ಶಾಹೀನ್ ಕಾಲೇಜಿಗೆ ಏಳನೇ ರ್ಯಾಂಕ್

AADITYA nitture - Copy
Published on

ಬೀದರ್: ಪ್ರಸಕ್ತ ಸಾಲಿನ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ(ಕೆಸಿಇಟಿ)ಯಲ್ಲಿ ಇಲ್ಲಿಯ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿ ಆದಿತ್ಯ ನಿಟ್ಟೂರೆ ಏಳನೇ ರ್ಯಾಂಕ್ ಗಳಿಸುವ ಮೂಲಕ ಗಮನ ಸೆಳೆದಿದ್ದಾರೆ.
ಆದಿತ್ಯ ಪಶು ವೈದ್ಯಕೀಯ ಹಾಗೂ ಬಿ.ಎಸ್ಸಿ ನರ್ಸಿಂಗ್ ವಿಭಾಗಗಳಲ್ಲಿ ಏಳನೇ ರ್ಯಾಂಕ್ ಗಳಿಸಿ ಸಾಧನೆಗೈದಿದ್ದಾರೆ. ಪಶು ವೈದ್ಯಕೀಯ ವಿಭಾಗದಲ್ಲಿ ಕಾಲೇಜಿನ ಓವೆಸ್ 34ನೇ ರ್ಯಾಂಕ್, ನಿಹಾಲ್ ಹಲಂಗೆ 43ನೇ ರ್ಯಾಂಕ್, ಅಭಿಷೇಕ 58ನೇ ರ್ಯಾಂಕ್, ಆದರ್ಶ 61ನೇ ರ್ಯಾಂಕ್ ಹಾಗೂ ಅಮೋಘ 82ನೇ ರ್ಯಾಂಕ್ ಗಳಿಸಿದ್ದಾರೆ.
ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯ ಪಶು ವೈದ್ಯಕೀಯ, ಎಂಜಿನಿಯರಿಂಗ್, ಬಿ.ಎಸ್ಸಿ ನರ್ಸಿಂಗ್, ಬಿ.ವೈ.ಎನ್.ಎಸ್. ವಿಭಾಗಗಳಲ್ಲಿ ಕಾಲೇಜು ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ ಎಂದು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ತಿಳಿಸಿದ್ದಾರೆ.
6 ವಿದ್ಯಾರ್ಥಿಗಳು 100 ರ ಒಳಗೆ, 30 ವಿದ್ಯಾರ್ಥಿಗಳು 500 ರ ಒಳಗೆ ಹಾಗೂ 50 ವಿದ್ಯಾರ್ಥಿಗಳು 1,000 ರ ಒಳಗೆ ರ್ಯಾಂಕ್ ಗಳಿಸಿದ್ದಾರೆ ಎಂದು ಹೇಳಿದ್ದಾರೆ.
ಶಾಹೀನ್ ಪದವಿಪೂರ್ವ ಕಾಲೇಜು ನೀಟ್ ಹಾಗೂ ಕೆಸಿಇಟಿಯಲ್ಲಿ ಪ್ರತಿ ವರ್ಷ ಸಾಧನೆ ಮಾಡುತ್ತಲೇ ಇದೆ. ಕಾಲೇಜಿನ ವಿನೀತ ಮೇಗೂರ ಹಿಂದೆ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯ ಪಶು ವೈದ್ಯಕೀಯ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಗಳಿಸಿದ್ದರು. ಅರ್ಬಾಜ್ 6ನೇ ಮತ್ತು ಕಾರ್ತಿಕ ರೆಡ್ಡಿ 9ನೇ ರ್ಯಾಂಕ್ ಪಡೆದಿದ್ದರು. ವೈದ್ಯಕೀಯ ವಿಭಾಗದಲ್ಲಿ ವಚನಶ್ರೀ ಪಾಟೀಲ 3ನೇ ರ್ಯಾಂಕ್ ಗಳಿಸಿದ್ದರು ಎಂದು ತಿಳಿಸಿದ್ದಾರೆ.
ಗುಣಮಟ್ಟದ ಹಾಗೂ ಸ್ಪರ್ಧಾತ್ಮಕ ಶಿಕ್ಷಣದ ಫಲವಾಗಿ ಶಾಹೀನ್ ವಿವಿಧ ಪರೀಕ್ಷೆಗಳಲ್ಲಿ ಸಾಧನೆಗೈಯಲು ಸಾಧ್ಯವಾಗುತ್ತಿದೆ. ಇದೇ ಕಾರಣಕ್ಕೆ ರಾಜ್ಯ ಮಾತ್ರವಲ್ಲದೆ, ದೇಶದ ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ಈಗ ಬೀದರ್‍ನತ್ತ ಮುಖ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ದಶಕದ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಬೀದರ್ ಶೈಕ್ಷಣಿಕವಾಗಿ ತೀವ್ರಗತಿಯಲ್ಲಿ ಪ್ರಗತಿ ಸಾಧಿಸುತ್ತಿದೆ. ಜಿಲ್ಲೆಯ ವಿದ್ಯಾರ್ಥಿಗಳು ವಿವಿಧ ಪರೀಕ್ಷೆಗಳಲ್ಲಿ ಪ್ರತಿಭೆ ಪ್ರದರ್ಶಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಸನ್ಮಾನ: ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ನಗರದ ಶಹಾಪುರ ಗೇಟ್ ಬಳಿಯ ಕಾಲೇಜಿನ ಮುಖ್ಯ ಶಾಖೆಯಲ್ಲಿ ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net