

ಮದ್ದೂರು: ಪಟ್ಟಣದ ಶಿಂಷಾ ಸಹಕಾರ ಬ್ಯಾಂಕ್‌ನಲ್ಲಿ ಗ್ರಾಹಕರ ಖಾತೆಯಲ್ಲಿರುವ ಹಣವನ್ನು ಅಧಿಕಾರಿಗಳು ನೀಡುತ್ತಿಲ್ಲ ಎಂದು ಆರೋಪಿಸಿ ಗ್ರಾಹಕರು ಬ್ಯಾಂಕ್‌ನ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.
ನಮ್ಮ ಖಾತೆಯಲ್ಲಿ ಹಣವಿದ್ದರೂ ಹಣ ಕೊಡಲು ಬ್ಯಾಂಕ್‌ನ ಸಿಬ್ಬಂದಿ ಅನಗತ್ಯವಾಗಿ ವಿಳಂಬ ಮಾಡುತ್ತಿದ್ದಾರೆ ಎಂದು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸಾದೊಳಲು ಗ್ರಾಮದ ರಾಜೇಶ್ ಮಾತನಾಡಿ, ನನ್ನ ಖಾತೆಯಲ್ಲಿ 45 ಸಾವಿರ ರೂ.ಇದೆ. ನನಗೆ ತುರ್ತು ಹಣದ ಅವಶ್ಯಕತೆ ಇರುವುದರಿಂದ 20 ಸಾವಿರ ಹಣ ತೆಗೆದುಕೊಳ್ಳಲು ಬಂದರೆ ಮೂರು ದಿನಗಳಿಂದ ಹಣ ಕೊಡದೆ ವಿಳಂಬ ಮಾಡುತ್ತಿದ್ದಾರೆ. ಈ ರೀತಿಯಾದರೆ ನಮ್ಮಂತವರು ಹೇಗೆ ಬ್ಯಾಂಕ್‌ನಿಂದ ಹಣ ತೆಗೆದುಕೊಳ್ಳುವುದು ಎಂದು ಬ್ಯಾಂಕ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬ್ಯಾಂಕ್ ಗ್ರಾಹಕರಾದ ಚಾಂದಿನಿ ಮಾತನಾಡಿ, ನನ್ನ ಖಾತೆಗೆ 1.50 ಲಕ್ಷ ರೂ. ಹಾಕಲಾಗಿತ್ತು. ನನಗೆ ಹಣದ ಅವಶ್ಯಕತೆ ಇರುವುದರಿಂದ ಹಣ ತೆಗೆದುಕೊಳ್ಳಲು ಬ್ಯಾಂಕ್‌ಗೆ ಬಂದರೆ ಹಣ ಕೊಡದೆ ಸತಾಯಿಸುತ್ತಿದ್ದಾರೆ. ಈಗ ನಾವು ಏನು ಮಾಡಬೇಕು ಎಂದು ಗೊತ್ತಾಗುತ್ತಿಲ್ಲ. ಸಂಬಂಧ ಪಟ್ಟವರು ಅಗತ್ಯ ಕ್ರಮ ಕೈಗೊಂಡು ಖಾತೆಯಲ್ಲಿರುವ ಹಣ ಕೊಡಿಸಬೇಕು ಎಂದು ಅಳಲು ತೋಡಿಕೊಂಡರು.
ಮಾತಿನ ಚಕಮಕಿ: ಬ್ಯಾಂಕ್‌ನಲ್ಲಿ ಗ್ರಾಹಕರಿಗೆ ಹಣ ಕೊಡದ ಪರಿಣಾಮ ಗ್ರಾಹಕರಿಗೆ ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಇದರಿಂದ ಕೆಲಕಾಲ ಪರಿಸ್ಥಿತಿ ವಿಕೋಪಕ್ಕೆ ತೆರಳಿತ್ತು. ನಂತರ ಗ್ರಾಹಕರು ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ವಿಷಯ ತಿಳಿದು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಬ್ಯಾಂಕ್‌ನ ಅಧ್ಯಕ್ಷ ಚಂದ್ರು ಹಾಗೂ ಆಡಳಿತ ಮಂಡಳಿ ಸದಸ್ಯರು ಪ್ರತಿಭಟನಾರರ ಜತೆಯಲ್ಲಿ ಮಾತನಾಡಿ, ಬ್ಯಾಂಕ್‌ನಲ್ಲಿ ನಡೆದಿರುವ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಬ್ಯಾಂಕ್‌ನ ಸಿಇಒ ಸೇರಿದಂತೆ ನಾಲ್ಕು ನೌಕರರ ವಿರುದ್ಧ ದೂರು ನೀಡಿದ್ದು, ಪಟ್ಟಣದ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಈ ಸಂಬಂಧ ತನಿಖೆ ನಡೆಯುತ್ತಿರುವುದರಿಂದ ಗ್ರಾಹಕರು ಆತಂಕಕ್ಕೆ ಒಳಾಗಾಗುವುದು ಬೇಡ ಎಂದು ಧೈರ್ಯ ತುಂಬಿದರು.
ಬ್ಯಾಂಕ್ ಆಡಳಿತ ಮಂಡಳಿ ಸದಸ್ಯರು ಮತ್ತು ಅಧಿಕಾರಿಗಳು ಸೇರಿ ಸಾಲದ ವಸೂಲಾತಿಯನ್ನು ಗಂಭೀರವಾಗಿ ಮಾಡುತ್ತಿದ್ದು, ಗ್ರಾಹಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಮತ್ತು ಬ್ಯಾಂಕ್‌ನಲ್ಲಿ ವ್ಯವಹರಿಸುತ್ತಿರುವ ಎಲ್ಲ ಗ್ರಾಹಕರ ಹೆಸರಿನಲ್ಲೂ ವಿಮೆ ಮಾಡಿಸಿರುವುದರಿಂದ ಪ್ರತಿಯೊಬ್ಬ ಗ್ರಾಹಕರಿಗೂ 5 ಲಕ್ಷ ರೂ.ವರೆಗೆ ವಿಮೆ ಹಣ ಬರುತ್ತದೆ. ಈ ಹಿನ್ನೆಲೆಯಲ್ಲಿ ಗ್ರಾಹಕರು ಯಾವುದೇ ರೀತಿಯಲ್ಲಿ ಭಯಪಡುವ ಅವಶ್ಯಕತೆಯಿಲ್ಲ ಎಂದು ಭರವಸೆ ವ್ಯಕ್ತಪಡಿಸಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಪ್ರತಿಭಟನೆಯಲ್ಲಿ ಲಕ್ಷ್ಮಮ್ಮ, ರಾಮಚಂದ್ರಾಚಾರಿ, ನಾರಾಯಣ್, ಪ್ರಶಾಂತ್, ಜಯರಾಮು, ಲಕ್ಷ್ಮೀ ಮತ್ತಿತರರು ಭಾಗವಹಿಸಿದ್ದರು.