ಶಾಸಕರ ವಿರುದ್ಧ ಕಾನೂನು ಹೋರಾಟ: ಎನ್.ಆರ್.ಸಂತೋಷ್

ಶಾಸಕರ ವಿರುದ್ಧ ಕಾನೂನು ಹೋರಾಟ: ಎನ್.ಆರ್.ಸಂತೋಷ್
Published on

ಹಾಸನ: ನಾಲ್ಕು ಬಾರಿ ಶಾಸಕರಾಗಿರುವ ಕೆ.ಎಂ. ಶಿವಲಿಂಗೇಗೌಡ ಮತ್ತು ಮೂರು ಬಾರಿ ಅರಸೀಕೆರೆ ನಗರಸಭೆ ಅಧ್ಯಕ್ಷರಾಗಿರುವ ಸಮಿವುಲ್ಲಾ ಅವರು ಸಾಕಷ್ಟು ಭ್ರಷ್ಟಾಚಾರ ಮತ್ತು ಹಗರಣಗಳನ್ನು ಮಾಡಿದ್ದು ಇದರ ಬಗ್ಗೆ ಕಾನೂನು ಹೋರಾಟ ನಡೆಸುವುದರ ಜತೆಗೆ ಬೀದಿಗಿಳಿದು ಪ್ರತಿಭಟನೆ ನಡೆಸಲಾಗುವುದು ಎಂದು ಜೆಡಿಎಸ್ ಮುಖಂಡ ಎನ್.ಆರ್. ಸಂತೋಷ್ ಎಚ್ಚರಿಸಿದರು.
ವಸತಿ ಯೋಜನೆ, ಯುಜಿಡಿ, ರಸ್ತೆ ಕಾಮಗಾರಿ, ನಗರೋತ್ಥಾನ ಸೇರಿದಂತೆ ಹಲವು ಯೋಜನೆಗಳಲ್ಲಿ ಕಳಪೆ ಮತ್ತು ಭ್ರಷ್ಟಾಚಾರ ನಡೆದಿದ್ದು ಇದರ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅರಸೀಕೆರೆ ಸುಬ್ರಮಣ್ಯ ನಗರ ಬಡಾವಣೆಯಲ್ಲಿ ಮನೆಗಳ ನಿರ್ಮಾಣದ ಕಾಮಗಾರಿ ಮುಗಿದಿದ್ದು ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಸ್ಥಳೀಯ ಶಾಸಕರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಈ ಕಾಮಗಾರಿಯೂ ಕೂಡ ಕಳಪೆಯಿಂದ ಕೂಡಿದ್ದು ಮನೆಗಳಲ್ಲಿ ಕೆಲವು ಬಿದ್ದು ಹೋಗುವ ಹಂತಕ್ಕೆ ಬಂದಿವೆ. ಈ ಬಡಾವಣೆಯಲ್ಲಿ ನಿವೇಶನಕ್ಕೆ 800 ಜನ ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ 500 ಜನ ಫಲಾನುಭವಿಗಳು 10,000 ಹಣ ಕಟ್ಟಿದ್ದಾರೆ. ಉಳಿದವರು ಹಣ ಕಟ್ಟಿಲ್ಲ. ಆದರೂ ಕೂಡ ಒಂದು ಸಮುದಾಯವನ್ನು ಓಲೈಕೆ ಮಾಡುವ ಹಿನ್ನೆಲೆಯಲ್ಲಿ ಅರ್ಧದಷ್ಟು ನಿವೇಶನಗಳನ್ನ ಹಣ ಕಟ್ಟದಿದ್ದರೆ ಆ ಸಮುದಾಯದ ಜನರಿಗೆ ಹಂಚಿಕೆ ಮಾಡಲಾಗಿದೆ ಎಂದು ಗಂಭೀರವಾಗಿ ಆರೋಪಿಸಿದರು.
