

ಬಾಗೇಪಲ್ಲಿ: ಶುದ್ಧ ಕುಡಿಯುವ ನೀರಿನ ಘಟಕವನ್ನು ಶಾಸಕರೇ ಬಂದು ಉದ್ಘಾಟನೆ ಮಾಡುವವರೆಗೂ ಹನಿ ನೀರು ಹೊರಗೆ ಬಿಡುವುದಿಲ್ಲ ಎಂದು ಬೆಂಬಲಿಗರು ಘಟಕಕ್ಕೆ ಬೀಗ ಜಡಿದಿರುವುದರಿಂದ ಕುಡಿಯುವ ನೀರಿಲ್ಲದ ಪರದಾಡುತ್ತಿರುವ ಕಮ್ಮವಾರಪಲ್ಲಿ ಗ್ರಾಮಸ್ಥರು ಶುಕ್ರವಾರ ಘಟಕದ ಎದುರು ಪ್ರತಿಭಟನೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿದ್ದಾರೆ.
ದೇವರಗುಡಿಪಲ್ಲಿ ಗ್ರಾಮ ಪಂಚಾಯಿತಿಯ ಕಮ್ಮವಾರಪಲ್ಲಿಯಲ್ಲಿ 6 ಲಕ್ಷ ರೂ. ವೆಚ್ಚದಲ್ಲಿ ನೀರು ಶುದ್ಧೀಕರಣ ಘಟಕ ಸ್ಥಾಪಿಸಲಾಗಿದೆ. ಘಟಕ ಸ್ವಯಂ ಚಾಲಿತವಾಗಿದ್ದು ನೀರು ಪಡೆಯಲು ಘಟಕ ನಿರ್ಮಾಣ ಸಂಸ್ಥೆ ಸಿದ್ಧಪಡಿಸಿರುವ ಕಾರ್ಡ್‌ಗಳನ್ನು 15 ದಿನಗಳ ಹಿಂದೆಯೇ ಗ್ರಾಮಸ್ಥರಿಗೆ ಹಂಚಲಾಗಿದ್ದು, ಗ್ರಾಮಸ್ಥರು ಈ ಕಾರ್ಡ್‌ಗಳು ಬಳಸಿ ನೀರು ಪಡೆದುಕೊಳ್ಳಬಹುದಾಗಿದೆ.
ಆದರೆ ಶಾಸಕರು ಬಂದು ಪೂಜೆ ನೆರವೇರಿಸಿ ಉದ್ಘಾಟನೆ ಮಾಡುವವರೆಗೂ ನೀರು ಬಿಡಬಾರದು ಎಂದು ಗ್ರಾಮದಲ್ಲಿರುವ ಶಾಸಕರ ಬೆಂಬಲಿಗರು ಜಲಗಾರನ ಮೂಲಕ ಘಟಕಕ್ಕೆ ಬೀಗ ಹಾಕಿಸಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಬೀಗದ ಕೀ ನೀಡಿದ್ದಾರೆ ಎಂಬುದು ಗ್ರಾಮಸ್ಥರ ಆರೋಪ.
ಗ್ರಾಮದಲ್ಲಿ 100 ಕ್ಕೂ ಹೆಚ್ಚು ಕುಟುಂಬಗಳು ವಾಸವಿದ್ದು 500 ಜನಸಂಖ್ಯೆ ಇದೆ. ಬೇಸಿಗೆ ಸಮಯವಾಗಿರುವುದರಿಂದ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು ಹಾಹಾಕಾರ ಎದ್ದಿದೆ, ಇಂತಹ ಸಮಯದಲ್ಲಿ ಸರ್ಕಾರದಿಂದ ನೀರಿನ ಶುದ್ಧೀಕರಣ ಘಟಕ ನಿರ್ಮಿಸಿದ್ದರೂ ಗ್ರಾಮಸ್ಥರಿಗೆ ಪ್ರಯೋಜನ ಇಲ್ಲದಂತಾಗಿದೆ, ಬದಲಾಗಿ ಅಕ್ಕಪಕ್ಕದ ಮಾಕಿರೆಡ್ಡಿಪಲ್ಲಿ ತಾಂಡ, ಎಂ.ಚರ್ಲೋಪಲ್ಲಿಯಲ್ಲಿನ ಘಟಕಗಳಿಂದ ಆಟೋ ಮತ್ತು ದ್ವಿಚಕ್ರ ವಾಹನಗಳಲ್ಲಿ ತೆರಳಿ ನೀರು ತರಬೇಕಿದೆ ಎಂದು ಪ್ರತಿಭಟನಾನಿರತರು ಅಲವತ್ತುಕೊಂಡರು.
ಕರೊನಾ ಸೋಂಕು ಹರಡುವ ಭೀತಿಯಿಂದ ಅಕ್ಕಪಕ್ಕದ ಗ್ರಾಮಗಳಿಗೆ ಹೋಗಿ ನೀರು ತರಲು ಗ್ರಾಮಸ್ಥರು ಹಿಂಜರಿಯುತ್ತಿದ್ದು ಗ್ರಾಮದಲ್ಲಿ ತಲೆದೋರಿರುವ ನೀರಿ ಸಮಸ್ಯೆಯನ್ನು ಬಗೆಹರಿಸಿಕೊಡಬೇಕೆಂದು ಪಟ್ಟು ಹಿಡಿದ್ದಾರೆ. ಲಕ್ಷ್ಮೀನರಸಪ್ಪ, ಶಿವಪ್ಪ, ಚಿನ್ನನಾರಪ್ಪ, ನಾರಾಯಣಪ್ಪ, ಗೋವಿಂದಪ್ಪ, ತಿಪ್ಪಮ್ಮ, ವೆಂಕಟಲಕ್ಷ್ಮಮ್ಮ, ರಂಗಮ್ಮ, ಪ್ರಭಾವತಮ್ಮ, ಗಂಗಮ್ಮ, ಮಮತಮ್ಮ ಮತ್ತಿತರರು ಇದ್ದರು.
ಶಾಸಕರು ಬಂದು ಉದ್ಘಾಟನೆ ಮಾಡುವವರೆಗೂ ನೀರು ಬಿಡುವುದಿಲ್ಲ ಎಂದು ಶಾಸಕರ ಬೆಂಬಲಿಗರು ನೀರಿನ ವಿಚಾರದಲ್ಲಿ ರಾಜಕೀಯ ಮಾಡಿ ಘಟಕಕ್ಕೆ ಬೀಗ ಹಾಕಿದ್ದಾರೆ. ಘಟಕ ಪ್ರಾರಂಭಿಸುವಂತೆ ತಾಪಂ ಮತ್ತು ಗ್ರಾಪಂ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ. ಈಗಲಾದರೂ ಘಟಕವನ್ನು ತೆರೆದು ಜನರಿಗೆ ನೀರು ಪೂರೈಸಬೇಕಾಗಿದೆ. ಸುಬ್ಬರಾಯಪ್ಪ ಗ್ರಾಪಂ ಮಾಜಿ ಸದಸ್ಯ. ಕಮ್ಮವಾರಪಲ್ಲಿ ಗ್ರಾಮ