ಶಿಂಷಾ ಎಡದಂಡ ನಾಲೆಯಲ್ಲಿ ಹೆಚ್ಚಿದ ಅಶುಚಿತ್ವ

16M.D.R.1 (1)
ಶಿಂಷಾ ಎಡದಂಡೆ ನಾಲೆಯಲ್ಲಿ ಗಿಡಗಂಟಿ ಬೆಳೆದುಕೊಂಡಿರುವುದು.
Published on

ಮದ್ದೂರು: ತಾಲೂಕಿನ ಸೋಮನಹಳ್ಳಿಯ ಬೆಂಗಳೂರು-ಮೈಸೂರು ಹೆದ್ದಾರಿಯಿಂದ ಮಲ್ಲಯ್ಯ ನಗರಕ್ಕೆ ಸಂಪರ್ಕ ಕಲ್ಪಿಸುವ ಶಿಂಷಾ ಎಡದಂಡ ನಾಲೆಯಲ್ಲಿ ಗಿಡಗಂಟಿ ಬೆಳೆದು ಅಶುಚಿತ್ವ ತಾಂಡವವಾಡುತ್ತಿದೆ.

ನಾಲೆಯನ್ನು ಸ್ವಚ್ಛಗೊಳಿಸಿದ ಹಿನ್ನೆಲೆಯಲ್ಲಿ ಹಾಗೂ ಅಭಿವೃದ್ಧಿಗೊಳಿಸದ ಪರಿಣಾಮ ಗಿಡಗಂಟಿ ಬೆಳೆದು ನಿಂತಿದೆ. ಜತೆಗೆ ಕಲುಷಿತ ವಸ್ತುಗಳಿಂದಾಗಿ ನಾಲೆ ಹಾವು ಹಾಗೂ ಚೋಳುಗಳ ಆವಾಸ ಸ್ಥಾನ ವಾಗಿ ಮಾರ್ಪಟ್ಟಿದ್ದು, ಅನೈರ್ಮಲ್ಯ ಹೆಚ್ಚಾಗಿದೆ.

ನಾಲೆಗೆ ಕಲುಷಿತ ನೀರೂ ಸೇರುತ್ತಿರುವುದರಿಂದ ಅಶುದ್ಧತೆ ಹೆಚ್ಚಿದೆ. ಈ ನೀರನ್ನೇ ವ್ಯವಸಾಯಕ್ಕೆ ಬಳಸುವುದರಿಂದ ರೈತರಿಗೆ ಚರ್ಮ ರೋಗ ಸೇರಿದಂತೆ ಇತರ ರೋಗಗಳು ಕಾಣಿಸಿಕೊಳ್ಳುತ್ತಿದೆ. ಇದಲ್ಲದೆ ನಾಲೆಯಲ್ಲಿ ಕುಲುಷಿತ ವಸ್ತುಗಳು ಸೇರಿಕೊಂಡಿರುವುದರಿಂದ ರಾತ್ರಿ ವೇಳೆ ಸೊಳ್ಳೆಗಳು ಹೆಚ್ಚಾಗಿ ಸಾಂಕ್ರಾಮಿಕ ರೋಗ ಕಾಣಿಸಿಕೊಳ್ಳುವ ಭೀತಿ ಎದುರಾಗಿದೆ. ಈ ನಡುವೆ ನಾಲೆಯು ಕೆಲವು ಕಡೆ ಕುಸಿಯುತ್ತಿರುವುದರಿಂದ ಅವಘಡ ಸಂಭವಿಸುವ ಸಾಧ್ಯತೆಯಿದೆ.

ಬೆಂಗಳೂರು-ಮೈಸೂರು ಹೆದ್ದಾರಿಯ ಪಕ್ಕಲ್ಲೇ ಈ ನಾಲೆ ಇರುವುದರಿಂದ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕೆಂಬುದು ಸ್ಥಳೀಯರ ಆಗ್ರಹ.

ಶಿಂಷಾ ಎಡದಂಡೆ ನಾಲೆಗೆ ಹೆಮ್ಮನಹಳ್ಳಿ ಕೆರೆಯಿಂದ ನೀರು ಹರಿದು ಬರಲಿದ್ದು, ಸೋಮನಹಳ್ಳಿ, ತೈಲೂರು ಇತರ ಕೆರೆಗಳಿಗೆ ಹರಿದು ಹೋಗಲಿದೆ. ನಾಲೆಯಲ್ಲಿ ಗಿಡಗಂಟಿ ಬೆಳೆದಿರುವುದರಿಂದ ನೀರು ಸರಾಗವಾಗಿ ಹೋಗಲು ಕಷ್ಟವಾಗುತ್ತಿದೆ.

ಸೋಮನಹಳ್ಳಿಯಿಂದ ಮಲ್ಲಯ್ಯ ನಗರಕ್ಕೆ ಹೋಗುವ ಮಾರ್ಗದಲ್ಲಿ ನಿತ್ಯ ನೂರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತವೆ. ನಾಲೆಯ ಪಕ್ಕ ತಡೆಗೋಡೆ ನಿರ್ಮಾಣ ಮಾಡದಿರುವುದರಿಂದ ಸುಮಾರು 10 ರಿಂದ 15 ಅಡಿ ಆಳವಿರುವ ನಾಲೆಯೊಳಗೆ ಬೈಕ್ ಅಥವಾ ಪಾದಚಾರಿಗಳು ಬಿದ್ದರೆ ಹೆಚ್ಚಿನ ಮಟ್ಟದ ಅವಘಡಗಳು ಸಂಭವಿಸುವ ಸಾಧ್ಯತೆಗಳಿವೆ.

ನಾಲೆಯನ್ನು ಸಮಗ್ರವಾಗಿ ಅಭಿವೃದ್ಧಿ ಮಾಡುವ ಸಂಬಂಧ ಕ್ರಿಯಾ ಯೋಜನೆ ರೂಪಿಸಿ ಸರ್ಕಾರದ ಗಮನಕ್ಕೆ ತರಲಾಗಿದ್ದು, ಹಣ ಬಿಡುಗಡೆ ಆದ ತಕ್ಷಣ ನಾಲೆ ಅಭಿವೃದ್ಧಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.

ನಾಗರಾಜು ಎಇಇ, ಕಾವೇರಿ ನೀರಾವರಿ ನಿಗಮ.

ನಾಲೆಯಲ್ಲಿ ಗಿಡಗಂಟಿ ಬೆಳೆದುಕೊಂಡಿರುವುದರಿಂದ ವಾತಾವರಣ ಹದಗೆಟ್ಟಿದೆ. ನಾಲೆಯ ಪಕ್ಕ ತಡೆಗೋಡೆ ನಿರ್ಮಾಣ ಮಾಡದಿರುವುದರಿಂದ ಅವಘಡಗಳು ಸಂಭವಿಸಿ ಸಾವು-ನೋವು ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ನಾಲೆಯನ್ನು ಅಭಿವೃದ್ಧಿ ಪಡಿಸಿ ಸಾರ್ವಜನಿಕರು ಮತ್ತು ರೈತರಿಗೆ ಅನುಕೂಲ ಮಾಡಿಕೊಬೇಕು.

ಪ್ರವೀಣ್ ಸೋಮನಹಳ್ಳಿ ನಿವಾಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net