ಶಾಸಕರ ಪಾದಯಾತ್ರೆ ಸಂಬಂಧ ಸದಸ್ಯರ ವಾಗ್ವಾದ

30blrp1
Published on

ಬೇಲೂರು: ಪಟ್ಟಣ ಪುರಸಭೆಯ ವಿಶೇಷ ಸಭೆಯಲ್ಲಿ ಶಾಸಕ ಕೆ.ಎಸ್.ಲಿಂಗೇಶ್ ವಾರ್ಡ್‌ಗಳ ಪಾದಯಾತ್ರೆ ಮೂಲಕ ಕೈಗೊಂಡಿದ್ದ ಅಭಿವೃದ್ಧಿ ಕಾರ್ಯ ಸಂಬಂಧ ಕಾಂಗ್ರೆಸ್ ಸದಸ್ಯ ಶಾಂತಕುಮಾರ್ ಆರೋಪಕ್ಕೆ ಜೆಡಿಎಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರಿಂದ ಮಾತಿನ ಚಕಮಕಿ ಏರ್ಪಟ್ಟು ಸಭೆ ಗೊಂದಲದ ಗೂಡಾಯಿತು.


ಅಧ್ಯಕ್ಷ ಸಿ.ಎನ್.ದಾನಿ ಅಧ್ಯಕ್ಷತೆಯಲ್ಲಿ ವೇಲಾಪುರಿ ಸಭಾಂಗಣದಲ್ಲಿ ಶುಕ್ರವಾರ ವಿಶೇಷ ಸಭೆ ಆಯೋಜಿಸಲಾಗಿತ್ತು. ಆರಂಭದಲ್ಲೇ ಜಿ.ಶಾಂತಕುಮಾರ್ ಮಾತನಾಡಿ, ಶಾಸಕರು ವಾರದ ಹಿಂದೆ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಪಾದಯಾತ್ರೆ ನಡೆಸಿದ ಸಂದರ್ಭ ನಮ್ಮ ವಾರ್ಡ್‌ನಲ್ಲಿ ಸೋತ ಅಭ್ಯರ್ಥಿ ಜತೆ ಪಾದಯಾತ್ರೆ ನಡೆಸಿದ್ದಾರೆ. ಚುನಾಯಿತ ಸದಸ್ಯನಿಗೆ ಆಹ್ವಾನ ನೀಡದೆ, ಕಾಟಾಚಾರಕ್ಕೆ ಫೋನ್ ಮಾಡಿ ಕರೆಯುತ್ತಾರೆ. ಈ ಬಗ್ಗೆ ಮುಖ್ಯಾಧಿಕಾರಿ ವಿರುದ್ಧ ಸಂಬಂಧಿಸಿದ ಅಧಿಕಾರಿಗೆ ದೂರು ನೀಡುತ್ತೇನೆ. ಮುಖ್ಯಾಧಿಕಾರಿ ಪಕ್ಷಪಾತ ಮಾಡದೆ ಕರ್ತವ್ಯ ನಿರ್ವಹಿಸಬೇಕು. ಇದರಿಂದಾಗಿ ವಾರ್ಡ್ ಸದಸ್ಯರಿಗೆ ಬೆಲೆ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.


ಈ ಹೇಳಿಕೆಯಿಂದ ಸಿಡಿಮಿಡಿಗೊಂಡ ಜೆಡಿಎಸ್ ಸದಸ್ಯರಾದ ಶ್ರೀನಿವಾಸ್ ಹಾಗೂ ಜಗದೀಶ್, ಶಾಸಕರು ಪುರಸಭೆ ವ್ಯಾಪ್ತಿಯಲ್ಲಿ ವಾರ್ಡ್ ಸಭೆ ನಡೆಸಬಾರದು ಅಂತ ಆದೇಶ ಇದೆಯಾ? ಕೆಲ ಸದಸ್ಯರು ಪುರಸಭೆಯನ್ನು ಕಾಂಗ್ರೆಸ್‌ಗೆ ಸೀಮಿತ ಮಾಡಿಕೊಂಡಿದ್ದಾರೆ. ಅಲ್ಲದೆ ವಿಧಾನ ಪರಿಷತ್ ಸದಸ್ಯ ಮಧು ಮಾದೇಗೌಡರ ಅಭಿನಂದನಾ ಕಾರ್ಯಕ್ರಮಕ್ಕೆ ನಮ್ಮನ್ನು ಏಕೆ ಕರೆಯಲಿಲ್ಲ? ಶಾಸಕ ಕೆ.ಎಸ್.ಲಿಂಗೇಶ್ ಅವರು ಪಟ್ಟಣದ ಅಭಿವೃದ್ಧಿಗೆ ಸಾಕಷ್ಟು ಅನುದಾನ ತಂದಿದ್ದಾರೆ. ಅವರ ವಿರುದ್ಧ ಏಕೆ ಆರೋಪ ಮಾಡುತ್ತೀರಾ ಎಂದು ಕಾಂಗ್ರೆಸ್ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಕಾಂಗ್ರೆಸ್ ಸದಸ್ಯರಾದ ಜಮಾಲೂದ್ದೀನ್, ಶಾಂತಕುಮಾರ್ ಹಾಗೂ ಎ.ಆರ್.ಅಶೋಕ್ ಮಧ್ಯಪ್ರವೇಶಿಸಿದ್ದರಿಂದ ಮಾತಿನ ಚಕಮಕಿ ನಡೆಯಿತು.


