ಶಿಕಾರಿಪುರದಲ್ಲಿ ಅಭಿವೃದ್ಧಿ ಶಕೆ ಆರಂಭಿಸಿದ್ದು ಬಿಎಸ್‌ವೈ: ಬಿ.ವೈ.ವಿಜಯೇಂದ್ರ

SKP WEB
Published on

ಶಿಕಾರಿಪುರ: ಅತ್ಯಂತ ಹಿಂದುಳಿದ ಶಿಕಾರಿಪುರ ತಾಲೂಕಿನಲ್ಲಿ ಅಭಿವೃದ್ಧಿಯ ಹೊಸ ಶಕೆ ಆರಂಭಿಸಿದವರು ಯಡಿಯೂರಪ್ಪ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಸಮೀಪದ ಕಪ್ಪನಹಳ್ಳಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಿಜೆಪಿ ಸಂಘಟನಾ ಸಭೆಯಲ್ಲಿ ಮಾತನಾಡಿ, ಯಡಿಯೂರಪ್ಪ ಸಾಮಾಜಿಕ ಕಳಕಳಿಯ ನಾಯಕ. ಅವರ ಸಂಕಲ್ಪದಂತೆ ಸಾರಿಗೆ, ಆರೋಗ್ಯ, ಶಿಕ್ಷಣ, ಕೃಷಿ ಸೇರಿದಂತೆ ಜನರ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಲಾಗಿದೆ. ನಮಗೂ, ನಮ್ಮ ಕಾರ್ಯಕರ್ತರಿಗೂ ಅವರೇ ಮಾದರಿ ಎಂದರು.

ಪಕ್ಷ ನಮಗೆ ತಾಯಿ ಇದ್ದ ಹಾಗೆ. ನಾವು ಪಕ್ಷದ ಸಂಘಟನೆಗೆ ಮೊದಲ ಆದ್ಯತೆ ನೀಡಬೇಕು. ಸಂಘಟನೆ ಬಲವಾದರೆ ನಮಗೂ ಬಲ ಬರುತ್ತದೆ. ಬಿಜೆಪಿ ಹಂತ ಹಂತವಾಗಿ ಬೆಳೆದ ಪಕ್ಷ. ಇಂದು ರಾಷ್ಟ್ರದಾದ್ಯಂತ ತ್ರಿವಿಕ್ರಮನಂತೆ ಬೆಳೆದು ನಿಂತಿದೆ. ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕು. ಯುವಕರನ್ನು ಹೆಚ್ಚಿನ ಪ್ರಮಾಣದಲ್ಲಿ ಸದಸ್ಯರನ್ನಾಗಿ ಮಾಡಬೇಕು ಎಂದು ಹೇಳಿದರು.

ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿ, ಬರಗಾಲ ಮತ್ತು ಪ್ರಕೃತಿ ವ್ಯತ್ಯಯಗಳಿಂದ ಕಾಲ ಕಾಲಕ್ಕೆ ಮಳೆಯಾಗದೆ ರೈತರಿಗೆ ತೊಂದರೆ ಆಗಿತ್ತು. ಶಾಶ್ವತ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಿ ಯಡಿಯೂರಪ್ಪ ರೈತರ ಪಾಲಿಗೆ ಆಧುನಿಕ ಭಗೀರಥ ಎನಿಸಿದ್ದಾರೆ ಎಂದು ಹೇಳಿದರು.

ರೈಲ್ವೆ ಸೇರಿದಂತೆ ಹತ್ತಾರು ಯೋಜನೆಗಳಿಗೆ ಅನುದಾನ ತಂದಿದ್ದು ಇಂತಹ ಜನಪರ ಕಾರ್ಯಗಳನ್ನು ಜನತೆಗೆ ತಲುಪಿಸುವ ಕಾರ್ಯವನ್ನು ನಮ್ಮ ಕಾರ್ಯಕರ್ತರು ಮಾಡಬೇಕು. ಸರ್ಕಾರದ ಸವಲತ್ತುಗಳು ಸಮರ್ಪಕವಾಗಿ ಶ್ರೀಸಾಮಾನ್ಯನಿಗೆ ತಲುಪುವಂತೆ ಮಾಡಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರದ ಜನರ ಪರವಾದ ಯೋಜನೆಗಳನ್ನು ಪರಿಚಯಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net