

ಶಿವು ತೂಬಗೆರೆ
ದೇವನಹಳ್ಳಿ ವಿಧಾನಸಭಾ ಕ್ಷೇತ್ರ ತೂಬಗೆರೆಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಾಯಕಲ್ಪಿ ಸಿಗುವ ನಿರೀಕ್ಷೆ ಗರಿಗೆದರಿದೆ.
ಶಿಥಿಲಾವಸ್ಥೆಯಲ್ಲಿರುವ ಕಟ್ಟಡ ಕೆಡವಿ ಸುಸಜ್ಜಿತ 24*7 ಹೈಟೆಕ್ ಆರೋಗ್ಯ ಕೇಂದ್ರದ ಜತೆಗೆ ಹೆರಿಗೆ ಆಸ್ಪತ್ರೆ ನಿರ್ಮಾಣಕ್ಕೆ ಆರೋಗ್ಯ ಸಚಿವ ಡಾ.ಸುಧಾಕರ್ ಅವರಿಂದ ಸರ್ಕಾರಕ್ಕೆ ಮನವಿ ಹೋಗಿದ್ದು, ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರ ಅವಿತರ ಪ್ರಯತ್ನಕ್ಕೆ ಲ ಸಿಗುವ ದಿನ ಹತ್ತಿರವಾಗಿದೆ. ಸರ್ಕಾರದ ಹಸಿರು ನಿಶಾನೆ ದೊರೆತರೆ ಶೀಘ್ರದಲ್ಲೇ ಹೋಬಳಿ ಜನರಿಗೆ ಉತ್ತಮ ಆರೋಗ್ಯ ಸೇವೆ ಸಿಗುವ ದಿನ ಸನಿಹವಾಗಲಿದೆ.
ತೂಬಗೆರೆಯಲ್ಲಿ ಈ ಹಿಂದಿನಿಂದಲೂ ಆರೋಗ್ಯ ಸೇವೆ ಬಗ್ಗೆ ಅಪಸ್ಪರ ಕೇಳಿಬರುತ್ತಲೇ ಇದೆ. ಪ್ರಸ್ತುತ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಹಳೆಯದಾಗಿದ್ದು, ಶಿಥಿಲಾವಸ್ಥೆ ತಲುಪಿದೆ. ಈ ಬಗ್ಗೆ ಶಾಸಕ ನಿಸರ್ಗ ನಾರಾಯಣಸ್ವಾಮಿ ಅನೇಕ ಬಾರಿ ಸರ್ಕಾರದ ಬಾಗಿಲು ತಟ್ಟುತ್ತಲೇ ಬಂದಿದ್ದಾರೆ. ಇತ್ತೀಚಿಗೆ ಜಿಲ್ಲೆಗೆ ಭೇಟಿ ನೀಡಿದ್ದ ಆರೋಗ್ಯ ಸಚಿವ ಡಾ.ಸುಧಾಕರ್ ಅವರ ಗಮನಕ್ಕೂ ತಂದು ಶಾಸಕರು ಒತ್ತಡ ಹೇರಿದ್ದರು. ಈ ಬಗ್ಗೆ ಆರೋಗ್ಯ ಸಚಿವರು ಸಕಾರಾತ್ಮವಾಗಿ ಸ್ಪಂದಿಸಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆಯುವ ಮೂಲಕ ಈ ಭಾಗದ ಜನರ ಬಹುದಿನದ ಬೇಡಿಕೆಗೆ ಜೀವ ಬಂದಂತಾಗಿದೆ.
ಸೋರುತಿಹುದು ಮಾಳಿಗೆ: ಇತ್ತೀಚಿಗೆ ಸುಣ್ಣಬಣ್ಣ ಬಳಿದು ಕೆಲವೊಂದು ನವೀಕರಣ ಕಾಮಗಾರಿ ನಡೆದಿದ್ದರೂ ಆಸ್ಪತ್ರೆ ಕಟ್ಟಡ ಮಳೆಗಾಲದಲ್ಲಿ ಸೋರುವುದು ನಿಂತಿಲ್ಲ. ಕಿಟಿಕಿ ಬಾಗಿಲುಗಳೂ ಹಾಳಾಗಿವೆ, ವೈದ್ಯಕೀಯ ಉಪಕರಣ, ಶೌಚಗೃಹ ಮತ್ತಿತರ ಅಗತ್ಯ ವಸ್ತುಗಳು ಹಾಳಾಗಿದ್ದು, ವೈದ್ಯಕೀಯ ಸಿಬ್ಬಂದಿಗೂ ತಲೆನೋವು ತರಿಸಿದೆ. ಆಸ್ಪತ್ರೆಗೆ ಬರಲು ಸಾರ್ವಜನಿಕರು ಇರಿಸುಮುರಿಸು ಅನುಭವಿಸುವಂತಾಗಿದೆ.
