ಶಿಕ್ಷಕನ ಮೇಲೆ ಹಲ್ಲೆ : ಆರೋಪಿ ಬಂದನಕ್ಕೆ ಆಗ್ರಹ

ಶಿಕ್ಷಕನ ಮೇಲೆ ಹಲ್ಲೆ : ಆರೋಪಿ ಬಂದನಕ್ಕೆ ಆಗ್ರಹ
Published on

ಹಾಸನ : ಅರಕಲಗೂಡಿನಲ್ಲಿ ಇತ್ತೀಚೆಗೆ ಶಿಕ್ಷಣ ಸಂಯೋಜಕ ಗಿರಿಜಾನಂದ ಮುಂಬಳೆ ಅವರ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿರುವ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶಿವಕುಮಾರ್ ಅವರನ್ನು ಬಂಧಿಸಲು ಆಗ್ರಹಿಸಿ ವಿವಿಧ ದಲಿತ ಸಂಘಟನೆಗಳು ಮತ್ತು ಎಸ್‌ಸಿ/ಎಸ್‌ಟಿ ನೌಕರರ ಸಮನ್ವಯ ಸಮಿತಿ ಸದಸ್ಯರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಕಪ್ಪು ಪಟ್ಟಿ ಧರಿಸಿ ಹೊರಟ ಪ್ರತಿಭಟನಕಾರರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿ ಗಿರಿಜಾನಂದಾ ಅವರಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದರು. ಹಲ್ಲೆ ಮಾಡಿರುವ ಶಿವಕುಮಾರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಇತ್ತೀಚೆಗೆ ಅರಕಲಗೂಡಿನಲ್ಲಿ ನಡೆದ ಶಿಕ್ಷಕರ ಕಾರ್ಯಾಗಾರದಲ್ಲಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶಿವಕುಮಾರ್ ಅವರು ಲೆಕ್ಕವೊಂದನ್ನು ತಪ್ಪಾಗಿ ಬಿಡಿಸುತ್ತಿದ್ದರು. ಶಿಕ್ಷಣ ಸಂಯೋಜಕ ಗಿರಿಜಾನಂದ ಮುಂಬಳಿ ಅದನ್ನು ಎಲ್ಲರ ಎದುರು ಸರಿಪಡಿಸಿದ್ದಕ್ಕೆ ಕೋಪಗೊಂಡ ಶಿವಕುಮಾರ್ ಅವರು ಗಿರಿಜಾನಂದ ಅವರ ಮೆಲೆ ಹಲ್ಲೆ ಮಾಡಿದ್ದಲ್ಲದೆ, ಜಾತಿ ನಿಂದನೆ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಸಿ/ ಎಸ್ಟಿ ದೌರ್ಜನ್ಯ ನಿಯಂತ್ರಣ ಕಾಯಿದೆ ಅಡಿ ಪ್ರಕರಣ ದಾಖಲಾಗಿದ್ದರೂ ಇದುವರೆಗೂ ಪೊಲೀಸರು ಆರೋಪಿಯನ್ನು ಬಂಧಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಸರಕಾರ ಹಾಗೂ ಜಿಲ್ಲಾಡಳಿತ ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಅವರನ್ನು ಸೇವೆಯಿಂದ ವಜಾ ಗೊಳಿಸಬೇಕು. ಗಿರಿಜಾನಂದ ಮುಂಬಳೆ ಕುಟುಂಬಕ್ಕೆ ಪೊಲೀಸ್ ರಕ್ಷಣೆ ರಕ್ಷಣೆ ನೀಡಬೇಕು. ಜಿಲ್ಲೆಯಲ್ಲಿ ದಲಿತರ ಮೇಲಿನ ದೌರ್ಜನ್ಯಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ದಸಂಸ ಮುಖಂಡರಾದ ಶ್ರೀಧರ ಕಲಿವೀರ್, ಕೃಷ್ಣದಾಸ್, ಎಚ್.ಕೆ. ಸಂದೇಶ್, ಕೆ. ಈರಪ್ಪ, ಗಂಗಾಧರ್ ಬಹುಜನ್, ಆರ್. ಪಿ.ಐ. ಸತೀಶ್, ಎಂ.ಜಿ. ಪೃಥ್ವಿ, ಶಿವಮ್ಮ, ನಾಗರಾಜ್ ಹೆತ್ತೂರು, ಅಂಬುಗ ಮಲ್ಲೇಶ್, ಕೆ.ಟಿ. ಶಿವಪ್ರಸಾದ್, ಕೆ.ಟಿ. ಸುವರ್ಣ ಮತ್ತಿತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net