

ಶಿಕಾರಿಪುರ: ತಾಲೂಕಿನ ಚಿಕ್ಕಸಾಲೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆ ಇರುವುದರಿಂದ ಸರಿಯಾಗಿ ಪಾಠಗಳು ಆಗುತ್ತಿಲ್ಲ. ಕೂಡಲೇ ಶಿಕ್ಷಕರ ಕೊರತೆ ನೀಗಿಸಬೇಕೆಂದು ಆಗ್ರಹಿಸಿ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಮತ್ತು ಗ್ರಾಮಸ್ಥರು ಮಂಗಳವಾರ ದಿಢೀರ್ ಪ್ರತಿಭಟನೆ ನಡೆಸಿದರು. ಎಸ್‌ಡಿಎಂಸಿ ಅಧ್ಯಕ್ಷ ವಾಗೀಶ್ ಮಾತನಾಡಿ, ಶಾಲೆಯಲ್ಲಿ 83 ವಿದ್ಯಾರ್ಥಿಗಳಿದ್ದಾರೆ. ಇಬ್ಬರು ಶಿಕ್ಷಕರು ಮಾತ್ರ ಇದ್ದಾರೆ. ಮಕ್ಕಳ ನಿರ್ವಹಣೆ ಶಿಕ್ಷಕರಿಗೆ ಕಷ್ಟವಾಗುತ್ತಿದೆ. 83 ಮಕ್ಕಳಿಗೆ ನಾಲ್ವರು ಶಿಕ್ಷಕರ ಅವಶ್ಯಕತೆ ಇದೆ. ಈ ಬಗ್ಗೆ ಶಿಕ್ಷಣ ಇಲಾಖೆಗೆ ಮನವಿ ಮಾಡಿದ್ದರೂ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ಇಲ್ಲಿಗೆ ವಾರಕ್ಕೆ ಎರಡು, ಮೂರು ಬಾರಿ ಬರುವ ನಿಯೋಜಿತ ಶಿಕ್ಷಕರು ಬೇಡ. ಮಕ್ಕಳ ಹಿತದೃಷ್ಟಿಯಿಂದ ಕಾಯಂ ಶಿಕ್ಷಕರ ಅಗತ್ಯವಿದೆ ಎಂದರು.