ಸಿಬ್ಬಂದಿ ಕೊರತೆ: ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಮಹಿಳಾ ವೈದ್ಯೆ, ಒಬ್ಬರು ಹೆಲ್ತ್‌ಕೇರ್ ವರ್ಕರ್, ಮತ್ತೊಬ್ಬರು ಆರೋಗ್ಯ ಸಹಾಯಕಿ ಮಾತ್ರ ಕರ್ತವ್ಯದಲ್ಲಿದ್ದು, ಆರೋಗ್ಯ ಸೇವೆ ನೀಡುವುದು ಕಷ್ಟಸಾಧ್ಯ ಎಂಬ ಪರಿಸ್ಥಿತಿ ಇದೆ. ಅಲ್ಲದೆ ಸಂಜೆ ಬಳಿಕ ವೈದ್ಯರೂ ಲಭ್ಯವಿಲ್ಲದ ಕಾರಣ ರಾತ್ರಿ ವೇಳೆ ತುರ್ತು ಆರೋಗ್ಯ ಪರಿಸ್ಥಿತಿಯಲ್ಲಿ ರೋಗಿಗಳ ಪಾಡು ಕೇಳುವವರಿಲ್ಲದಂತಾಗಿದೆ. ಪ್ರಸ್ತುತ ಸಾಮಾನ್ಯ ಹೆರಿಗೆಯಷ್ಟೇ ನಡೆಯುತ್ತಿದ್ದು, ಶಸಚಿಕಿತ್ಸೆ ಅವಶ್ಯಕತೆ ಇದ್ದರೆ ದೊಡ್ಡಬಳ್ಳಾಪುರಕ್ಕೆ ಹೋಗುವುದು ಅನಿವಾರ್ಯವಾಗಿದೆ. ಅಲ್ಲದೆ ಆರೋಗ್ಯ ಕೇಂದ್ರಕ್ಕೆ ಸಂಬಂಧಪಟ್ಟಂತೆ ಒಂದೂ ಆಂಬುಲೆನ್ಸ್ ಇಲ್ಲದಿರುವುದರಿಂದ ತುರ್ತು ಪರಿಸ್ಥಿತಿಯಲ್ಲಿ ರೋಗಿಗಳ ಪ್ರಾಣಕ್ಕೆ ಸಂಚಾಕಾರದ ಸಾಧ್ಯತೆ ಇದೆ. ಈ ಎಲ್ಲ ಕಾರಣದಿಂದ ಈ ಭಾಗದಲ್ಲಿ ಸುಸಜ್ಜಿತ ಆರೋಗ್ಯ ಕೇಂದ್ರ ನಿರ್ಮಾಣವಾಗಬೇಕೆಂದು ಸಾರ್ವಜನಿಕರು ಈ ಹಿಂದಿನಿಂದಲೂ ಒತ್ತಡ ಹೇರುತ್ತಲೇ ಬಂದಿದ್ದಾರೆ.
ತೂಬಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಶಿಥಿಲವಾಗಿದೆ. ಈ ಬಗ್ಗೆ ಈ ಹಿಂದಿನಿಂದಲೂ ಸರ್ಕಾರದ ಮೇಲೆ ಒತ್ತಡ ಹೇರುತ್ತಲೇ ಬಂದಿದ್ದೇನೆ, ಇತ್ತೀಚಿಗೆ ಆರೋಗ್ಯ ಸಚಿವರು ಮನವಿಗೆ ಸ್ಪಂದಿಸಿದ್ದು, ಶೀಘ್ರದಲ್ಲೇ ಉತ್ತಮ ಆಸ್ಪತ್ರೆ ಕಟ್ಟಡಕ್ಕೆ ಅನುಮೋದನೆ ದೊರಕುವ ಭರವಸೆ ವ್ಯಕ್ತವಾಗಿದೆ. ತೂಬಗೆರೆ ವ್ಯಾಪ್ತಿಯ ಜನರ ಬಹುದಿನದ ಬೇಡಿಕೆ ಈಡೇರುವ ದಿನ ಹತ್ತಿರವಾಗಿದೆ. ನಿಸರ್ಗ ನಾರಾಯಣಸ್ವಾಮಿ, ದೇವನಹಳ್ಳಿ ಶಾಸಕ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ಸಿಬ್ಬಂದಿ ಕೊರತೆ ಇದ್ದು, ಇರುವ ಸಿಬ್ಬಂದಿಯಿಂದಲೇ ಆರೋಗ್ಯ ಸೇವೆ ನೀಡಲು ಶ್ರಮಿಸಲಾಗುತ್ತಿದೆ. ಓರ್ವ ಆರೋಗ್ಯ ಸಹಾಯಕಿ, ಹೆಲ್ತ್‌ಕೇರ್ ವರ್ಕರ್ ಸೇರಿ ಒಟ್ಟು ನಾಲ್ವರು ಸಿಬ್ಬಂದಿಯನ್ನು ನಿಯೋಜಿಸಿದರೆ ಮತ್ತಷ್ಟು ಉತ್ತಮವಾಗಿ ಸೇವೆ ಸಲ್ಲಿಸಲು ಸಹಕಾರಿಯಾಗಲಿದೆ. ಡಾ.ಪೂರ್ಣಿಮಾ, ವೈದ್ಯೆ ಪ್ರಾಥಮಿಕ ಆರೋಗ್ಯ ಕೇಂದ್ರ ತೂಬಗೆರೆ