

ಪಾಂಡವಪುರ: ತಾಲೂಕಿನ ಬೇಬಿ ಬೆಟ್ಟದ ಭಾರಿ ದನಗಳ ಜಾತ್ರೆಯಲ್ಲಿ ಉತ್ತಮ ರಾಸುಗಳಿಗೆ ನೀಡಲಾದ ಬಹುಮಾನ ವಿಚಾರದಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿ ಯುವಕನೊಬ್ಬ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಮನೆ ಮುಂದೆ ಎತ್ತುಗಳನ್ನು ಕಟ್ಟಿ ಶನಿವಾರ ಪ್ರತಿಭಟನೆ ನಡೆಸಿದನು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ತವರು ಗ್ರಾಮ ಕ್ಯಾತನಹಳ್ಳಿಯ ಯುವಕ ಪುನೀತ್, ಜಾತ್ರೆಯಲ್ಲಿ ಬಹುಮಾನಕ್ಕಾಗಿ ಕಟ್ಟಿದ್ದ ರಾಸುಗಳನ್ನು ಶಾಸಕರ ಮನೆ ಮುಂದೆ ಕಟ್ಟಿಹಾಕಿ ಪ್ರತಿಭಟನೆ ನಡೆಸಿದ್ದಾನೆ. ನಾನು ಶಾಸಕರ ತವರು ಗ್ರಾಮ ಎಂದು ಬಹುಮಾನ ನಿರೀಕ್ಷೆ ಮಾಡುತ್ತಿಲ್ಲ. ನನ್ನ ಬಳಿ ಇರುವ 3.5 ಲಕ್ಷದ ನಾಲ್ಕು ಹಲ್ಲುಗಳ ವಿಭಾಗದ ಎತ್ತುಗಳು ಹೇಮಗಿರಿ ಮತ್ತು ಚುಂಚನಕಟ್ಟೆ ಜಾತ್ರೆಯಲ್ಲಿ ಪ್ರಥಮ ಬಹುಮಾನ ಪಡೆದು ಪ್ರಶಂಸೆಗೆ ಒಳ್ಳಪಟ್ಟಿತ್ತು. ಈ ಜಾತ್ರೆಯಲ್ಲಿ ನನಗೆ ಬಹುಮಾನ ತಪ್ಪಿಸಲು ಶಾಸಕರು ರಾಜಕಾರಣ ಮಾಡಿದ್ದಾರೆ. ಎತ್ತುಗಳ ಆಯ್ಕೆ ವಿಚಾರದಲ್ಲಿ ರಾಜಕಾರಣ ಮಾಡುವುದಿಲ್ಲ ಎಂದು ಶಾಸಕರು ಹೇಳಿದ್ದರು. ಆದರೆ ಈಗ ಬಹುಮಾನ ವಿಚಾರದಲ್ಲಿ ನನಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.
ಉತ್ತಮ ರಾಸುಗಳನ್ನು ಆಯ್ಕೆ ಮಾಡುವಾಗ ನೋಂದಣಿ ಮಾಡಿಕೊಂಡ ಹೆಸರುಗಳನ್ನು ಒಡೆದು ಹಾಕಿ ಮತ್ತೆ ಯಾರದೋ ಹೆಸರನ್ನು ನೋಂದಾಯಿಸಿ ತಿದ್ದಿ ಬಹುಮಾನ ವಿತರಣೆ ಮಾಡಲಾಗಿದೆ. ಶಾಸಕರು ಆಗಮಿಸಿ ನನಗೆ ನ್ಯಾಯ ಕೊಡಿಸಬೇಕು. ಉತ್ತಮ ರಾಸುಗಳನ್ನು ಆಯ್ಕೆ ಮಾಡಿದ ಪಶು ವೈದ್ಯರನ್ನು ಸ್ಥಳಕ್ಕೆ ಕರೆಯಿಸಿ ಮತ್ತೊಮ್ಮೆ ಪರೀಕ್ಷೆ ನಡೆಸಬೇಕು. ನಮ್ಮ ಎತ್ತುಗಳಿಗಿಂತ ಕಳಪೆ ಎತ್ತುಗಳಿಗೆ ಬಹುಮಾನ ನೀಡಿ ನಮ್ಮನ್ನು ವಂಚಿಸಲಾಗಿದೆ ಎಂದು ದೂರಿದರು. ಅಂತಿಮವಾಗಿ ಗ್ರಾಮದ ಹಿರಿಯರ ಮನವಿ ಮೇರೆಗೆ ಎತ್ತುಗಳನ್ನು ಕರೆದೊಯ್ಯಲಾಯಿತು.