

ಶಿಕಾರಿಪುರ; ಕುಟ್ರಳ್ಳಿ ಟೋಲ್ ಗೇಟ್ ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಟೋಲ್ ವಿರೋ ಹೋರಾಟ ಸಮಿತಿ, ರೈತ ಸಂಘ ಸೇರಿ ವಿವಿಧ ಸಂಘಟನೆಗಳು ಗುರುವಾರ ಕರೆನೀಡಿದ್ದ ಶಿಕಾರಿಪುರ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಪ್ರತಿಭಟನೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಶಾಂತಿಯುತವಾಗಿ ನಡೆಯಿತು.
ಮುಂಜಾನೆಯಿಂದಲೇ ಅಂಗಡಿ ಮುಂಗಟ್ಟುಗಳು, ಹೋಟೆಲ್ಗಳು, ಹೂವು-ಹಣ್ಣು, ತರಕಾರಿ ವ್ಯಾಪಾರಸ್ಥರು, ಬೀದಿ ಅಂಗಡಿಗಳ ವ್ಯಾಪಾರಸ್ಥರು ಸ್ವಯಂಪ್ರೇರಿತರಾಗಿ ಬಂದ್ ಮಾಡಿ ಟೋಲ್ ವಿರೋ ಹೋರಾಟಕ್ಕೆ ಬೆಂಬಲ ನೀಡಿದರು.
ಬಂದ್ ಹಿನ್ನೆಲೆಯಲ್ಲಿ ಖಾಸಗಿ ಬಸ್‌ಗಳು ರಸ್ತೆಗಿಳಿಯದ ಕಾರಣ ಸರ್ಕಾರಿ ಬಸ್‌ಗಳ ಸಂಚಾರವಿಲ್ಲದ ಊರುಗಳಿಗೆ ತೆರಳಬೇಕಾದ ಪ್ರಯಾಣಿಕರಿಗೆ ಅನಾನುಕೂಲವಾಗಿತ್ತು. ಆದರೆ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸುತ್ತಿದ್ದುದರಿಂದ ಉಳಿದ ಪ್ರಯಾಣಿಕರಿಗೆ ಹೆಚ್ಚೇನೂ ತೊಂದರೆಯಾಗಲಿಲ್ಲ. ಜನಸಂದಣಿಯಿಂದ ಕೂಡಿರುತ್ತಿದ್ದ ಖಾಸಗಿ ಬಸ್ ನಿಲ್ದಾಣ ಜನರಿಲ್ಲದೆ ಬಿಕೋ ಎನ್ನುತ್ತಿತ್ತು. ಕಚೇರಿ, ಶಾಲಾ, ಕಾಲೇಜುಗಳಿಗೆ ಹೋಗುವವರಿಗೆ ಸರ್ಕಾರಿ ಬಸ್‌ಗಳು ಆಸರೆಯಾಗಿದ್ದವು.
ಹತ್ತಕ್ಕೂ ಹೆಚ್ಚು ತಮಟೆ ವಾದ್ಯಗಳೊಂದಿಗೆ ಹುಚ್ಚ ರಾಯಸ್ವಾಮಿ ದೇವಸ್ಥಾನದಿಂದ ಪ್ರಾರಂಭವಾದ ಟೋಲ್ ವಿರೋ ಸಮಿತಿ ಪ್ರತಿಭಟನೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಕಿರಣ್ ಟಾಕೀಸ್ ಸರ್ಕಲ್ನಲ್ಲಿ ಮಾನವ ಸರಪಳಿ ನಿರ್ಮಿಸಿದ್ದರಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ಪ್ರತಿಭಟನಾಕಾರರು ಮೆರವಣಿಗೆಯುದ್ದಕ್ಕೂ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಖಾಸಗಿ ನಿಲ್ದಾಣದ ಹತ್ತಿರ ಟೈರ್‌ಗೆ ಬೆಂಕಿಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಶಿರಾಳಕೊಪ್ಪ ಭಾಗದಿಂದ ಟೋಲ್ ವಿರೋ ಪ್ರತಿಭಟನೆ ಬೆಂಬಲಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು, ಜನಪ್ರತಿನಿಗಳು, ಸಾರ್ವಜನಿಕರು ಆಗಮಿಸಿದ್ದರು.
ಜಿಲ್ಲಾ ರೈತ ಸಂಘದ ಗೌರವಾಧ್ಯಕ್ಷ ಪ್ಯಾಟಿ ಈರಣ್ಣ , ಕಾರ್ಯಾಧ್ಯಕ್ಷ ಪುಟ್ಟನ ಗೌಡ, ಜಿಲ್ಲಾಧ್ಯಕ್ಷ ಹಾಲಪ್ಪ ಗೌಡ, ವಿನಯ್ ಪಾಟೀಲ್,ನವೀದ್, ರಾಜಣ್ಣ, ಶ್ರೀಧರ್ ನಾಡಿಗ್, ಹಲವು ಸಂಘ ಸಂಸ್ಥೆಗಳ ಪದಾಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.
