

ಸವದತ್ತಿ: ಬಾಲಕಾರ್ಮಿಕ ಪದ್ಧತಿ ಸಮಾಜಕ್ಕೆ ಮಾರಕವಾಗಿದ್ದು, ನಿಯಂತ್ರಿಸಲು ಕಾನೂನು ಜಾಗತಿ ಅಗತ್ಯ ಎಂದು ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ಶಶಿಧರ ಗೌಡ ಹೇಳಿದರು.
ತಾಲೂಕಿನ ಯಡ್ರಾವಿಯ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಾರ್ಮಿಕ ಇಲಾಖೆ ಹಾಗೂ ತಾಲೂಕಾಡಳಿತದ ಸಂಯುಕ್ತಾಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ನಿಷೇಧ ಕಾಯ್ದೆ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಾಲೆಯಲ್ಲಿ ಮಕ್ಕಳ ಉಜ್ವಲ ಭವಿಷ್ಯ ರೂಪಿಸಲು ಸಾಧ್ಯ. 14 ವರ್ಷದೊಳಗಿನವರನ್ನು ದುಡಿಮೆಗೆ ಕಳುಹಿಸದಂತೆ, ಅಪಾಯಕಾರಿ ಕೆಲಸದಿಂದ ಮುಕ್ತಿಗೊಳಿಸಲು ಹಾಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕೆ ಒತ್ತು ನೀಡುವುದು ಪ್ರತಿಯೊಬ್ಬರ ಜವಾಬ್ದಾರಿ. ಅಂಥ ಮಕ್ಕಳನ್ನು ಮುಖ್ಯವಾಹಿನಿಗೆ ತರಬೇಕೆಂದು ಕರೆ ನೀಡಿದರು.
ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಸುರೇಶ ಕಾಳಪ್ಪನವರ ಮಾತನಾಡಿ, ಪಾಲಕರು ತಮ್ಮ ಆರ್ಥಿಕ ಸಂಕಷ್ಟಕ್ಕೆ ಬಾಲಕಾರ್ಮಿಕ ಪದ್ಧತಿ ಅನುಸರಣೆ ಸಲ್ಲದು. ಕೌಟುಂಬಿಕ ವ್ಯವಸ್ಥೆ ಹೊರಗೆ ಮಕ್ಕಳು ದುಡಿಮೆ ಮಾಡಿದರೆ ಶಿಕ್ಷೆ ಖಂಡಿತ ತಪ್ಪಿದ್ದಲ್ಲ ಎಂದರು.
ವಕೀಲ ಎ.ಎಂ.ಭಾಗೋಜಿಕೊಪ್ಪ ಉಪನ್ಯಾಸ ನೀಡಿದರು. ಮಕ್ಕಳಿಗೆ ಕಾನೂನು ಅರಿವು ಕುರಿತ ಪುಸ್ತಕಗಳನ್ನು ವಿತರಿಸಲಾಯಿತು. ಜ್ಯೋತಿ ಕಾಂತೆ, ಕಾರ್ಮಿಕ ಇಲಾಖೆ ಅಧಿಕಾರಿ ಮಹೇಶ ಭಾಗೋಜಿ, ಮುಖ್ಯಶಿಕ್ಷಕ ಆರ್.ಎಂ. ಮಾಗಿ, ಎಸ್.ವೈ. ಶಿಬಾರಗಟ್ಟಿ, ಶಿಕ್ಷಕರಾದ ಐ.ಬಿ. ನೇಸರಗಿ, ಪ್ರವೀಣಕುಮಾರ ಬಣಕಾರ, ಎಂ.ಆರ್. ಮುದ್ದನ್ನವರ ಹಾಗೂ ಶಾಲಾ ಎಸ್‌ಡಿಎಂಸಿ ಸದಸ್ಯರು, ವಿದ್ಯಾರ್ಥಿಗಳು ಇದ್ದರು.