ಶಾಸಕರ ಮನವಿಗೆ ಶ್ರೀಶೈಲ ಶ್ರೀ ಬೆಂಬಲ  -ಜಾತಿಗಣತಿ ವರದಿ ಅವೈಜ್ಞಾನಿಕ ಮತ್ತು ದುರುದ್ದೇಶದ್ದು - ಹಾಸ್ಟೆಲ್ ಉದ್ಘಾಟನಾ ಕಾರ್ಯಕ್ರಮ

dvg-hemaraddy-samaja-dec-16.jpg
Published on

ದಾವಣಗೆರೆ: ಅವೈಜ್ಞಾನಿಕ ಜಾತಿಗಣತಿ ವರದಿ ತಿರಸ್ಕರಿಸುವಂತೆ ಆಗ್ರಹಿಸಿ ಡಾ.ಶಾಮನೂರು ಶಿವಶಂಕರಪ್ಪ ಅವರ ನೇತೃತ್ವದಲ್ಲಿ ಶಾಸಕರು ಜಾತ್ಯತೀತವಾಗಿ ಮುಖ್ಯಮಂತ್ರಿಗೆ ಸಲ್ಲಿಸಿದ ಮನವಿಗೆ ತಾವೂ ಬೆಂಬಲಿಸುವುದಾಗಿ ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪ್ರಕಟಿಸಿದರು.

ನಗರದ ಜೆ.ಎಚ್.ಪಟೇಲ್ ಬಡಾವಣೆಯಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸಮಾಜದಿಂದ 2.25 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಬಾಲಕರ ವಿದ್ಯಾರ್ಥಿನಿಲಯ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಕಾಂತರಾಜು ಸಮಿತಿ ವರದಿ 10 ವರ್ಷ ಪೂರ್ಣಗೊಳಿಸದೆ ಎರಡು ವರ್ಷ ಬಾಕಿ ಇರುವಾಗಲೇ ಸಲ್ಲಿಕೆಯಾಗಿದೆ. ಈ ಅವೈಜ್ಞಾನಿಕ ವರದಿ ತಿರಸ್ಕರಿಸುವಂತೆ ಶಾಸಕರು ಸಲ್ಲಿಸಿದ ಮನವಿ ಯೋಗ್ಯವಾಗಿದೆ. ಇದನ್ನು ಮುಖ್ಯಮಂತ್ರಿಯವರು ಪರಿಗಣಿಸಬೇಕು. ಮುಂದಿನ ದಿನದಲ್ಲಿ ಅಗತ್ಯ ಬಿದ್ದಲ್ಲಿ ಯೋಗ್ಯ ಜನಗಣತಿ ತಯಾರಿಸಬೇಕೆಂದು ಆಗ್ರಹಿಸಿದರು.

ವರದಿ ದುರುದ್ದೇಶದಿಂದ ಆಗಿದೆ. ರಾಜ್ಯದಲ್ಲಿ 2 ಕೋಟಿಯಷ್ಟಿರುವ ವೀರಶೈವ ಸಮಾಜದ ಜನಸಂಖ್ಯೆಯನ್ನು ಕೇವಲ 60-70 ಲಕ್ಷಕ್ಕೆ ಸೀಮಿತಗೊಳಿಸಿದ್ದು ವಿಷಾಧನೀಯ ಮತ್ತು ಖಂಡನೀಯವಾಗಿದೆ. ಇದರ ವಿರುದ್ಧವಾಗಿ ಅಖಿಲ ಭಾರತ ವೀರಶೈವ ಮಹಾಸಭಾ ದೊಡ್ಡ ಹೆಜ್ಜೆ ಇರಿಸಿದೆ ಎಂದು ಹೇಳಿದರು.

*ಒಬಿಸಿ ಪಟ್ಟಿಗೆ ಒಳಪಂಗಡಗಳು ಸೇರಲಿ

ಒಳಪಂಗಡಗಳ ಹೆಸರಿನಿಂದ ಗುರುತಿಸಿಕೊಂಡರೂ ನಾವೆಲ್ಲರೂ ಅಖಂಡ ವೀರಶೈವ ಲಿಂಗಾಯತರು ಎಂಬುದನ್ನು ಮರೆಯಬಾರದು. ಈ ಧರ್ಮದ ಎಲ್ಲ ಒಳಪಂಗಡಗಳಿಗೂ ಸರ್ಕಾರ, ಏಕರೂಪದ ಮೀಸಲಾತಿ ಜಾರಿಗೊಳಿಸಿದರೆ ಸಮಾಜ ಒಗ್ಗಟ್ಟಾಗಿರಲಿದೆ.