ಸರ್ಕಾರ ತಕ್ಷಣ ಕುಟ್ರಳ್ಳಿ ಟೋಲ್ ಗೇಟ್ ಕೂಡಲೇ ತೆರವುಗೊಳಿಸಬೇಕು. ತೆರವುಗೊಳಿಸುವವರೆಗೆ ಟೋಲ್ ಮುಂಭಾಗದಲ್ಲಿ ಧರಣಿ ನಡೆಸಲಾಗುವುದು. ಬಗ್ಗದೆ ಹೋದರೆ ಈ ಹೋರಾಟ ತೀವ್ರ ಸ್ವರೂಪ ಪಡೆಯಲಿದೆ. ಸಾರ್ವಜನಿಕರೇ ಟೋಲ್ ತೆರವುಗೊಳಿಸುವ ಸಮಯ ಬಂದರೂ ಅಚ್ಚರಿಪಡಬೇಕಿಲ್ಲ ಎಂದು ಟೋಲ್ ವಿರೋ ಹೋರಾಟ ಸಮಿತಿ ಅಧ್ಯಕ್ಷ ಶಿವರಾಜ್ ಪಾಟೀಲ್ ಎಚ್ಚರಿಸಿದರು. ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು, ಶಿಕಾರಿಪುರ ತಾಲೂಕಿನ ಜನತೆ ಈ ಅವೈಜ್ಞಾನಿಕ ಟೋಲ್ ವಿರುದ್ಧ ನಡೆದ ಬಂದ್‌ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಟೋಲ್ ನಿರ್ಮಾಣ ಮಾಡುವಾಗ ಇದು ರಾಜ್ಯ ಹೆದ್ದಾರಿ - 57 ಎಂದು ಇತ್ತು. ಈಗ ಅದನ್ನು ವಿಂಗಡಿಸಿದ್ದಾರೆ. ಟೋಲ್ ನಿರ್ಮಾ ಣ ಮಾಡುವಾಗ ರಾಜ್ಯ ಹೆದ್ದಾರಿ-57 ಎಂದು ಇದ್ದ ಕಾರಣ ಅವರು ಟೋಲ್ ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.
ಕಳೆದ ವರ್ಷ ಅ.9ರಂದು ಸಭೆ ಕರೆದ ಜಿಲ್ಲಾಕಾರಿ ಟೋಲ್ ತೆರವುಗೊಳಿಸಲು ಶಾಸಕರು, ಸಂಸದರ ಸಮ್ಮತಿಯಿದೆ. ಬೇಗ ತೆರವುಗೊಳಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ವರ್ಷ ಕಳೆದರೂ ಕ್ರಮ ಕೈಗೊಂಡಿಲ್ಲ. ಸರ್ಕಾರ ಮತ್ತೆ ಮರು ಟೆಂಡರ್ ಕರೆದಿದ್ದು ಜನರ ಅನುಮಾನಕ್ಕೆ ಕಾರಣ. ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿರುವದು ಸ್ಪಷ್ಟ, ಸರ್ಕಾರ ತೆರವುಗೊಳಿಸದಿದ್ದರೆ ಉಗ್ರ ಹೋರಾಟ ನಿಶ್ಚಿತ.
ಶಿವರಾಜ್ ಪಾಟೀಲ್, ಟೋಲ್ ವಿರೋ ಹೋರಾಟ ಸಮಿತಿ ಅಧ್ಯಕ್ಷ
ಸಮಿತಿ ಜತೆ ಶೀಘ್ರ ಸಭೆ
ಜಿಲ್ಲಾಕಾರಿಗಳು ಸ್ಥಳಕ್ಕೆ ಆಗಮಿಸಬೇಕು. ಸಮಸ್ಯೆ ಆಲಿಸಿ ಪರಿಹಾರ ಕೊಡಿಸಬೇಕೆಂದು ತಾಲೂಕು ಕಚೇರಿ ಬಳಿ ಪ್ರತಿಭಟನಾಕಾರರು ಪಟ್ಟುಹಿಡಿದು ಕುಳಿತರು. ತಹಸೀಲ್ದಾರ್ ಮಂಜುಳಾ ಭಜಂತ್ರಿ ಸ್ಥಳಕ್ಕೆ ಆಗಮಿಸಿ, ಜಿಲ್ಲಾಕಾರಿಗಳು ಸಮೀಕ್ಷೆ ಮುಂತಾದ ಕಾರ್ಯಗಳ ಒತ್ತಡದಲ್ಲಿದ್ದಾರೆ. ಸೋಮವಾರ ಅಥವಾ ಮಂಗಳವಾರ ಶಿಕಾರಿಪುರದಲ್ಲಿಯೇ ಟೋಲ್ ವಿರೋ ಹೋರಾಟಗಾರರ ಜತೆ ಮಾತಾಡಲಿದ್ದಾರೆ ಎಂದು ಭರವಸೆ ನೀಡಿದ ನಂತರ ಧರಣಿ ಹಿಂಪಡೆದರು. ಎಂಎಡಿಬಿ ಮಾಜಿ ಅಧ್ಯಕ್ಷ ಎ.ಎಸ್.ಪದ್ಮನಾಭ ಭಟ್ ಸೇರಿ ಹಲವು ಹಿರಿಯರು ಹೋರಾಟದ ಸ್ಥಳಕ್ಕೆ ಬಂದು ಬೆಂಬಲ ಸೂಚಿಸಿದರು.