ಶಾಸಕರ ನೇತೃತ್ವದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣಗೊಳಿಸಿ

bir ppp
ಬೀರೂರಿನ ಪುರಸಭೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಅಧ್ಯಕ್ಷೆ ಭಾಗ್ಯಲಕ್ಷ್ಮೀ, ಜಿ.ಪ್ರಕಾಶ್, ಎನ್.ಎಂ.ನಾಗರಾಜ್, ವನಿತಾ ಮಧು ಬಾವಿಮನೆ, ಮೋಹನ್‌ಕುಮಾರ್, ಲೋಕೇಶಪ್ಪ ಇತರರಿದ್ದರು.
Published on

ಬೀರೂರು: ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನಾ ಸಮಿತಿ ಬೇರೊಂದು ಸದಸ್ಯರ ಸಮಿತಿ ರಚನೆ ಮಾಡುವ ಬದಲು ಪುರಸಭೆ ಹಾಗೂ ಶಾಸಕರ ನೇತೃತ್ವದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಆಗಬೇಕು ಎಂದು ಪುರಸಭೆ ಸದಸ್ಯ ಬಿ.ಕೆ.ಶಶಿಧರ್ ಒತ್ತಾಯಿಸಿದರು.

ಪುರಸಭೆಯಲ್ಲಿ ಮಂಗಳವಾರ ಅಧ್ಯಕ್ಷೆ ಭಾಗ್ಯಲಕ್ಷ್ಮೀ ಮೋಹನ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಪುರಸಭೆಯಿಂದ ಜಾಗ ಗುರುತಿಸಿ, ಅನುದಾನ ನೀಡಿ ಬೇರೆ ಯಾರೋ ಸಮಿತಿ ರಚಿಸಿಕೊಂಡಿರುವುದು ಸಮಾಜದಲ್ಲಿ ಗೊಂದಲ ಸೃಷ್ಟಿಯಾಗಿದ್ದು, ಸಮುದಾಯಗಳಲ್ಲಿ ಒಡಕು ಮೂಡುತ್ತಿದೆ. ಆದ್ದರಿಂದ ಪುರಸಭೆ ಅಧ್ಯಕ್ಷರ ಅಧ್ಯಕ್ಷತೆ, ಶಾಸಕರ ಗೌರವಾಧ್ಯಕ್ಷತೆ ಹಾಗೂ ಸರ್ವ ಸದಸ್ಯರ ಸಮಿತಿಯೊಂದಿಗೆ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆ ಅನಾವರಣ ಆಗಬೇಕು ಎಂದು ಒತ್ತಾಯಿಸಿದರು.

ಸಭೆಯ ಆರಂಭಕ್ಕೂ ಮುನ್ನ ಸದಸ್ಯರ ಮಾಹಿತಿ ಪಡೆಯದೆ ಸಭೆ ಕರೆದಿರುವುದು ಏಕೆ? ಮಾಹಿತಿ ನೀಡಿದ್ದರೆ ನಮ್ಮ ವಾರ್ಡ್‌ಗಳ ಸಮಸ್ಯೆಯನ್ನು ಅಜೆಂಡಾಗೆ ಸೇರಿಸಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬಹುದಿತ್ತು ಎಂದು ಅಧ್ಯಕ್ಷೆ ಮತ್ತು ಮುಖ್ಯಾಧಿಕಾರಿ ವಿರುದ್ಧ ಸದಸ್ಯರೆಲ್ಲರೂ ಕಿಡಿಕಾರಿದರು.

ಸ್ಥಾಯಿ ಸಮಿತಿ ಅಧ್ಯಕ್ಷರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಮರು ಆಯ್ಕೆಗೆ ಚರ್ಚೆ ಮಾಡಲು ಈ ಸಭೆ ಕರೆಯಲಾಗಿದೆ ಎಂದು ಅಧ್ಯಕ್ಷೆ ಭಾಗ್ಯಲಕ್ಷ್ಮೀ ತಿಳಿಸಿ ಸಮಾಧಾನಪಡಿಸಿದರು.

