ಶಾಸಕರ ಮುಂದೆ ಸಮಸ್ಯೆಗಳ ಸುರಿಮಳೆ

2-pnp 1
Published on

ಪಾಂಡವಪುರ: ತಾಲೂಕಿನ ಡಿಂಕಾ ಗ್ರಾಮದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಡಿಂಕಾ ಗ್ರಾಪಂ ವ್ಯಾಪ್ತಿಯ ಜನರು ಪಂಚಾಯತ್‌ರಾಜ್, ಕಂದಾಯ, ಸಣ್ಣನೀರಾವರಿ ಇಲಾಖೆ, ಗ್ರಾಮದ ಸ್ವಚ್ಛತೆ ಮತ್ತು ಪಿಡಿಒ ವರ್ತನೆಗಳ ಬಗ್ಗೆ ದೂರುಗಳ ಸುರಿಮಳೆಗೈದರು.

ಸಭೆಯಲ್ಲಿ ಅಧಿಕಾರಿಗಳು ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡಿಕೊಡಲು ತಿಂಗಳುಗಟ್ಟಲೇ ಅಲೆಸುತ್ತಾರೆ. ದಾಖಲೆಗಳು ಸರಿ ಇದ್ದರೂ ಕೆಲಸಗಳು ಆಗುತ್ತಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದರೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುತ್ತೇನೆ ಎಂದು ಬೆದರಿಕೆ ಹಾಕಿತ್ತಾರೆ. ಗ್ರಾಪಂ ವ್ಯಾಪ್ತಿಯ ಚರಂಡಿಗಳು ಗಬ್ಬು ನಾರುತ್ತಿವೆ. ಸ್ವಚ್ಛ ಭಾರತ್ ಘೋಷಣೆ ಕೂಗುತ್ತೇವೆ. ಆದರೆ ಹಲವು ತಿಂಗಳುಗಳು ಕಳೆದರೂ ಚರಂಡಿ ಮತ್ತು ರಸ್ತೆಗಳನ್ನು ಸ್ವಚ್ಛತೆ ಮಾಡುತ್ತಿಲ್ಲ. ಶಾಲೆಗಳಿಗೆ ಸೂಕ್ತ ಕಟ್ಟಡದ ವ್ಯವಸ್ಥೆ, ಕಾಂಪೌಂಡ್, ಶೌಚಗೃಹಗಳಿಲ್ಲ, ಜನಸಂಪರ್ಕ ಸಭೆಗೆ ಶಾಸಕರು ಬರುತ್ತಾರೆ ಎಂದು ತಿಳಿದಿದ್ದರೂ ಸ್ವಚ್ಛತೆ ಮಾಡುವ ಕೆಲಸ ಮಾಡಿಲ್ಲ ಎಂದರೆ ಅಧಿಕಾರಿಗಳು ಯಾವ ರೀತಿ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಅರ್ಥೈಸಿಕೊಳ್ಳಿ ಎಂದು ಶಾಸಕರಿಗೆ ದೂರುಗಳನ್ನು ಹೇಳಿದರು.


ಡಿಂಕಾ ಶೆಟ್ಟಹಳ್ಳಿ ಗ್ರಾಮದಲ್ಲಿ 31.33 ಸರ್ಕಾರಿ ಗೋಮಾಳವಿದ್ದು, ಇದರಲ್ಲಿ 20 ಎಕರೆ ಗೋಮಾಳವನ್ನು ಪ್ರಭಾವಿಗಳು ಆಕ್ರಮಿಸಿಕೊಂಡಿದ್ದಾರೆ. ಇರುವ ಜಾಗದಲ್ಲಿ ಸರ್ಕಾರಿ ಶಾಲೆಯ ಮಕ್ಕಳು ಆಟವಾಡುವ ಉದ್ದೇಶಕ್ಕೆ 2 ಎಕರೆ ಮೈದಾನವನ್ನು ಮೀಸಲಿಡುವಂತೆ ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಬಡವರಿಗೆ ವಿತರಿಸಲಾಗಿರುವ ಹಕ್ಕು ಪತ್ರಗಳಲ್ಲಿರುವ ನಿವೇಶನದ ಅಳತೆಗೂ ಪಂಚಾಯಿತಿಯಲ್ಲಿ ನೀಡುವ ಅಸೆಸ್ಮೆಂಟ್‌ನಲ್ಲಿ ದಾಖಲಾಗಿರುವ ಅಳತೆಗಳಿಗೂ ವ್ಯತ್ಯಾಸವಿದೆ. ಕೆಲವರಿಗೆ ನಿವೇಶನವೇ ಇಲ್ಲದೆ ಇದ್ದರೂ ಖಾತೆಗಳನ್ನು ಮಾಡಿಕೊಡಲಾಗಿದೆ. ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯಲು ಪ್ರತಿನಿತ್ಯ ಕಚೇರಿಗಳಿಗೆ ಅಲೆಯಬೇಕಿದೆ. ಅಧಿಕಾರಿಗಳು ಹೇಳಿದಂತೆ ಇಕೆವೈಸಿ ಮಾಡಿಸಿದರೂ ಹಣ ಬರುತ್ತಿಲ್ಲ ಎಂದು ಆರೋಪಿಸಿದರು.
ಏತ ನೀರಾವರಿ ಕಾಮಗಾರಿ ಪೂರ್ಣಗೊಂಡಿಲ್ಲ