ಮದ್ಯೆ ಪ್ರವೇಶಿಸಿದ ಅಧ್ಯಕ್ಷ ಸಿ.ಎನ್.ದಾನಿ, ಜೆಡಿಎಸ್ ಸದಸ್ಯರನ್ನು ಗದರಿಸಿದರು. ಇದರಿಂದ ಬೇಸತ್ತ ನಾಮನಿರ್ದೇಶನ ಸದಸ್ಯ ಪೈಂಟ್ ರವಿ, ಅಧ್ಯಕ್ಷರು ಸದಸ್ಯರಿಗೆ ಏಕವಚನ ಪ್ರಯೋಗ ಮಾಡುವುದು ಸರಿಯಲ್ಲ. ಜೆಡಿಎಸ್ ಮತ್ತು ಕಾಂಗ್ರೆಸ್ ಸದಸ್ಯರ ಮಾತಿನ ಸಮರದಿಂದ ಸಭೆಯಲ್ಲಿ ವಿಷಯ ಚರ್ಚಿಸಲು ಸಾಧ್ಯವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮತ್ತೆ ಅಧ್ಯಕ್ಷರು ಮದ್ಯೆ ಪ್ರವೇಶಿಸಿ ಎಲ್ಲರನ್ನೂ ಸಮಧಾನಪಡಿಸಿ ಸಭೆ ಮುಂದುವರಿಸಿದರು.
ಕಾಂಗ್ರೆಸ್ ಸದಸ್ಯ ಆಶೋಕ್ ಮಾತನಾಡಿ, ಕಳೆದ ನಾಲ್ಕು ವರ್ಷ ಪುರಸಭೆಯ ವಾರ್ಡ್‌ಗಳು ಶಾಸಕರಿಗೆ ನೆನಪು ಬಂದಿಲ್ಲ. ಈಗ ಚುನಾವಣೆ ಸಮೀಪವಿರುವ ಕಾರಣ ಪಾದಯಾತ್ರೆ ನಡೆಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.


ಅಧ್ಯಕ್ಷ ಸಿ.ಎನ್.ದಾನಿ ಮಾತನಾಡಿ, ಬೇಲೂರು ಪುರಸಭೆಗೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅರ್ಥಪೂರ್ಣ ಹಾಗೂ ಸರಳವಾಗಿ ಶತಮಾನೋತ್ಸವ ಕಾರ್ಯಕ್ರಮ ಆಚರಿಸಬೇಕಿದೆ. ಕಾರ್ಯಕ್ರಮದಲ್ಲಿ ಈ ಹಿಂದಿನ ಅಧ್ಯಕ್ಷರಿಗೆ ಸನ್ಮಾನ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸುವುದಕ್ಕೆ ಸದಸ್ಯರು ಸಲಹೆ ಸಮ್ಮತಿ ನೀಡಬೇಕು ಎಂದರು.
ಬಿಜೆಪಿ ಸದಸ್ಯ ಪ್ರಭಾಕರ್ ಮಾತನಾಡಿ, ಕಾರ್ಯಕ್ರಮಕ್ಕೆ ಪೌರಾಡಳಿತ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರನ್ನು ಕರೆಸಬೇಕು. ಈ ಬಗ್ಗೆ ಅಧ್ಯಕ್ಷರಿಗೆ ತಿಳಿಸಿದ್ದೆವು. ಆದರೆ ತರಾತುರಿಯಲ್ಲಿ ಕಾರ್ಯಕ್ರಮ ಮಾಡಲು ಮುಂದಾಗಿರುವುದು ಸರಿಯಲ್ಲ. ಸಚಿವರ ಡೇಟ್ ಪಡೆದು ಕಾರ್ಯಕ್ರಮ ಮಾಡೋಣ ಎಂದು ಸಲಹೆ ನೀಡಿದರು.


ಚನ್ನಕೇಶವಸ್ವಾಮಿ ದೇಗುಲದ ಆವರಣದಲ್ಲಿ ಅವೈಜ್ಞಾನಿಕ ವಾಹನಗಳ ಪಾಕಿರ್ಂಗ್, ದೇಗುಲದ ಸುತ್ತ ಅಶುಚಿತ್ವ, ಶೌಚಗೃಹಕ್ಕಾಗಿ ಭಕ್ತರು ಹಾಗೂ ಪ್ರವಾಸಿಗರ ಪರದಾಟ ಸೇರಿದಂತೆ ಹತ್ತಾರು ಸಮಸ್ಯೆಗಳಿದ್ದರೂ ದೇಗುಲ ಆಡಳಿತ ಮಂಡಳಿ ಮೌನ ವಹಿಸಿದೆ. ಅಲ್ಲದೆ ಸಂತೆಯಿಂದ ಜನರಿಗೆ ಕಿರಿಕಿರಿ ಉಂಟಾಗಿದೆ. ಸಮಸ್ಯೆ ಬಗೆಹರಿಸಬೇಕು, ಇಲ್ಲವಾದರೆ ದೇಗುಲ ಸಮಿತಿ ವಿರುದ್ಧ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಅಶೋಕ್, ಜಿ.ಶಾಂತಕುಮಾರ್ ಸೇರಿದಂತೆ ಕೆಲ ಸದಸ್ಯರು ಎಚ್ಚರಿಸಿದರು. ಉಪಾಧ್ಯಕ್ಷೆ ಉಷಾ, ಮುಖ್ಯಾಧಿಕಾರಿ ಸುಜಯ್ ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net