ಎಂ.ಪಿ.ಸುದರ್ಶನ್ ಮಾತನಾಡಿ, ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಅರ್ಜಿ ಕರೆದಿರುವುದು ಸೂರು ರಹಿತರು ಎಷ್ಟಿದ್ದಾರೆ ಎನ್ನುವ ಸಮೀಕ್ಷೆಗಾಗಿಯೋ ಅಥವಾ ಅರ್ಜಿ ಸಲ್ಲಿಸಿದವರೆಲ್ಲರಿಗೂ ನಿವೇಶನ ನೀಡುವ ಉದ್ದೇಶವೋ ಎಂದು ಮುಖ್ಯಾಧಿಕಾರಿಯನ್ನು ಪ್ರಶ್ನಿಸಿದರು. ಒಂದೇ ಪುರಸಭೆ ನಿವೇಶನವಿದ್ದಲ್ಲಿ 4 ಅರ್ಜಿ ಸ್ವೀಕರಿಸಿ ಹೇಗೆ ನಿವೇಶನ ನೀಡಲು ಸಾಧ್ಯ? ಇ-ಸ್ವತ್ತು ನೀಡುವಾಗ ಖಾತೆ ಪುಸ್ತಕದಲ್ಲಿ ವಿವರ ದಾಖಲು ಮಾಡುವ ಜವಾಬ್ದಾರಿ ಯಾರದು? ಅಕ್ರಮವಾಗಿ ಖಾತೆ ದಾಖಲು ಮಾಡುತ್ತಿರುವ ಬಗ್ಗೆ ದೂರು ಹೆಚ್ಚು ಕೇಳಿಬರುತ್ತಿವೆ. ಮುಂದಿನ ದಿನಗಳಲ್ಲಿ ಮುಖ್ಯಾಧಿಕಾರಿಗಳು ಉತ್ತರ ನೀಡಬೇಕಾಗುತ್ತದೆ ಎಂದು ಹೇಳಿದರು.

ಮುಖ್ಯಾಧಿಕಾರಿ ಜಿ.ಪ್ರಕಾಶ್ ಪ್ರತಿಕ್ರಿಯಿಸಿ, ಈಗ ನಡೆಯುತ್ತಿರುವುದು ಸಮೀಕ್ಷೆ ಮಾತ್ರ. ಯಾರಿಗೋ ನಿವೇಶನ ನೀಡುತ್ತೇವೆ ಎಂದಲ್ಲ. ಇದೊಂದು ಡಿಮಾಂಡ್ ಸರ್ವೇ ಆಗಿದೆ. ಇದರಲ್ಲಿ ಸೂರು ರಹಿತರನ್ನು ಪಟ್ಟಿ ಮಾಡಲಾಗುತ್ತಿದೆ. ನಮ್ಮ ಅಧಿಕಾರಿಗಳ ನಿರ್ಲಕ್ಷ್ಯದಿಂದ ಖಾತೆ ಪುಸ್ತಕಕ್ಕೆ ಖಾತೆ ದಾಖಲು ಮಾಡದೆ ಇರುವ ಬಗ್ಗೆ ನೋಟೀಸ್ ಜಾರಿ ಮಾಡಲಾಗಿದೆ ಎಂದು ಹೇಳಿದರು.

ಮಲ್ಲಿಕಾರ್ಜುನ್ ಮಾತನಾಡಿ, ಶಾಸಕರ ಅಧ್ಯಕ್ಷತೆಯಲ್ಲಿ ನಡೆದಿರುವ ಆಶ್ರಯ ಸಮಿತಿ ಸಭೆಯ ಅನುಸಾರ ಸರ್ವೇ ನಡೆಸುವ ಸಂದರ್ಭದಲ್ಲಿ ಪುರಸಭೆ ಸದಸ್ಯರು, ನಾಮಿನಿ ಹಾಗೂ ಆಶ್ರಯ ಸದಸ್ಯರನ್ನು ಅಧಿಕಾರಿಗಳು ವಿಶ್ವಾಸಕ್ಕೆ ಪಡೆದು ಜತೆಯಲ್ಲೇ ಸರ್ವೇ ನಡೆಸಬೇಕೆಂದು ಸಲಹೆ ನೀಡಿದರು.

ಪಟ್ಟಣ ವ್ಯಾಪ್ತಿಯಲ್ಲಿ ನಾಯಿಗಳು ಜನರ ಮೇಲೆರಗುತ್ತಿವೆ. ನಾಯಿಗಳ ಹಾವಳಿ ತಡೆಗೆ ಪುರಸಭೆ ಕ್ರಮಕೈಗೊಳ್ಳಬೇಕು ಎಂದು ಜ್ಯೋತಿ ಆಗ್ರಹಿಸಿದರು. ಇದಕ್ಕೆ ಶಾರದಾ ರುದ್ರಪ್ಪ ಮತ್ತು ಸಹನಾ ದನಿಗೂಡಿಸಿದರು. ಪರಿಸರ ಅಭಿಯಂತರ ನೂರುದ್ದೀನ್ ಮಾತನಾಡಿ, ನಾಯಿಗಳನ್ನು ಕೊಲ್ಲುವಂತಿಲ್ಲ. ಅವುಗಳನ್ನು ಹಿಡಿದು ಸಂತಾನಶಕ್ತಿ ಹರಣ ಚಿಕಿತ್ಸೆ ಮಾಡಬೇಕೆಂಬ ನ್ಯಾಯಾಲಯದ ಆದೇಶವಿದೆ ಎಂದರು. 5 ಜನ ಕಮ್ಯುನಿಟಿ ಮೊಬಲೈಸರ್ ನೇಮಕದ ಕುರಿತು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net