ನಾಲ್ಕು ಬಾರಿ ಶಾಸಕರಾಗಿರುವ ಶಿವಲಿಂಗೇಗೌಡರು ಸದನದಲ್ಲಿ ನಮ್ಮ ಸರ್ಕಾರ ಇಲ್ಲದಿದ್ದರೂ ಕೂಡ ಟೇಬಲ್ ಕುಟ್ಟಿ ಅನುದಾನ ತಂದಿದ್ದೇನೆ ಎಂದು ಹೇಳುತ್ತಿದ್ದರು. ಈಗ ಅವರದೇ ಸರ್ಕಾರವಿದೆ. ಕೈಯಿಂದನಾದರು ಕುಟ್ಟಲಿ ಅಥವಾ ತಲೆಯಿಂದನಾದರೂ ಕುಟ್ಟಲಿ. ಒಟ್ಟಿನಲ್ಲಿ ಅನುದಾನವನ್ನು ತಂದು ಯುಜಿಡಿ ಮತ್ತು ರಸ್ತೆ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ನಗರ ಸಭೆಯ ನಗರೋತ್ಥಾನ ಯೋಜನೆಯಲ್ಲಿ ಶಾಸಕರ ಹಿಂಬಾಲಕರು ಬೇನಾಮಿ ಹೆಸರಿನಲ್ಲಿ ಕಾಮಗಾರಿ ಮಾಡುತ್ತಿದ್ದಾರೆ. ಈ ಹಿಂದಿನ ನಗರಸಭೆ ಅಧ್ಯಕ್ಷರಾದ ಗಿರೀಶ್ ಅವರ ಅವಧಿ ಮುಗಿದ ಮೇಲೆ 19 ಕೋಟಿ ರೂ.ಗೆ ಅನುಮೋದನೆ ಪಡೆದುಕೊಂಡಿದ್ದಾರೆ. ಇದರಲ್ಲಿ ಕೂಡ ಅಕ್ರಮ ನಡೆದಿರುವ ಶಂಕೆ ಇದ್ದು, ಈ ಬಗ್ಗೆ ಲೋಕಾಯುಕ್ತ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ನಗರಸಭೆ ಅಧ್ಯಕ್ಷರು ಮತ್ತು ಆಯುಕ್ತರು ತರಾತುರಿಯಲ್ಲಿ ಹೊಸ ಬಡಾವಣೆಗಳಿಗೆ ಅನುಮೋದನೆ ನೀಡುತ್ತಿದ್ದಾರೆ. ಇದನ್ನು ಪ್ರಶ್ನಿಸಿದರೆ ಆಯುಕ್ತರು ಹಾರಿಕೆಯ ಉತ್ತರ ನೀಡುತ್ತಾರೆ. ಒಂದು ನಿವೇಶನಕ್ಕೆ ಒಂದು ಲಕ್ಷ ರೂ.ನಿಂದ ಎರಡು ಲಕ್ಷದವರೆಗೂ ಹಣ ಪಡೆಯುತ್ತಿದ್ದು, ಇದರಿಂದ ಮೂರು ಕೋಟಿಗೂ ಅಧಿಕ ಹಣ ಸಂಗ್ರಹ ಮಾಡುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.
ಅರಸೀಕೆರೆ ತಾಲೂಕಿನಲ್ಲಿ 45 ಅಂಗನವಾಡಿಗಳಿಗೆ 126 ಸಹಾಯಕಿಯರ ಹುದ್ದೆಗೆ ಅರ್ಜಿ ಕರೆಯಲಾಗಿದೆ. ಇಲ್ಲೂ ಸಹ ಭಾರಿ ಭ್ರಷ್ಟಾಚಾರ ನಡೆಯುತ್ತಿದೆ. ಇದರ ಬಗ್ಗೆಯೂ ಸಮಗ್ರ ತನಿಖೆಯಾಗಬೇಕು ಮತ್ತು ಅರ್ಹ ಫಲಾನುಭವಿಗಳಿಗೆ ಉದ್ಯೋಗ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಮುಖಂಡರಾದ ಪಂಚಣ್ಣ, ಉಮೇಶ್, ರಮೇಶ್, ಪುಟಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net