬೇಕು. ಹೀಗಾಗಿ ಕಾಂಗ್ರೆಸ್‌ಗೆ ಬಹುಮತ ಬೇಕಿದೆ. ಆದ್ದರಿಂದ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಹೆಚ್ಚು ಮತಗಳ ಅಂತರದೊಂದಿಗೆ ಅಭ್ಯರ್ಥಿಗಳು ಗೆಲುವು ಸಾಧಿಸಲು ಪಕ್ಷದ ಪ್ರತಿಯೊಬ್ಬರು ಈಗಿನಿಂದಲೇ ಕಾರ್ಯಪ್ರವೃತ್ತರಾಗಿ ಎಂದರು.

ಎಂಎಲ್ಸಿ ಚುನಾವಣೆಗೆ ಮೊದಲೆಲ್ಲ ಅಷ್ಟೊಂದು ಪ್ರಾಮುಖ್ಯತೆ ನೀಡಲಾಗುತ್ತಿರಲಿಲ್ಲ. ಆದರೆ, ಈ ಬಾರಿ ನಿರ್ಲಕ್ಷಿಸಬಾರದು. ಮತದಾನಕ್ಕೆ ಸಮಯ ತುಂಬಾ ಕಡಿಮೆ ಇದ್ದು, ನಿಮ್ಮ ವ್ಯಾಪ್ತಿಯಲ್ಲಿ ಚಟುವಟಿಕೆ ಹೆಚ್ಚಾಗಬೇಕು. ತಳಮಟ್ಟದಿಂದ ಎಲ್ಲರೂ ಶ್ರಮಪಟ್ಟರೆ, ಅಭ್ಯರ್ಥಿ ಗೆಲುವು ಕಷ್ಟವೇನಲ್ಲ ಎಂದು ಹೇಳಿದರು.

ಕೆಪಿಸಿಸಿ ಉಸ್ತುವಾರಿ ಮುರಳಿಧರ ಹಾಲಪ್ಪ ಮಾತನಾಡಿ, ಡಬ್ಬಲ್ ಗೇಮ್, ಒಳ ಒಪ್ಪಂದ ಬದಿಗಿರಿಸಿ ಬದ್ಧತೆಯಿಂದ ಕಾರ್ಯನಿರ್ವಹಿಸುವ ಮೂಲಕ ಈ ಚುನಾವಣೆಯನ್ನೂ ಲೋಕಸಭಾ ಚುನಾವಣೆ ಮಾದರಿಯಲ್ಲೇ ಎದುರಿಸಬೇಕಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡಿ, ರಾಜ್ಯದಲ್ಲಿ ಪಕ್ಷ ಅಧಿಕಾರದಲ್ಲಿರುವ ಕಾರಣ ಎಂಎಲ್ಸಿ ಚುನಾವಣೆಯಲ್ಲೂ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಇದೊಂದು ಸುವರ್ಣ ಅವಕಾಶ. ಆದ್ದರಿಂದ ಪಕ್ಷದ ಪ್ರತಿಯೊಬ್ಬರು ಲವಲವಿಕೆಯಿಂದ ಕೆಲಸ ಮಾಡೋಣ ಎಂದು ಹೇಳಿದರು.

ಯಾವುದು ಪಕ್ಷ ದ್ರೋಹ: ಶಾಸಕ ಸ್ಥಾನ ಅವಧಿ ಮುಗಿದ ನಂತರ ಕಾಂಗ್ರೆಸ್ ಸೇರಿದ್ದೇನೆ. ಆದರೆ, ಈ ಹಿಂದೆ ಬಿಜೆಪಿಯವರು ಅಧಿಕಾರಕ್ಕಾಗಿ 17 ಮಂದಿ ಶಾಸಕರನ್ನು ಆಪರೇಷನ್ ಕಮಲಕ್ಕೆ ಗುರಿಪಡಿಸಿದ್ದರು. ಹಾಗಾದರೆ, ಪಕ್ಷ ದ್ರೋಹಿಗಳು ಯಾವ ಪಕ್ಷದಲ್ಲಿದ್ದಾರೆ ಎಂದು ಮಾಜಿ ಶಾಸಕಿ ಪೂರ್ಣಿಮಾ ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಅವರನ್ನು ಪ್ರಶ್ನಿಸಿದರು.

ಬಿಜೆಪಿಯಲ್ಲಿದ್ದಾಗ ಪಕ್ಷ ನೀಡಿದ ಸೂಚನೆಯನ್ನು ತಲೆಯ ಮೇಲೆ ಹೊತ್ತು ಮಾಡಿದ್ದೇನೆ. ಕ್ಷೇತ್ರದ ಮತದಾರರಿಗೂ ವಂಚಿಸದೆ, ಅಭಿವೃದ್ಧಿ ಕೆಲಸ ಮಾಡಿದ್ದೇನೆ. ನನ್ನ ಪತಿಗೆ ಟಿಕೆಟ್ ನೀಡಿ ಎಂದು ಕೇಳಿದಾಗ ಮಾತನಾಡದವರಿಗೆ ಪ್ರಶ್ನಿಸುವ ನೈತಿಕತೆ ಇಲ್ಲ ಎಂದು ತಿರುಗೇಟು ನೀಡಿದರು.

ಮಾಜಿ ಸಚಿವ ಎಚ್.ಆಂಜನೇಯ, ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ, ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಮುಖಂಡರಾದ ನೇರ್ಲಗುಂಟೆ ರಾಮಪ್ಪ, ಹುಸೇನ್, ಜಿ.ಎಸ್.ಮಂಜುನಾಥ್, ಡಾ.ಬಿ.ತಿಪ್ಪೇಸ್ವಾಮಿ ಜೆ.ಜೆ.ಹಟ್ಟಿ, ಹನುಮಲಿ ಷಣ್ಮುಖಪ್ಪ, ಡಿ.ಬಸವರಾಜ್, ಬಿ.ಯೋಗೇಶ್‌ಬಾಬು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net