

ಶಿಕಾರಿಪುರ: ಇಳಿವಯಸ್ಸಿನಲ್ಲೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕುಗ್ಗದ ಉತ್ಸಾಹ, ಜನಪ್ರಿಯತೆ ಕಂಡು ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಸಂಸದೀಯ ಮಂಡಳಿಯ ಸದಸ್ಯತ್ವದಂತಹ ಹಿರಿಯ ಜವಾಬ್ದಾರಿ ನೀಡಿ ಗೌರವಿಸಿದ್ದಾರೆ. ಯಡಿಯೂರಪ್ಪ ಅವರನ್ನು ಈ ಮಟ್ಟಕ್ಕೆ ತಂದವರು ಶಿಕಾರಿಪುರ ತಾಲೂಕಿನ ಮಹಾಜನತೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತಿಳಿಸಿದರು.
ಶುಕ್ರವಾರ ತಾಲೂಕಿನ ಹಿತ್ತಲ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿ, ಶಾಶ್ವತ ನೀರಾವರಿ ಯೋಜನೆಗಳ ಮೂಲಕ ಹಿತ್ತಲ ಮತ್ತು ಸುತ್ತಮುತ್ತಲ ಗ್ರಾಮಗಳ ಕೆರೆಗಳನ್ನು ತುಂಬಿಸುವ ಕೆಲಸವನ್ನು ಯಡಿಯೂರಪ್ಪ ಅವರು ಮಾಡಿದ್ದಾರೆ. ರೈತರು ಅಕಾಲಿಕ ಮಳೆ, ಬರಗಾಲದಿಂದ ತೊಂದರೆಗೆ ಒಳಗಾಗಬಾರದು ಎಂಬ ಸದಾಶಯದಿಂದ ನೀರಾವರಿ ಯೋಜನೆಗಳನ್ನು ಜಾರಿಗೆ ತಂದು ಆಧುನಿಕ ಭಗೀರಥ ಎನಿಸಿಕೊಂಡಿದ್ದಾರೆ. ಅವರ ಎಲ್ಲಾ ಕಾರ್ಯಗಳ ಹಿಂದೆ ಭೀಮಬಲವಾಗಿ ನಿಂತವರು ನೀವು. ಒಂದು ಕಾಲದಲ್ಲಿ ಅತ್ಯಂತ ಹಿಂದುಳಿದ ತಾಲೂಕು ಆಗಿದ್ದ ಶಿಕಾರಿಪುರ ಇಂದು ರಾಜ್ಯದಲ್ಲಿಯೇ ಅಭಿವೃದ್ಧಿ ಪರ ತಾಲೂಕುಗಳ ಸಾಲಿನಲ್ಲಿ ಮುಂಚೂಣಿಯಲ್ಲಿದೆ ಎಂದರು.
ಇಡೀ ತಾಲೂಕಿನ ಸಮಗ್ರವಾದ ಅಭಿವೃದ್ಧಿ ನಮ್ಮ ಗುರಿಯಾಗಿದೆ. ಅದರಂತೆ ಅಭಿವೃದ್ಧಿ ಆಗುತ್ತಿದೆ. ರಸ್ತೆ, ಸಾರಿಗೆ ಸಂಪರ್ಕ, ಶಿಕ್ಷಣ, ಆರೋಗ್ಯ, ಕೃಷಿ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಗಮನಾರ್ಹವಾದ ಅಭಿವೃದ್ಧಿ ಆಗುತ್ತಿದೆ. ಪ್ರಧಾನಿ ರೈತರ ಪರವಾದ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಕೇಂದ್ರ ಸರ್ಕಾರದಿಂದ ಪ್ರತಿ ರೈತನ ಖಾತೆಗೆ ಹತ್ತು ಸಾವಿರ ರೂಪಾಯಿ ಜಮಾ ಆಗುತ್ತಿದೆ. ಸಬ್ಸಿಡಿ ದರದಲ್ಲಿ ಗೊಬ್ಬರ ಪೂರೈಕೆಯಾಗುತ್ತಿದೆ ಎಂದು ಹೇಳಿದರು.