ಕೆ.ಎಸ್.ಪುಟ್ಟಣ್ಣಯ್ಯ ಅವರು ಶಾಸಕರಾಗಿದ್ದ ಅವಧಿಯಲ್ಲಿ ಕೆಆರ್‌ಎಸ್‌ನಿಂದ ಏತನೀರಾವರಿ ಮೂಲಕ ಕೆರೆಗಳನ್ನು ತುಂಬಿಸಲು 22 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. ಆದರೆ ಏಳು ವರ್ಷ ಕಳೆದರೂ ಈ ಕಾಮಗಾರಿ ಪೂರ್ಣಗೊಂಡಿಲ್ಲ. ಪೈಪ್‌ಲೈನ್ ಅಳವಡಿಕೆಗಾಗಿ ತಂದಿರುವ ಪೈಪ್‌ಗಳನ್ನು ರೈತರ ಎರಡು ಎಕರೆ ಜಮೀನಿನಲ್ಲಿ ಹಾಕಲಾಗಿದೆ. ಇದರಿಂದ ಇಲ್ಲಿ ವ್ಯವಸಾಯ ಮಾಡಲು ಆಗುತ್ತಿಲ್ಲ. ಶಾಸಕರು ಬಂದಾಗ ಅಧಿಕಾರಿಗಳು ಫೈಲ್‌ಗಳನ್ನು ಹಿಡಿದುಕೊಂಡು ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂಬಿತ್ಯಾದಿಯಾಗಿ ಸಣ್ಣನೀರಾವರಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪೂರ್ಣಿಮಾ ಮಾತನಾಡಿ, ಕೆಲವು ತಾಂತ್ರಿಕ ಕಾರಣಗಳಿಂದ ಗೃಹಲಕ್ಷ್ಮಿ ಯೋಜನೆಯ ಹಣ ಸಂದಾಯವಾಗಿಲ್ಲ. ಇಡೀ ತಾಲೂಕಿನಲ್ಲಿ ಒಂದು ಸಾವಿರ ಫಲಾನುಭವಿಗಳಿಗೆ ಮಾತ್ರ ಹಣ ಬಿಡುಗಡೆಯಾಗಬೇಕಿದೆ. ಶೀಘ್ರದಲ್ಲೇ ತಾಂತ್ರಿಕ ತೊಂದರೆ ನಿವಾರಣೆಯಾಗಿ ಹಣ ಬಿಡುಗಡೆಯಾಗುತ್ತದೆ ಎಂದರು.


ಇಲಾಖೆಯ ಉದ್ಯೋಗಿನಿ ಯೋಜನೆಯಡಿ 1.5 ರಿಂದ 3 ಲಕ್ಷ ರೂ.ವರೆಗೆ, ಧನಶ್ರೀ ಯೋಜನೆ, ಅಲ್ಪಸಂಖ್ಯಾತರ ಕಲ್ಯಾಣನಿಧಿ ಯೋಜನೆಯಡಿಯಲ್ಲಿ 30 ಸಾವಿರ ರೂ. ಸಾಲಸೌಲಭ್ಯ ನೀಡಲಾಗುತ್ತಿದ್ದು, ಅರ್ಹರು ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸುವಂತೆ ಮನವಿ ಮಾಡಿದರು.


ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಹದಿನೈದು ದಿನಗಳ ಅಂತರದಲ್ಲಿ ಗ್ರಾಮಸ್ಥರು ನೀಡಿರುವ ದೂರುಗಳನ್ನು ಬಗೆಹರಿಸಲು ಅಧಿಕಾರಿಗಳು ಗಮನಹರಿಸಬೇಕು. ಕಾಲಾವಕಾಶಕ್ಕೆ ಅಗತ್ಯವಿರುವ ಸಮಸ್ಯೆಗಳನ್ನು ಹೊರತುಪಡಿಸಿ ಇನ್ನೆಲ್ಲ ದೂರುಗಳು ಕ್ಲಿಯರ್ ಆಗಬೇಕು. ನಂತರದಲ್ಲಿ ಅಧಿಕಾರಿಗಳು ಏನೇ ಕಾರಣ ಹೇಳಿದರೂ ನಾನು ಕೇಳುವುದಿಲ್ಲ. ಪಿಡಿಒಗಳು ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಬೇಕು. ಸಣ್ಣ, ಪುಟ್ಟ ಸಮಸ್ಯೆಗಳಿಗೂ ಜನರನ್ನು ಕಚೇರಿಗೆ ಅಲೆದಾಡಿಸಬಾರದು. ಇ-ಸ್ವತ್ತಿಗೆ ಸಂಬಂಧಿಸಿದಂತೆ ಜನರನ್ನು ಅಲೆಸದೆ ಪ್ರತಿ ಮನೆಗಳಿಗೂ ಅಧಿಕಾರಿಗಳೇ ಖುದ್ದು ಇ-ಸ್ವತ್ತು ತಲುಪಿಸುವ ಕಾರ್ಯ ಮಾಡಬೇಕು. ಸ್ವಚ್ಛತೆ ಬಗ್ಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿ ಎಚ್ಚರಿಕೆ ನೀಡಿದರು.


ಸಭೆಯಲ್ಲಿ ಗ್ರೇಡ್-2 ತಹಸೀಲ್ದಾರ್ ಎಸ್.ಸಂತೋಷ್, ತಾಪಂ ಇಒ ಲೋಕೇಶ್‌ಮೂರ್ತಿ, ಕಂದಾಯ ಇಲಾಖೆ ಶಿರಸ್ತೇದಾರ್ ಮೋಹನ್, ಪಿಡಿಒ ಸ್ವಾಮೀಗೌಡ, ಮಂಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net