ಶಿಕ್ಷಕರ ನೇಮಕಾತಿ ಮಾಡಲಿ - ವಿಧಾನ ಪರಿಷತ್​ ಸದಸ್ಯ ಶಶಿಲ್​ ನಮೋಶಿ ಆಗ್ರಹ

Published on

ಕೊಪ್ಪಳ: ಮುಖ್ಯಮಂತ್ರಿ ಸಿದ್ದರಾಮಯ್ಯ ಜನರ ಕಣ್ಣಿಗೆ ಮಣ್ಣೆರಚುವುದು ಬಿಟ್ಟು ಕೂಡಲೇ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಬೇಕು ಎಂದು ವಿಧಾನ ಪರಿಷತ್​ ಸದಸ್ಯ ಶಶಿಲ್​ ಜಿ.ನಮೋಶಿ ಆಗ್ರಹಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಳ ಮೀಸಲಾತಿಯ ಕುಂಟು ನೆಪ ಹೇಳುತ್ತಾ ನೇಮಕಾತಿ ಪ್ರಕ್ರಿಯೆ ಮುಂದೂಡುತ್ತಿದೆ. ರಾಜ್ಯದ 5500 ಹುದೆಗಳ್ದ ಭರ್ತಿಗೆ ಮುಂದಾಗಿದ್ದ ರಾಜ್ಯ ಸರ್ಕಾರ ಈಗ ಒಳ ಮೀಸಲಾತಿ ಜಾರಿ ಆಗುವವರೆಗೆ ಯಾವುದೇ ಹುದ್ದೆ ಭರ್ತಿ ಮಾಡುವುದಿಲ್ಲ ಎಂದು ಹೇಳಿದೆ. ಆದರೆ, ಸರ್ಕಾರದ ಬಳಿ 101 ಪರಿಶಿಷ್ಟ ಜಾತಿಯ ಸಮಗ್ರ ಮಾಹಿತಿ, ದಾಖಲೆ ಇಲ್ಲ ಎಂದು ಆರೋಪಿಸಿದರು.

ನಮ್ಮ ಪಕ್ಷ ಒಳ ಮೀಸಲಾತಿಯನ್ನು ಸ್ವಾಗತಿಸುತ್ತದೆ. ಒಳ ಮೀಸಲಾತಿ ಜಾರಿ ಮಾಡುವುದಾದರೆ, ಎರಡು ತಿಂಗಳಲ್ಲೇ ಮಾಡಲಿ. ನಮ್ಮ ತಕರಾರಿಲ್ಲ. ಆದರೆ, ಒಳ ಮೀಸಲಾತಿ ನೆಪದಲ್ಲಿ ನೇಮಕಾತಿ ಮುಂದೂಡುವುದು ಸರಿಯಲ್ಲ. ನೇಮಕಾತಿ ಪ್ರಕ್ರಿಯೆ ಶುರು ಮಾಡಿ, ಮೀಸಲಾತಿ ಜಾರಿ ನಂತರವೇ ಮೆರಿಟ್​ ಪಟ್ಟಿ ಬಿಡುಗಡೆ ಮಾಡುವಂತೆ ಸಲಹೆ ನೀಡಿದರೂ ಶಿಕ್ಷಣ ಸಚಿವರು ಕೇಳುತ್ತಿಲ್ಲ. ಶಿಕ್ಷಣ ಇಲಾಖೆಯಲ್ಲಿ ಸುಮಾರು 51 ಸಾವಿರ ಹುದ್ದೆ ಖಾಲಿ ಇವೆ ಎಂದು ಸರ್ಕಾರವೇ ಹೇಳಿದೆ. ನಮ್ಮ ಸರ್ಕಾರದಲ್ಲಿ 15 ಸಾವಿರ ಹುದ್ದೆ ತುಂಬಲಾಗಿದೆ. ಈ ಪೈಕಿ ಐದು ಸಾವಿರ ಕಲ್ಯಾಣ ಕರ್ನಾಟಕ ಭಾಗದಲ್ಲಿ ನೇಮಕಾತಿ ಆಗಿವೆ ಎಂದು ಪ್ರತಿಕ್ರಿಯಿಸಿದರು.

ರಾಜ್ಯದಲ್ಲಿ ಸರಾಸರಿ 18 ಮಕ್ಕಳಿಗೆ ಒಬ್ಬ ಶಿಕ್ಷಕ ಇದ್ದಾರೆ. ಕೆಲ ಜಿಲ್ಲೆಯಲ್ಲಿ ಕೇವಲ 10 ರಿಂದ 12 ವಿದ್ಯಾರ್ಥಿಗೆ ಒಬ್ಬ ಶಿಕ್ಷಕರಿದ್ದಾರೆ. ಆದರೆ, ಕಲ್ಯಾಣ ಕರ್ನಾಟಕದಲ್ಲಿ 30 ರಿಂದ 40 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕ ಇದ್ದು, ಇದು ಸರಿಪಡಿಸಬೇಕು. ಡಯಟ್​ ಸಂಸ್ಥೆ ಜಿಲ್ಲಾ ಕೇಂದ್ರದಲ್ಲಿ ಇರಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net