ಸಮಾಜದ ಎಲ್ಲ ಒಳಪಂಗಡಗಳನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸುವ ಬಗ್ಗೆ ಅಖಿಲ ಭಾರತ ವೀರಶೈವ ಮಹಾಸಭಾದ 24ನೇ ಅಧಿವೇಶನದ ಮುಖ್ಯ ಅಜೆಂಡಾ ಆಗಲಿ. ಈ ಬಗ್ಗೆ ನಿರ್ಣಯ ಕೈಗೊಂಡು ರಾಜ್ಯ ಸರ್ಕಾರದಿಂದ ಶಿಫಾರಸು ಮಾಡಿಸಿ, ಕೇಂದ್ರ ಸರ್ಕಾರ ಆದೇಶ ಪಡೆಯುವ ನಿಟ್ಟಿನಲ್ಲಿ ಕಾರ್ಯತತ್ಪರರಾಗಬೇಕು. ವೀರಶೈವರ ದೊಡ್ಡ ಜಾತ್ರೆ ಎಂಬಂತೆ ಅಧಿವೇಶನ ನಡೆಯಲಿ ಎಂದೂ ಹಾರೈಸಿದರು.

ಹೇಮರಡ್ಡಿ ಮಲ್ಲಮ್ಮ ಸಮಾಜದ ನೂತನ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳನ್ನು ಕರೆತಂದು ಉತ್ತಮ ಶಿಕ್ಷಣ ಕಲ್ಪಿಸುವ ಸಂಕಲ್ಪದತ್ತ ಗಮನ ನೀಡಬೇಕು. ಸಂಖ್ಯಾಬಲ ಮಾತ್ರವಲ್ಲದೆ ಸುಶಿಕ್ಷಿತರು, ಪ್ರಜ್ಞಾವಂತರ ನಿರ್ಮಾಣದಿಂದಲೂ ಸಮಾಜ ಬೆಳೆಯಲಿದೆ ಎಂದು ತಿಳಿಸಿದರು.

ಬಾಳೆಹೊಸೂರಿನ ಪಕೀರ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ ಒಳಪಂಗಡಗಳಿಂದಾಗಿ ವೀರಶೈವ ಸಮಾಜ ಸಣ್ಣದಾಗುತ್ತಿದೆ. ನಾವೆಲ್ಲರೂ ಒಂದು ಎಂಬ ಮನೋಭಾವ ಬರಬೇಕು. ದಾವಣಗೆರೆಯ ವೀರಶೈವ ಮಹಾಧಿವೇಶನದತ್ತ ಸರ್ಕಾರ ಗಮನ ಹರಿಸುವಂತಾಗಲಿ ಎಂದು ಆಶಿಸಿದರು.

ವೀರಶೈವ ಸಮಾಜಕ್ಕೆ ಶಾಮನೂರು ಶಿವಶಂಕರಪ್ಪ ಮಹಾಭಾರತದ ಭೀಷ್ಮನಂತಿದ್ದಾರೆ. ಭೀಷ್ಮನ ಪ್ರತಿಜ್ಞೆಗಳು ಭಿನ್ನ. ವೀರಶೈವ ಲಿಂಗಾಯತ ಧರ್ಮದ ವಿಚಾರ ಬಂದಾಗ ತಮಗೆ ಸರ್ಕಾರ, ಪಕ್ಷಕ್ಕಿಂತಲೂ ಸಮಾಜ ಮುಖ್ಯ ಎಂದು ಹೇಳಿಕೆ ನೀಡಿದ್ದ ಎಸ್ಸೆಸ್ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿರುವುದು ಸಮಾಜಕ್ಕೂ ಆನೆಬಲವಾಗಿದೆ ಎಂದು ಹೇಳಿದರು.

ನಾಡಿನಲ್ಲಿ ಹಾಸ್ಟೆಲ್, ಅನ್ನದಾನಕ್ಕೆ ಸಮಾಜದ ಗಣ್ಯರು ದುಡಿಮೆ ಹಣ ನೀಡಿದರೆ ವಿವಿಧ ಮಠಾಧೀಶರು ಭಿಕ್ಷೆ ಬೇಡಿ ನೆರವು ನೀಡಿದ ಇತಿಹಾಸ ಕರ್ನಾಟಕದಲ್ಲಿದೆ. ವೀರಶೈವರ ಹಾಸ್ಟೆಲ್‌ಗಳಲ್ಲಿ ಲಿಂಗಾಯತರು ಮ್ತ್ರಾವಲ್ಲದೆ ಎಲ್ಲ ವರ್ಗದವರಿಗೂ ಅನ್ನ ನೀಡಿದವು. ಆದರೆ ಇಂದು ಎಲ್ಲ ಸಮಾಜಗಳು ನೌಕರಿ ಇತರೆ ಸೌಲಭ್ಯ ಪಡೆದಿದ್ದರೆ ವೀರಶೈವ ಸಮಾಜ ದುಃಖ ಅನುಭವಿಸುತ್ತಿದೆ ಎಂದು ಖೇದ ವ್ಯಕ್ತಪಡಿಸಿದರು.

ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮಾತನಾಡಿ ರಾಜ್ಯದಲ್ಲಿ 2 ಕೋಟಿ ವೀರಶೈವ ಲಿಂಗಾಯತರಿದ್ದಾರೆ. ಆದರೆ ಜಾತಿಗಣತಿಯಲ್ಲಿ ಕೇವಲ 70 ಲಕ್ಷ ತೋರಿಸಲಾಗಿದೆ. ಸಮಾಜಕ್ಕೆ ಅನ್ಯಾಯ ಆಗಲು ಬಿಡಬಾರದು ಎಂದರು.

ನಾವು ಒಳಪಂಗಡಗಳಿಂದ ಗುರುತಿಸಿಕೊಂಡಲ್ಲಿ ವೀರಶೈವ ಲಿಂಗಾಯತ ಸಮಾಜಕ್ಕೆ ನೆಲೆಯೇ ಇಲ್ಲದಂತಾಗಲಿದೆ. ಒಗ್ಗಟ್ಟಿನಲ್ಲಿ ಶಕ್ತಿ ಇದೆ. ಈ ಶಕ್ತಿ ಪ್ರದರ್ಶನ ಮಾಡಬೇಕಾದರೆ ಒಳಪಂಗಡಗಳ ಭಿನ್ನತೆ ಕೈಬಿಟ್ಟು ಪರಸ್ಪರ ವೈವಾಹಿಕ ಸಂಬಂಧ ಬೆಳೆಸಲು ಮುಂದಾಗಬೇಕು ಎಂದು ಆಶಿಸಿದರು.

ರೋಣ ಶಾಸಕ ಜಿ.ಎಸ್. ಪಾಟೀಲ್ ಮಾತನಾಡಿ ಸರ್ಕಾರದ ನೀತಿಯಿಂದಾಗಿ ವೀರಶೈವರ ಸಂಖ್ಯೆ ಕುಸಿಯತ್ತಿದೆ. ದೊಡ್ಡ ಸಮಾಜವನ್ನು ಒಡೆಯುವ ವ್ಯವಸ್ಥೆ ಹಿಂದಿನಿಂದಲೂ ಇದೆ. ಕೊಡುವ ಕೈಗಳಿಗೆ ಹೆಸರಾದ ವೀರಶೈವ ಸಮಾಜ ಎಂದಿಗೂ ಬೇಡಿಲ್ಲ, ಆದರೆ ಇಂದು ಸರ್ಕಾರದೆದುರು ಕೈ ಚಾಚುವ ಸ್ಥಿತಿಗೆ ಬಂದಿದೆ. ಸಮಾಜ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು ಎಂದರು.

ಹೇಮರಡ್ಡಿ ಮಲ್ಲಮ್ಮ ಸಮಾಜದ ರಾಜ್ಯಾಧ್ಯಕ್ಷ ಶೇಖರಗೌಡ ಮಾಲಿಪಾಟೀಲ್ ಮಾತನಾಡಿ ಜಾತಿಗಣತಿ ಅನ್ಯಾಯ ವಿರುದ್ಧದ ಹೋರಾಟಕ್ಕೆ ಸಮಾಜ ಬೆಂಬಲವಿದೆ ಎಂದರು.

ಕಾರ್ಯಕ್ರಮದಲ್ಲಿ ಸಮಾಜದ ಜಿಲ್ಲಾಧ್ಯಕ್ಷ ಡಾ. ಕೊಟ್ರೇಶ ಬಿದ್ರಿ, ಯುವ ವೇದಿಕೆ ಅಧ್ಯಕ್ಷ ಅನಿಲ್ ತಿಗ್ಗಿನೇರಿ, ಮುಖಂಡರಾದ ಕುಸುಮಾ ಲೋಕೇಶ್, ಆದಪ್ಪ, ಡಾ/ ಸುನಿಲ್ ಬ್ಯಾಡಗಿ, ಗಿರಿರಾಜರೆಡ್ಡಿ, ಜಿ.ಪಿ.ಪ್ರಭುಕುಮಾರ್, ಎಚ್.ಸಿ. ರೇವಣಸಿದ್ದಪ್ಪ, ಡಾ. ಜಿ.ಎಂ. ವಾಮದೇವ, ಹನುಮಂತರೆಡ್ಡಿ ಕಡ್ಲೆಗೊಂದಿ, ಜಿ.ಎಚ್. ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net