

ಬಸವಕಲ್ಯಾಣ: ದಲಿತರ ಹಾಗೂ ಹಿಂದುಳಿದವರ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಉನ್ನತಿಗಾಗಿ ಮೀಸಲಾತಿ ಯೋಜನೆ ಮೊಟ್ಟಮೊದಲು ಜಾರಿಗೆ ತಂದ ಶ್ರೇಯಸ್ಸು ಛತ್ರಪತಿ ಶಾಹು ಮಹಾರಾಜರಿಗೆ ಸಲ್ಲುತ್ತದೆ ಎಂದು ಸಾಹಿತಿ ದತ್ತಾತ್ರೇಯ ಪವಾರ್ ಹೇಳಿದರು.
ನಗರದ ಶಿವಾಜಿ ಪಾರ್ಕ್ನಲ್ಲಿ ಕರ್ನಾಟಕ ಮರಾಠಾ ನೌಕರರ ಸಂಘ ತಾಲೂಕು ಘಟಕದಿಂದ ಗುರುವಾರ ಆಯೋಜಿಸಿದ್ದ ಛತ್ರಪತಿ ಶಾಹು ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೈಚಾರಿಕ, ವೈಜ್ಞಾನಿಕ ತಳಹದಿಯಲ್ಲಿ ಆಲೋಚಿಸುತ್ತಿದ್ದ ಶಾಹು ಮಹಾರಾಜರು ಜನಸಾಮಾನ್ಯರ ಜತೆಯಲ್ಲಿ ಬೆರೆತು ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಎಲ್ಲರ ಹಿತ ಬಯಸಿದ ಶ್ರೇಷ್ಠ ಸಮಾಜ ಸುಧಾರಕರಾಗಿದ್ದರು. ಜಲಾಶಯ, ಕೆರೆ, ಕಾಲುವೆ ನಿರ್ಮಿಸಿ ಕೃಷಿಕರಿಗೆ ಅನುಕೂಲತೆ ಒದಗಿಸಿದ್ದರು. ಅವರು ಮಾಡಿದ ಕಾರ್ಯ, ನೀಡಿದ ಕೊಡುಗೆ ದೊಡ್ಡದು ಎಂದು ಬಣ್ಣಿಸಿದರು.
ಸಂಪನ್ಮೂಲ ವ್ಯಕ್ತಿ ಬಾಲಕೃಷ್ಣ ಪಾಟೀಲ ಮಾತನಾಡಿ, ಸಮಾಜದ ಅಭಿವೃದ್ಧಿಗಾಗಿ ಸಂಘಟನೆ ಬಲಗೊಳಿಸಬೇಕಾದ ಅವಶ್ಯಕತೆವಿದ್ದು, ಇದಕ್ಕಾಗಿ ಎಲ್ಲರೂ ಪರಸ್ಪರರಿಗೆ ಸಹಾಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಶಿವಸೃಷ್ಠಿ ಸಮಿತಿ ಕಾರ್ಯದರ್ಶಿ ತಾತೇರಾವ ಪಾಟೀಲ ಮತ್ತು ಭಾನುದಾಸ ಪಾಟೀಲ ಅವರು ಶಾಹು ಮಹಾರಾಜರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿದರು. ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಮಹೇಶ ಮುಳೆ ಮಾತನಾಡಿದರು.
ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ವಿಜಯಕುಮಾರ ಮಾನೆ, ಉಪನ್ಯಾಸಕ ಶ್ರೀಕಾಂತ ಚವ್ಹಾಣ್, ಮಾಣಿಕ ಭುರೆ, ಸಂಜೀವಕುಮಾರ ನಡುಕರ, ನವೀನ ಶ್ರೀವಾಸ್ತವ, ಅಶೋಕ ಪಾಟೀಲ, ಗಿರಿಧರ ಧಾನೂರೆ, ಬಾಲಾಜಿ ಹಿಪ್ಪರ್ಗೆ, ಮದನ ಪಾಟೀಲ ಇತರರಿದ್ದರು.