ಶಿಕ್ಷಕರ ಕೊರತೆ ಸರಿದೂಗಿಸಿ

26 wrb
Published on

ಮಾಜಿ ಸಂಸದ ಬಿ.ಎನ್​.ಬಚ್ಚೇಗೌಡ ಮನವಿ,ಶಾಲಾ ಸಂಕೀರ್ಣ ಉದ್ಘಾಟನೆ

ಹೊಸಕೋಟೆ: ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಸರಿದೂಗಿಸುವ ನಿಟ್ಟಿನಲ್ಲಿ ಶಾಸಕ ಶರತ್​ ಬಚ್ಚೇಗೌಡ ಸದನದಲ್ಲಿ ಸರ್ಕಾರದ ಗಮನ ಸೆಳೆಯಬೇಕು ಎಂದು ಮಾಜಿ ಸಂಸದ ಬಿ.ಎನ್​ ಬಚ್ಚೇಗೌಡ ಹೇಳಿದರು.

ನಗರದ ಜಿಕೆಬಿಎಂಎಸ್​ ಶಾಲಾ ಆವರಣದಲ್ಲಿ ಶುಕ್ರವಾರ ಬಿ.ಎನ್​ ಬಚ್ಚೇಗೌಡ ಶಾಲಾ ಸಂಕೀರ್ಣ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ ಎಂದೂ ಕಳೆದು ಹೋಗುವ ಆಸ್ತಿಯಲ್ಲ, ಒಮ್ಮೆ ಗುಣಾತ್ಮಕ ಶಿಕ್ಷಣ ಕಲಿತಲ್ಲಿ ಜೀವನಕ್ಕೆ ಬೇಕಾದ ಎಲ್ಲ ಸವಲತ್ತುಗಳು ದೊರೆಯುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದ್ದು, ಪ್ರತಿ ಶಾಲೆಯಲ್ಲಿ ಅವಶ್ಯ ಶಿಕ್ಷಕರಿರಬೇಕು ಎಂದು ಹೇಳಿದರು.

ಆರ್ಡನ್​ ಸಿಟಿ ಯೂನಿವರ್ಸಿಟಿಯ ವೈಸ್​ ಚಾನ್ಸಲರ್​ ಡಾ.ಜೋಸೆಪ್​ ವಿಜಿ ಅವರು ನನ್ನ ಮೇಲಿನ ಅಭಿಮಾನದಿಂದ 1.25 ಕೋಟಿ ರೂ.ವೆಚ್ಚದಲ್ಲಿ ನನ್ನ ಹೆಸರಿನ ಶಾಲಾ ಸಂಕೀರ್ಣವನ್ನು ಶಾಲೆಗೆ ಕೊಡುಗೆಯಾಗಿ ನೀಡಿದ್ದಾರೆ ಎಂದು ತಿಳಿಸಿದರು. 1925ರಲ್ಲಿ ಚಟೆ ಬಸಪ್ಪನವರು ಶಾಲೆಗಾಗಿ 5 ಎಕರೆ ಜಾಗ ದಾನಮಾಡಿದ್ದರು. ಅಂದು ಶುರುವಾದ ಈ ಶಾಲೆ ಮುಂದಿನ ವರ್ಷ ಶತಮಾನೋತ್ಸವ ಆಚರಣೆ ಮಾಡಿಕೊಳ್ಳಲಿದೆ ಎಂದರು. ಇದೇ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ವಕೀಲನಾಗಿ, ರಾಜಕಾರಣಿಯಾಗಿ ವಿವಿಧ ಕ್ಷೇತ್ರಗಳಲ್ಲಿ ದುಡಿದಿದ್ದೇನೆ ಎಂದು ಸ್ಮರಿಸಿದರು.

ಮೊದಲು ಶಿಕ್ಷಣ ನಂತರ ಶುಲ್ಕ: ಶಿಕ್ಷಣದಿಂದ ಯಾರೂ ವಂಚಿತರಾಗಬಾರದು ಎಂಬ ಉದ್ದೇಶದಿಂದ ಗಾರ್ಡನ್​ ಸಿಟಿ ಯೂನಿವರ್ಸಿಟಿ ವಿದ್ಯಾರ್ಥಿಗಳಿಗೆ ಆರ್ಥಿಕ ಸಮಸ್ಯೆ ಇದ್ದಲ್ಲಿ ಅಂತಹವರು ಮೊದಲು ಶಿಕ್ಷಣ ಕಲಿಯಿರಿ ನಂತರ ಉದ್ಯೋಗ ಸಿಕ್ಕ ನಂತರ ಶಿಕ್ಷಣ ಶಿಲ್ಕ ಪಾವತಿಸಿ ಎಂಬ ಪದ್ಧತಿ ಜಾರಿಗೆ ತಂದಿದ್ದಾರೆ. ಅದರಂತೆ ಶೇ.98 ವಿದ್ಯಾರ್ಥಿಗಳು ಶುಲ್ಕ ಪಾವತಿ ಮಾಡಿದ್ದಾರೆ ಎಂದು ಶಾಸಕ ಶರತ್​ಬಚ್ಚೇಗೌಡ ಹೇಳಿದರು. ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಹಾಗೂ ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಇಲಾಖಾ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು. ತಾಲೂಕಿನಲ್ಲಿ ಕನ್ನಡ ಮಾಧ್ಯಮದ ಜತೆ ಆಂಗ್ಲ ಶಾಲೆಗಳ ಸಂಖ್ಯೆ ಹೆಚ್ಚು ಮಾಡುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಕ್ರಮವಹಿಸಬೇಕು ಇದರಿಂದ ಸರ್ಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳ ಸಂಖ್ಯೆ ಹೆಚ್ಚುತ್ತದೆ ಎಂದರು.

ವಿದೇಶಿಗರಿಗೂ ಶಿಕ್ಷಣ: ಗಾರ್ಡನ್​ ಸಿಟಿ ಕಾಲೇಜಿನ ಕುಲಪತಿ ಡಾ ಜೋಸಪ್​ ವಿಜಿ ಮಾತನಾಡಿ, ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಬೇರೆ ಬೇರೆ ದೇಶಗಳಿಗೆ ಹೋಗುತ್ತಾರೆ.ಆದರೆ ಗಾರ್ಡನ್​ ಸಿಟಿ ಪ್ರಪಂಚದ 98 ದೇಶದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡುವ ಕೆಲಸ ಮಾಡುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net